ಸಾರಾಂಶ
ನವೆಂಬರ್ ತಿಂಗಳಲ್ಲಿ ಕಾನೂನು ಬದ್ದ ದತ್ತು ಪ್ರೋತ್ಸಾಹಿಸುವ ಸಲುವಾಗಿ ಜಿಲ್ಲೆಯಾದ್ಯಂತ ದತ್ತು ಮಾಸಾಚರಣೆ ಆಚರಣೆ ಮಾಡಲಾಗುವುದು
ಶಿರಹಟ್ಟಿ: ಮಕ್ಕಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಮಕ್ಕಳನ್ನು ಮಾರುವ ಹಾಗೂ ಕೊಳ್ಳುವವರಿಗೆ ಬಾಲ ನ್ಯಾಯ ಕಾಯಿದೆ ೨೦೧೫ ಕಲಂ ೮೧ರ ಪ್ರಕಾರ ೫ ವಷ೯ ಸೆರೆಮನೆ ವಾಸ ಹಾಗೂ ₹೧ಲಕ್ಷಗಳವರೆಗೆ ದಂಡ ವಿಧಿಸಬಹುದಾಗಿದೆ ಎಂದು ಮಕ್ಕಳ ರಕ್ಷಣಾಧಿಕಾರಿ ಮಲ್ಲಪ್ಪ ಹೊಸಳ್ಳಿ ಹೇಳಿದರು.
ಬುಧವಾರ ಪಟ್ಟಣದಲ್ಲಿ ದತ್ತು ಮಾಸಾಚರಣೆ ೨೦೨೪ರ ಪ್ರಯುಕ್ತ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಲ್ಲಪ್ಪ ಹೊಸಳ್ಳಿ ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿ ಮಾತನಾಡಿದರು.ಈ ಅಪರಾಧದಲ್ಲಿ ಆಸ್ಪತ್ರೆಯವರು ಶಾಮಿಲಾದರೆ ಶಿಕ್ಷೆಯ ಅವಧಿ ೩ವರ್ಷಗಳಿಗೆ ಕಡಿಮೆ ಇಲ್ಲದಂತೆ ೭ ವರ್ಷಗಳವರೆಗೆ ವಿಸ್ತರಣೆ ಆಗುತ್ತದೆ. ಮಗು ದತ್ತು ತೆಗೆದುಕೊಳ್ಳಲು ಇರಬೇಕಾದ ಅರ್ಹತೆಗಳು ಮತ್ತು ದಾಖಲೆಗಳು ಹಾಗೂ ದತ್ತು ಪ್ರಕ್ರಿಯೆ ಕುರಿತು ಸಾರ್ವಜನಿಕರಿಗೆ ಬಿತ್ತಪತ್ರ ಹಂಚುವುದರ ಮೂಲಕ ಜಾಗೃತಿ ಮೂಡಿಸಿದರು.
ನವೆಂಬರ್ ತಿಂಗಳಲ್ಲಿ ಕಾನೂನು ಬದ್ದ ದತ್ತು ಪ್ರೋತ್ಸಾಹಿಸುವ ಸಲುವಾಗಿ ಜಿಲ್ಲೆಯಾದ್ಯಂತ ದತ್ತು ಮಾಸಾಚರಣೆ ಆಚರಣೆ ಮಾಡಲಾಗುವುದು. ಕಾನೂನಿನ ಮೂಲಕವೇ ಮಕ್ಕಳನ್ನು ದತ್ತು ಪಡೆಯಲು ಸಲಹೆ ನೀಡಿದ ಅವರು, ಮಕ್ಕಳಿಲ್ಲದವರು ಶಾಶ್ವತವಾಗಿ ಮಗುವಿನ ಹಕ್ಕು ಬಾಧ್ಯತೆಗಳೊಂದಿಗೆ ಮತ್ತು ಜವಾಬ್ದಾರಿಗಳನ್ನು ಕಾನೂನು ಬದ್ಧವಾಗಿ ಪಡೆದುಕೊಳ್ಳುವುದೇ ದತ್ತು ಸ್ವೀಕಾರ ಎಂದು ಹೇಳಿದರು.ಅನಾಥ, ಪರಿತ್ಯಕ್ತ ಒಪ್ಪಿಸಲ್ಪಟ್ಟ ಮಕ್ಕಳ ಮಾಹಿತಿ ಕಂಡು ಬಂದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದೂರವಾಣಿ ಸಂಖ್ಯೆ ೯೪೮೦೩೬೦೧೭೧ ಹಾಗೂ ಮಕ್ಕಳ ಸಹಾಯವಾಣಿ ೧೦೯೮ ಅಥವಾ ತುರ್ತು ಸಹಾಯವಾಣಿ ೧೧೨ ಸಂಖ್ಯೆ ಮಾಹಿತಿ ನೀಡಬಹುದು ಎಂದು ಸಾರ್ವಜನಿಕರಿಗೆ ತಿಳಿ ಹೇಳಿದರು.