3 ತಿಂಗಳಿಂದ ಬಾರದ ವೇತನ, ಧರಣಿ ಕೈಗೊಳ್ಳಲು ಪ್ರೌಢಶಾಲೆ ಶಿಕ್ಷಕರ ತೀರ್ಮಾನ

| Published : Jun 02 2024, 01:45 AM IST

3 ತಿಂಗಳಿಂದ ಬಾರದ ವೇತನ, ಧರಣಿ ಕೈಗೊಳ್ಳಲು ಪ್ರೌಢಶಾಲೆ ಶಿಕ್ಷಕರ ತೀರ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ರಟ್ಟೀಹಳ್ಳಿ ಪಟ್ಟಣದ ಬಂಟೇಶ್ವರ ದೇವಸ್ಥಾನದಲ್ಲಿ ತಾಲೂಕಿನ ಪ್ರೌಢಶಾಲೆಯ ಶಿಕ್ಷಕರು, ಸಿಬ್ಬಂದಿಗಳು ಸಭೆ ನಡೆಸಿ ಒಂದು ವಾರದೊಳಗೆ ವೇತನ ಪಾವತಿಯಾಗದಿದ್ದಲ್ಲಿ ಬಿಇಒ ಕಚೇರಿ ಮುಂದೆ ಧರಣಿ ಕೈಗೊಳ್ಳಲು ತೀರ್ಮಾನಿಸಿದರು.

ರಟ್ಟೀಹಳ್ಳಿ: ಪಟ್ಟಣದ ಬಂಟೇಶ್ವರ ದೇವಸ್ಥಾನದಲ್ಲಿ ತಾಲೂಕಿನ ಪ್ರೌಢಶಾಲೆಯ ಶಿಕ್ಷಕರು, ಸಿಬ್ಬಂದಿಗಳು ಸಭೆ ನಡೆಸಿ ಒಂದು ವಾರದೊಳಗೆ ವೇತನ ಪಾವತಿಯಾಗದಿದ್ದಲ್ಲಿ ಬಿಇಒ ಕಚೇರಿ ಮುಂದೆ ಧರಣಿ ಕೈಗೊಳ್ಳಲು ತೀರ್ಮಾನಿಸಿದರು.

ತಾಲೂಕಿನ ಒಂಬತ್ತು ಸರಕಾರಿ ಪ್ರೌಢಶಾಲೆಯ ಸಿಬ್ಬಂದಿಗೆ ಕಳೆದ ಎರಡು-ಮೂರು ತಿಂಗಳುಗಳಿಂದ ವೇತನ ಪಾವತಿಯಾಗಿಲ್ಲ. ಕಾರಣ ವೇತನ ಕೊಡಿ ಇಲ್ಲ ವಿಷ ಕೊಡಿ ಎಂದು ಸಹ ಶಿಕ್ಷಕರು ತಮ್ಮ ಅಳಲು ತೋಡಿಕೊಂಡರು.

