ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಕಂದಾಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸಗಳು ಆಗದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಹಸೀಲ್ದಾರ್ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕುಮಾರ, ಕಂದಾಯ ಇಲಾಖೆಯಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮರ್ಪಕವಾಗಿ ಕೆಲಸ ಮಾಡದಿದ್ದರೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ತಹಸೀಲ್ದಾರ್ ಲೋಕೇಶ್ ಅವರನ್ನು ಪ್ರಶ್ನಿಸಿದರು.
ಸರ್ಕಾರದ ವೇತನ ಪಡೆದು ಸಾರ್ವಜನಿಕರ ಕೆಲಸ ಮಾಡದೇ ಕಾಲಹರಣ ಮಾಡುವ ಅಧಿಕಾರಿಗಳು ಅನ್ನ ಕೊಡುವ ಇಲಾಖೆಗೆ ದ್ರೋಹ, ತಂದೆ ತಾಯಿಗೂ ಮೋಸ ಮಾಡಿದಂತೆ. ಏನು ಬೇಕಾದರೂ ಮಾಡಬಹುದು ಇಲ್ಲಿ ಹೇಳುವವರು ಕೇಳುವವರು ಯಾರು ಇಲ್ಲ, ನಮಗೆ ತಿಂಗಳಿಗೆ ಸರಿಯಾಗ ಸಂಬಳ ಬರುತ್ತದೆ ಎಂಬ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.ನಿಮ್ಮ ಕೆಲಸದ ಬಗ್ಗೆ ಆನ್‌ಲೈನ್ ಮೂಲಕ ಪ್ರತಿವಾರ ಮಾಹಿತಿ ಪಡೆಯುತ್ತೇನೆ. ನೀವು ಸರಿಯಾಗಿ ಕೆಲಸ ಮಾಡದ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿದೆ. ಆರ್‌ಟಿಸಿ ಬದಲಾವಣೆ, ಸರ್ಕಾರಿ ಜಮೀನು ರಕ್ಷಣೆ, ಅರ್ಜಿ ಸ್ವೀಕಾರ ನೋಂದಣಿ ಸೇರಿದಂತೆ ಕಂದಾಯ ಇಲಾಖೆಯ ಕೆಲಸಗಳು ಮಂಡ್ಯ ಜಿಲ್ಲೆಯಲ್ಲಿಯೇ ಮಳವಳ್ಳಿ ತಾಲೂಕು ಕಡಿಮೆ ಕಂಡು ಬಂದಿರುವ ಬಗ್ಗೆ ಎಚ್ಚರಿಸಲಾಗುತ್ತಿದೆ ಎಂದರು.
ಕಂದಾಯ ಇಲಾಖೆ ಕೆಲಸಗಳು ಸಮರ್ಪಕವಾಗಿ ನಡೆಯಬೇಕು. ಇದರಲ್ಲಿ ನನಗೆಷ್ಟು ಜವಾಬ್ದಾರಿ ಇದ್ದಿಯೋ ಅಷ್ಟು ಪ್ರತಿಯೊಬ್ಬ ಅಧಿಕಾರಿಗೂ ಇದೆ. ಇಲಾಖೆಯಲ್ಲಿ ತಮಗೆ ಕೊಟ್ಟಿರುವ ಕೆಲಸವನ್ನು ನಿಷ್ಠೆ ಹಾಗೂ ಕಾಳಜಿಯಿಂದ ಮನಸ್ಥಿತಿ ಕಾಣುತ್ತಿಲ್ಲ. ಮಳವಳ್ಳಿ ತಾಲೂಕಿನ ಅಧಿಕಾರಿಗಳು ಕೇವಲ ಒಂದು ವಿಷಯದಲ್ಲಾದರೂ ಉತ್ತಮ ಕೆಲಸ ನಿರ್ವಹಿಸಿಲ್ಲ. ಪ್ರತಿವಾರ ನಡೆಸುವ ವಿಡಿಯೋ ಕಾನ್ಪರೇನ್ಸ್ ನಲ್ಲಿ ಎಷ್ಟೇ ಎಚ್ಚರಿಕೆ ನೀಡಿದರೂ ಪ್ರಗತಿ ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೆಲಸದಲ್ಲಿ ಇದೇ ರೀತಿ ಮುಂದುವರೆದರೇ ವೇತನ, ಬಡ್ತಿಯನ್ನು ಕಡಿತಗೊಳಿಸಲಾಗುವುದು, ಯಾರು ಕೆಲಸ ಮಾಡುತ್ತಿಲ್ಲ ಎನ್ನುವುದರ ಬಗ್ಗೆ ಪ್ರತಿವಾರ ಮಾಹಿತಿ ನೀಡಬೇಕೆಂದು ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿನ ಗ್ರಾಪಂ ಕಚೇರಿ ಕಟ್ಟಡದಲ್ಲಿ ಕೆಲಸ ಮಾಡಬೇಕು. ಬಾಡಿಗೆ ಮನೆ ಪಡೆದು ತಮಗಿಷ್ಟ ಬಂದಂತೆ ನಡೆದುಕೊಂಡರೇ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಾಕೀತು ಮಾಡಿದರು.
ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಗಳಲ್ಲಿ ಸರ್ವೇ ನಡೆಸಿ ಇ ಪೋತಿ ಖಾತೆ ಮಾಡಿಸಬೇಕು. ಮರಣ ಹೊಂದಿರುವವರ ಹೆಸರಿನಲ್ಲಿ ಖಾತೆ ಇರದಂತೆ ಕ್ರಮ ಕೈಗೊಳ್ಳಬೇಕು. ಮುಜರಾಯಿ ಇಲಾಖೆಗೆ ಸೇರಿದ ಸರ್ಕಾರಿ ಭೂಮಿ ರಕ್ಷಿಸಿ ಒತ್ತುವರಿ ತೆರವುಗೊಳಿಸಬೇಕು. ಆರ್‌ಟಿಸಿಯಲ್ಲಿ ಸರ್ಕಾರಿ ಭೂಮಿ ಎಂದು ನಮೂದಿಸಬೇಕು. ಜಮೀನುಗಳನ್ನು ಪೋಡಿ ಮಾಡಿ ಪೋಡಿ ಮುಕ್ತ ಗ್ರಾಮವನ್ನಾಗಿಸಿ ರೈತರಿಗೆ ಅನುಕೂಲಮಾಡಿಕೊಡಬೇಕೆಂದು ಸಲಹೆ ನೀಡಿದರು.ತಹಸೀಲ್ದಾರ್‌ಗೆ ತರಾಟೆ:
ಜಿಲ್ಲೆಯಲ್ಲೇ ಮಳವಳ್ಳಿ ತಾಲೂಕಿನಲ್ಲಿ ಬಾಕಿ ಕಡತಗಳು ಹೆಚ್ಚಾಗಿವೆ. ವಿಲೇವಾರಿ ಮಾಡಿಲ್ಲ. ಸರ್ಕಾರದ ಸುತ್ತೋಲೆ ಮಾಹಿತಿಯನ್ನು ತಹಸೀಲ್ದಾರ್ ಆಗಿ ಓದುವಷ್ಟು ಸೌಜನ್ಯ ತೋರಿಲ್ಲ. ಇನ್ನು ಕೆಳ ಹಂತದ ಅಧಿಕಾರಿಗಳ ಗಮನಕ್ಕೂ ತರದಿರುವುದು ನಿಮ್ಮ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಆನ್‌ಲೈನ್ ಮೂಲಕ ಕೆಲಸ ನಿರ್ವಹಿಸಲು ಅನುಕೂಲವಾಗುವಂತೆ ಸರ್ಕಾರದಿಂದ ಗ್ರಾಮ ಲೆಕ್ಕಿಗರಿಗೆ ಲ್ಯಾಪ್‌ಟಾಪ್ ನೀಡಿದ್ದರೂ ಇನ್ನು ವಿತರಿಸಿಲ್ಲ. ನೀವೇ ನಿಮ್ಮ ಲ್ಯಾಗೀನ್‌ನಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡದೇ ಬಾಕಿ ಉಳಿಸಿಕೊಂಡರೇ ನಿಮ್ಮ ಕೆಳ ಮಟ್ಟದ ಅಧಿಕಾರಿಗಳಿಂದ ಯಾವ ರೀತಿ ಕೆಲಸ ಮಾಡುತ್ತಾರೆ. ಯಾವುದಕ್ಕೂ ಸಿದ್ದ ಉತ್ತರ ನೀಡುವುದು ಸರಿಯಲ್ಲ. ನೀವು ಏನು ಕೆಲಸ ಮಾಡೀದ್ದೀರಿ ಎನ್ನುವುದು ನನಗೆ ಮುಖ್ಯ. ಕೂಡಲೇ ಎಲ್ಲಾ ಅರ್ಜಿಗಳು ಇ ಆಫಿಸ್‌ನಲ್ಲಿ ಎಂಟ್ರಿ ಮಾಡಬೇಕು ಎಂದು ಸೂಚನೆ ನೀಡಿದರು.
