ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕಳೆದ ೨ ತಿಂಗಳಿನಿಂದ ವೇತನವೇ ಸಿಕ್ಕಿಲ್ಲ. ಮಹಿಳೆಯರ ಮತ್ತು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸಂಬಳ ಸಿಗದೆ ಸಂಕಷ್ಟ ಎದುರಿಸುವಂತಾಗಿದೆ. ತಮಗೆ ಶೀಘ್ರ ವೇತನ ನೀಡುವ ವ್ಯವಸ್ಥೆಗಳನ್ನು ಮಾಡುವಂತೆ ಶಾಸಕರ ಮೊರೆ ಹೋಗಿದ್ದಾರೆ.ಪುತ್ತೂರು ತಾಲೂಕಿನಲ್ಲಿರುವ ಅಂಗನವಾಡಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕಳೆದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನ ಸಂಬಳ ಇನ್ನೂ ಬಂದಿಲ್ಲ. ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದ ಜೊತೆಗೆ ಚುನಾವಣೆಯ ಸಂದರ್ಭದಲ್ಲಿಯೂ ಅವರನ್ನು ಬಳಸಿಕೊಳ್ಳುತ್ತಿರುವ ಇಲಾಖೆಯು ಅವರಿಗೆ ನೀಡಲಾಗುತ್ತಿರುವ ಅಲ್ಪಗೌರವಧನವನ್ನೂ ಪಾವತಿಸಿಲ್ಲ. ಸಂಬಳ ಬಾರದಿದ್ದರೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಎಲ್‌ಒಗಳಾಗಿ ಅಂಗನವಾಡಿ ಕಾರ್ಯಕರ್ತೆಯರು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದರು. ವೇತನ ವಿಳಂಬ ಮಾಡುತ್ತಿರುವ ಇಲಾಖೆಯು ಸಮರ್ಪಕ ಕಾರಣವನ್ನೂ ನೀಡದೆ ಅವರನ್ನು ಸತಾಯಿಸುತ್ತಿದೆ. ಮೊಟ್ಟೆಯ ಹಣವೂ ಬಂದಿಲ್ಲ: ಅಂಗನವಾಡಿ ಕೇಂದ್ರಗಳಲ್ಲಿ ಕೇವಲ ಮಕ್ಕಳಿಗೆ ಮಾತ್ರವಲ್ಲದೆ ಗರ್ಭಿಣಿ, ಬಾಣಂತಿಯರಿಗೂ ಆರೈಕೆ ನೀಡಲಾಗುತ್ತಿದ್ದು, ಮಾತೃಪೂರ್ಣ ಯೋಜನೆಯಡಿಯಲ್ಲಿ ಫಲಾನುಭವಿಗಳಾದ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೂರಕ ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ. ಈ ಹಿಂದೆ ಮೊಟ್ಟೆಗಳನ್ನು ಇಲಾಖೆಯ ವತಿಯುಂದ ಟೆಂಡರ್ ಕರೆದು ಅಂಗನವಾಡಿಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಆದರೆ ಈ ಸಂದರ್ಭದಲ್ಲಿ ಹಾಳಾದ ಮೊಟ್ಟೆಗಳನ್ನು ವಿತರಣೆ ಮಾಡಿದ್ದ ಈ ಪ್ರಕ್ರಿಯೆಯನ್ನು ರದ್ದುಗೊಳಿಸಿದ್ದ ಇಲಾಖೆಯು ನೇರವಾಗಿ ಅಂಗನವಾಡಿ ಕಾರ್ಯಕರ್ತೆಯರು ಖರೀದಿ ಮಾಡಿ ಮೊಟ್ಟೆಯನ್ನು ಫಲಾನುಭವಿಗಳಿಗೆ ವಿತರಿಸುವಂತೆ ತಿಳಿಸಿತ್ತು. ಅದರಂತೆ ವಿತರಣೆ ಮಾಡಲಾಗಿದ್ದು, ಕಳೆದ ೨ ತಿಂಗಳಿನಿಂದ ಮೊಟ್ಟೆ ವಿತರಣೆ ಮಾಡಿದ ಹಣವೂ ಅಂಗನವಾಡಿ ಕಾರ್ಯಕರ್ತೆಯರಿಗೆ ದೊರಕಿಲ್ಲ. ಶಾಸಕರಿಗೆ ಮನವಿ: ಕಳೆದ ೨ ತಿಂಗಳಿನಿಂದ ವೇತನ ಬಂದಿಲ್ಲ. ಜೊತೆಗೆ ಫಲಾನುಭವಿಗಳಿಗೆ ಮೊಟ್ಟೆ ವಿತರಣೆ ಮಾಡಿರುವ ಹಣವೂ ಬಂದಿಲ್ಲ. ಶೀಘ್ರವಾಗಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶನಿವಾರ ಪುತ್ತೂರು ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯ ಸಂಘದ ವತಿಯಿಂದ ಸಂಘದ ಅಧ್ಯಕ್ಷೆ ಕಮಲ, ಉಪಾಧ್ಯಕ್ಷೆ ಸಂಧ್ಯಾ, ಕಾರ್ಯದರ್ಶಿ ಪುಷ್ಪಲತಾ, ಖಜಾಂಜಿ ಶೈಲಜಾ, ಮಾಜಿ ಜಿಲ್ಲಾಧ್ಯಕ್ಷೆ ಅರುಣ ಡಿ., ಮಾಜಿ ಕಾರ್ಯದರ್ಶಿ ಜಯಲತ ಅವರು ನಿಯೋಗದಲ್ಲಿ ತೆರಳಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮನವಿ ಸಲ್ಲಿಸಿದ್ದಾರೆ.