ಇದೇ ಸಂದರ್ಭದಲ್ಲಿ ತಾಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಾಜಕುಮಾರ ತಳವಾರ ಮಾತನಾಡಿ, ಕಳೆದ ಎರಡು ಮೂರು ತಿಂಗಳುಗಳಿಂದ ಪ್ರೌಢಶಾಲೆಯ ಸಿಬ್ಬಂದಿಗಳ ವೇತನ ಪಾವತಿಯಾಗಿಲ್ಲ. ಇದರಿಂದಾಗಿ ಶಿಕ್ಷಕರ ಕುಟುಂಬಗಳ ನಿರ್ವಹಣೆ ಮಾಡುವುದೇ ದುಸ್ತರವಾಗಿದೆ, ಪ್ರಸ್ತುತ ತಿಂಗಳುಗಳಿಂದ ಶೈಕ್ಷಣಿಕ ವರ್ಷ ಪ್ರಾರಂಭವಾಗಿದೆ. ಮಕ್ಕಳ ಉನ್ನತ ಮಟ್ಟದ ವಿದ್ಯಾಭ್ಯಾಸದ ಖರ್ಚು, ವಯಸ್ಸಾದ ತಂದೆ ತಾಯಿಗಳ ಆರೋಗ್ಯದ ಸಮಸ್ಯೆ, ಮನೆಯ ನಿರ್ವಹಣೆ ಮಾಡುವುದೇ ಶೋಚನೀಯವಾಗಿದೆ. ಈ ಬಗ್ಗೆ ಅನೇಕ ಬಾರಿ ಸಂಬಂಧ ಪಟ್ಟ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿ, ಶಾಸಕರ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕಾರಣ ಮುಂದಿನ ಒಂದು ವಾರದೊಳಗೆ ವೇತನ ಪಾವತಿಯಾಗದಿದ್ದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಮುಂದೆ ಧರಣಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಮಹೇಶ ಕೆರೂರ ಮಾತನಾಡಿ, ಪ್ರೌಢಶಾಲೆಯ ಸಿಬ್ಬಂದಿಗಳ ವೇತನ ಸಮಸ್ಯೆಯ ಬಗ್ಗೆ ಜಿಲ್ಲಾ ಉಪನಿರ್ದೇಶಕರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ವೇತನ ಹಂಚಿಕೆಯಲ್ಲಿ ನಮ್ಮ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಮಾಹಿತಿ ತಪ್ಪೋ ಅಥವಾ ಇಲಾಖೆಯ ಅಧಿಕಾರಿಗಳ ಮಾಹಿತಿ ತಪ್ಪೋ ಒಂದು ತಿಳಿಯುತ್ತಿಲ್ಲ. ನಮ್ಮ ಜೀವನ ನಡೆಸುವುದೇ ದುಸ್ತರವಾಗಿದೆ. ಕಾರಣ ಎಲ್ಲ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಪ್ರತಿ ತಿಂಗಳು ವೇತನ ಪಾವತಿಯಾಗುವಂತೆ ನೋಡಿಕೋಳ್ಳಿ ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಹಾಲೇಶ ಚಪ್ಪರಳ್ಳಿಮಠ, ಶ್ರೀಧರ ಎನ್., ಸಿ.ಎಚ್. ಬತ್ತೇರ, ಬಿ.ಡಿ. ಪಾಟೀಲ್, ಷಣ್ಮುಖ ಜಿ.ಎಚ್., ಬಸವರಾಜ ಎ.ಎಂ., ಕೂಸಗೂರ ಕೆ.ಹೆಚ್., ಸುರೇಶ ಕಣಗೊಟಗಿ, ಉಮಾಪತಿ ಎಲ್., ಹರೀಶ ಸುಂಕಾಪುರ, ಆರ್.ಕೆ. ಕಬ್ಬಾರಣ್ಣನವರ, ಸುನೀಲಕುಮಾರ ಎಸ್., ಪ್ರಶಾಂತ ಕುಲಕರ್ಣಿ, ವಿಜಯಕುಮಾರ ಕಂಬಿ, ರಾಮಪ್ಪ ಎಸ್., ಸೋಮಶೇಖರ ಬಿ.ಎಲ್. ಮುಂತಾದವರು ಇದ್ದರು.

ರಟ್ಟೀಹಳ್ಳಿ ತಾಲೂಕಿನ ಪ್ರೌಢಶಾಲೆ ಸಿಬ್ಬಂದಿಗಳ ವೇತನದ ಅನುದಾನದಲ್ಲಿನ ಸಮಸ್ಯೆಗಳನ್ನು ಆದಷ್ಟು ಬೇಗ ಸರಿಪಡಿಸಿ ವೇತನ ಪಾವತಿ ಆಗುವಂತೆ ನೋಡಿಕೊಳ್ಳಿ. ಇದೇ ರೀತಿ ಅನೇಕ ಬಾರಿ ಸಮಸ್ಯೆಯಾಗಿದ್ದರು ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂದು ಸಹ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಶಾಂತಗಿರಿ ಹೇಳಿದರು.