ತಾಲೂಕಿನ ಬಾಣಸಮುದ್ರ ಗ್ರಾಮದ ಸರ್ಕಾರಿ ಶಾಲೆಯಲ್ಲಿಂದು ಮಕ್ಕಳಿಗೆ ಬಿಸಿಯೂಟ ತಯಾರು ಮಾಡಿಲ್ಲ. ಈ ಬಗ್ಗೆ ಸ್ವಷ್ಟನೆ ನೀಡುವಂತೆ ಬಿಇಒಗೆ ಸೂಚಿಸಿದಾಗ ಬಿಸಿಯೂಟ ನೌಕರರು ನಮ್ಮ ಗಮನಕ್ಕೆ ಬಾರದೇ ಪ್ರತಿಭಟನೆಗೆ ಹೋಗಿದ್ದಾರೆ. ಇದರ ಬಗ್ಗೆ ಬದಲಿ ವ್ಯವಸ್ಥೆ ಮಾಡಲಾಗಿದೆ ಎಂದು ಬಿಇಒ ಉಮಾ ತಿಳಿಸಿದರು.ಆ ಗ್ರಾಮದಲ್ಲಿ ಸರ್ಕಾರಿ ಭೂಮಿ ಒತ್ತುವರಿಯಾಗಿದೆ. ಕೂಡಲೇ ಕಂದಾಯ ಇಲಾಖೆ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಿ ಪಶು ಹಾಗೂ ಅಂಗನವಾಡಿ ಕೇಂದ್ರಗಳಿಗೆ ನಿವೇಶನ ನೀಡಬೇಕೆಂದು ಸೂಚಿಸಿದರು.
ಉಪವಿಭಾಗಾಧಿಕಾರಿ ಶಿವಮೂರ್ತಿ ಮಾತನಾಡಿ, ತಾಲೂಕಿನ ಕಂದಾಯ ಇಲಾಖೆಯಲ್ಲಿ ಹೆಚ್ಚಿನ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತಾಲೂಕಿಗೆ ಆಗಮಿಸಿ ಸಭೆ ನಡೆಸಿದ್ದಾರೆ. ಆರ್ ಐ, ವಿಎ ಹಾಗೂ ಶಿರಸ್ತೇದಾರ ಗಳು ಸರಿಯಾಗಿ ಕೆಲಸ ಮಾಡಿದ್ದರೆ ಅವರ ವಿರುದ್ದ ಶಿಸ್ತು ಕ್ರಮಕ್ಕೆ ಡೀಸಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಸಭೆಯಲ್ಲಿ ಡಿಡಿಎಲ್‌ಆರ್ ವೀರೂಪಾಕ್ಷ, ತಹಸೀಲ್ದಾರ್ ಲೋಕೇಶ್, ತಾಪಂ ಇಒ ಶ್ರೀನಿವಾಸ್ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.