ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಪರಿಸರ ಸ್ನೇಹಿಯಾದ ಹಸಿರು ಪಟಾಕಿ ಹೊರತಾಗಿ ಪರಿಸರಕ್ಕೆ ಹಾನಿ ತರುವಂತಹ ಇತರೆ ಯಾವುದೇ ಪಟಾಕಿಗಳನ್ನು ಗ್ರಾಹಕರಿಗೆ ಮಾರಾಟ ಮಾಡಿದರೆ ಅಂತಹವರ ಲೈಸೆನ್ಸ್ ರದ್ದು ಮಾಡುವುದರ ಜೊತೆಗೆ ವ್ಯಾಪಾರಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಹಸೀಲ್ದಾರ್ ವೆಂಕಟೇಶಪ್ಪ ಹೇಳಿದರು. ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ತೆರೆದಿರುವ ಪಟಾಕಿ ಅಂಗಡಿಗಳನ್ನು ಸೋಮವಾರ ಪರಿಶೀಲನೆ ನಡೆಸಿ ಮಾತನಾಡಿ, ಪರಿಸರಕ್ಕೆ ಮಾರಕ ಇರುವಂತಹ ಪಟಾಕಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದರು.ಹಸಿರು ಪಟಾಕಿಗೆ ಮಾತ್ರ ಲೈಸೆನ್ಸ್
ಆದ್ದರಿಂದ ಸರ್ಕಾರ ಕೇವಲ ಹಸಿರು ಪಟಾಕಿ ಮಾರಾಟ ಮಾಡಲು ಮಾತ್ರ ಪರವಾನಗಿಯನ್ನು ವ್ಯಾಪಾರಸ್ಥರಿಗೆ ನೀಡಿದೆ. ಹಸಿರು ಪಟಾಕಿ ಹೊರತಾಗಿ ಯಾವುದೇ ಅಂಗಡಿಗಳಲ್ಲಿ ಇತರೆ ಯಾವುದೇ ಪಟಾಕಿಗಳನ್ನು ಮಾರಾಟ ಮಾಡಬಾರದು. ಜೊತೆಗೆ ಪಟಾಕಿಗಳನ್ನು ಗೋಡಾನ್, ಮನೆ ಸೇರಿದಂತೆ ಇತರೆ ಕಡೆಗಳಲ್ಲಿ ದಾಸ್ತಾನು ಮಾಡುವಂತಿಲ್ಲ. ಕಾನೂನು ಬಾಹಿರವಾಗಿ ದಾಸ್ತಾನು ಮಾಡಿರುವುದು ಕಂಡು ಬಂದರೆ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನು ವ್ಯಾಪಾರಸ್ಥರಿಗೆ ನೀಡಿದರು.ಅಂಗಡಿಯಿಂದ ಅಂಗಡಿಯ ಮಧ್ಯೆ ೬ ಅಡಿಗಳ ಅಂತರವನ್ನು ಕಾಪಾಡಬೇಕು. ಯಾವುದೇ ಅಗ್ನಿ ಅವಘಡ ನಡೆದರೆ ಅದನ್ನು ಹತೋಟಿಗೆ ತರಲು ಹಾಗೂ ಮುಂಜಾಗ್ರತಾ ಕ್ರಮವಾಗಿ ಅಗ್ನಿ ನಿರೋಧಕ ಪರಿಕರಗಳನ್ನು ಪ್ರತಿಯೊಂದು ಅಂಗಡಿಗಳಲ್ಲಿ ಇಟ್ಟುಕೊಳ್ಳಬೇಕು. ಅಂಗಡಿಗಳ ಮಾಲೀಕರು ಅಥವಾ ಕಾರ್ಮಿಕರು ಯಾರೂ ಸಹ ರಾತ್ರಿ ವೇಳೆ ಅಂಗಡಿಗಳಲ್ಲಿ ಮಲಗುವಂತಿಲ್ಲ. ಅಂಗಡಿಯ ಒಳಗೆ ಬೆಂಕಿಪೊಟ್ಟಣ ಮತ್ತು ಅಗ್ನಿ ಉತ್ಪಾದನೆ ಮಾಡುವಂತಹ ವಸ್ತುಗಳನ್ನು ವ್ಯಾಪಾರಸ್ಥರು ಬಳಸುವಂತಿಲ್ಲ ಎಂದು ಹೇಳಿದರು.
ಪಟಾಕಿ ಕಡಿಮೆ ಬಳಸಿದೀಪಾವಳಿ ಎಂದರೆ ದೀಪಗಳ ಹಬ್ಬವಾಗಿದ್ದು, ಜನರು ಪಟಾಕಿಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸಿ ದೀಪಗಳನ್ನು ಹಚ್ಚಿ ಹಬ್ಬವನ್ನು ಆಚರಿಸುವ ಮೂಲಕ ಪರಿಸರವನ್ನು ಕಾಪಾಡಬೇಕು. ಪಟಾಕಿಗಳನ್ನು ಸಿಡಿಸುವಾಗ ಪ್ರತಿಯೊಬ್ಬರೂ ಸಹ ಎಚ್ಚರಿಕೆಯಿಂದ ಇರಬೇಕು. ಅಪಾಯಕಾರಿ ಪಟಾಕಿಗಳನ್ನು ಬಳಕೆ ಮಾಡಬಾರದು. ಮಕ್ಕಳು ಪಟಾಕಿ ಹೊಡೆಯುವಾಗ ಪೋಷಕರು ಜೊತೆಯಲ್ಲಿ ಇದ್ದು ಪಟಾಕಿಯನ್ನು ಸಿಡಿಸಬೇಕು. ರಾತ್ರಿಯ ವೇಳೆ ಇತರರಿಗೆ ಸಮಸ್ಯೆ ಆಗದಂತೆ ನಿಗದಿತ ಸಮಯದಲ್ಲಿ ಮಾತ್ರ ಪಟಾಕಿಗಳನ್ನು ಸಿಡಿಸಬೇಕು ಎಂಬ ಸಾರ್ವಜನಿಕರಿಗೆ ಸಲಹೆ ನೀಡಿದರು.
ಈ ವೇಳೆ ರಾಜಸ್ವ ನಿರೀಕ್ಷ ಅಜಯ್ ಕುಮಾರ್, ಆಡಳಿತ ಅಧಿಕಾರಿ ಯೋಗೇಶ್, ಪುರಸಭೆ ಅಧಿಕಾರಿ ಮಹೇಶ್ ಸೇರಿದಂತೆ ಪೊಲೀಸ್ ಮತ್ತು ಬೆಸ್ಕಾಂ ಅಧಿಕಾರಿಗಳು ಹಾಜರಿದ್ದರ.