ಪ್ರಧಾನಿಯಿಂದ ಭಾರತ ಮಾತೆ ಆಭರಣ ಮಾರಾಟ : ಎಚ್.ಕೆ. ಪಾಟೀಲ

| Published : Apr 25 2024, 01:10 AM IST / Updated: Apr 25 2024, 12:53 PM IST

ಪ್ರಧಾನಿಯಿಂದ ಭಾರತ ಮಾತೆ ಆಭರಣ ಮಾರಾಟ : ಎಚ್.ಕೆ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಮೂರು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ ಎಲ್ಲೆ ಮೀರಿ ಮಾತನಾಡುತ್ತಿದ್ದಾರೆ

ಗದಗ: ಹಿಂದು ಮಹಿಳೆಯರ ತಾಳಿ ಕಿತ್ತು ಮುಸ್ಲಿಂರಿಗೆ ಕೊಡುತ್ತಾರೆ ಎನ್ನುವ ಪ್ರಧಾನಿ ಮೋದಿ ಹೇಳಿಕೆ ಅತ್ಯಂತ ಕೀಳು ಮಟ್ಟದ್ದಾಗಿದೆ. ಭಾರತ ಮಾತೆಯ ಆಭರಣಗಳಾದ ರೈಲ್ವೆ, ಏರ್ಪೋರ್ಟ್, ಗ್ಯಾಸ್ ಲೈನ್‌, ಸ್ಟೇಡಿಯಂ, ರಸ್ತೆಗಳನ್ನು ದೋಚಿ ಆದಾನಿ, ಅಂಬಾನಿ‌ ಹಾಗೂ ಗುಜರಾತಿನ ವ್ಯಾಪಾರಿಗಳಿಗೆ ನೀಡುತ್ತಿರುವ ನೀವು (ಮೋದಿ) ಇಂತಹ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಕಿಡಿಕಾರಿದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ ಎಲ್ಲೆ ಮೀರಿ ಮಾತನಾಡುತ್ತಿದ್ದಾರೆ. ಸಾರ್ವಜನಿಕರಲ್ಲಿ ಕೋಮು ಪ್ರಚೋದನೆ ನೀಡುವ ಹಾಗೂ ದ್ವೇಷ ಬಿತ್ತುವ ಅಂಶಗಳ ಬಗ್ಗೆ ಮಾತನಾಡುವ ಮೂಲಕ ದೇಶದಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ ಇದು ಖಂಡನೀಯ ಎಂದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೇಂದ್ರ ಚುನಾವಣಾ ಆಯೋಗ ಸುಮೋಟೋ ಪ್ರಕರಣ ದಾಖಲಿಸಿ ಕೂಡಲೇ ಅವರು ಚುನಾವಣಾ ಪ್ರಚಾರದಿಂದ ದೂರ ಉಳಿಸುವಂತೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹಿಂದುಗಳ ಆಸ್ತಿ ಕಿತ್ತು ಮುಸಲ್ಮಾನರಿಗೆ ಹಂಚಿಕೆ ಮಾಡುತ್ತಾರೆ, ದಲಿತರ ಮೀಸಲಾತಿ ಕಿತ್ತು ಅಲ್ಪಸಂಖ್ಯಾತರಿಗೆ ನೀಡುತ್ತಾರೆ ಎಂಬ ಹೇಳಿಕೆ ನೀಡುವ ಮೂಲಕ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಇದು ಪ್ರಧಾನಿ ಮೋದಿ ಅವರಿಗೆ ಮೊದಲ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಲೆ ಕಂಡು ಬಂದ ಹಿನ್ನೆಲೆ ಅವರು ನಿಂತ ಜಾಗವೇ ಕುಸಿಯುತ್ತಿದೆ. ಅದಕ್ಕಾಗಿ ಹೀಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಕಳೆದ ನಾಲ್ಕೈದು ದಿನಗಳಿಂದ ಪ್ರಧಾನಿ ಮೋದಿ ಭಾಷಣ ಗಮನಿಸಿದಲ್ಲಿ ಅವರಿಗೆ ಸೋಲುವ ಭಯ ಕಾಡುತ್ತಿದ್ದು, ಇದರಿಂದ ಹತಾಶರಾಗಿ ಇಲ್ಲ ಸಲ್ಲದ ಮಾತುಗಳನ್ನಾಡುತ್ತಿದ್ದಾರೆ. ಮೋದಿಗೆ ಈ ಲೋಕಸಭಾ ಚುನಾವಣೆಯಲ್ಲಿ ದೇಶದ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಗೆಲ್ಲಲು ಪೂರಕ ವಾತಾವರಣವಿದೆ ಎಂದರು.

ಕಾರ್ಯದರ್ಶಿ ವಿ.ಬಿ. ಸೋಮನಕಟ್ಟಿಮಠ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಬಸವರಾಜ ಕಡೇಮಬಿ, ಉಮರ್ ಫಾರೂಖ್ ಹುಬ್ಬಳ್ಳಿ ಸೇರಿ ಅನೇಕರು ಹಾಜರಿದ್ದರು.

ನಾಳೆ ಗದುಗಿಗೆ ಸಿಎಂ ಸಿದ್ದರಾಮಯ್ಯ:  ಏ. 25ರಂದು ಮಧ್ಯಾಹ್ನ 2.45ಕ್ಕೆ ಗಜೇಂದ್ರಗಡದಲ್ಲಿ ಜರುಗುವ ಬೃಹತ್ ಚುನಾವಣಾ ಪ್ರಚಾರ ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದು, ಸಾವಿರಾರು ಸಂಖ್ಯೆಯ ಕಾರ್ಯಕರ್ತರು, ಕಾಂಗ್ರೆಸ್ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.