ಉದ್ಯಾನಕ್ಕಾಗಿ ಬಿಟ್ಟ ಸ್ಥಳ ಮಾರಾಟ: ₹3.20 ಕೋಟಿ ಮೌಲ್ಯದ ಜಾಗ ವಶ

| Published : Jul 11 2024, 01:31 AM IST

ಉದ್ಯಾನಕ್ಕಾಗಿ ಬಿಟ್ಟ ಸ್ಥಳ ಮಾರಾಟ: ₹3.20 ಕೋಟಿ ಮೌಲ್ಯದ ಜಾಗ ವಶ
Share this Article
  • FB
  • TW
  • Linkdin
  • Email

ಸಾರಾಂಶ

ಉದ್ಯಾನಕ್ಕಾಗಿ ಬಿಟ್ಟ ಜಾಗವನ್ನೂ ಮಾರಾಟ ಮಾಡಿದ್ದ ಸಂಘಟನೆ, ಬಿಡಿಎಯಿಂದ ಜಾಗ ಮರು ವಶ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ(ಬಿಡಿಎ) ಸೇರಿದ ರಘುವನಹಳ್ಳಿ, ದೊಡ್ಡಕಲ್ಲಸಂದ್ರ ಮತ್ತು ತಿಪ್ಪಸಂದ್ರ ಗ್ರಾಮಗಳ ವಿವಿಧ ಸರ್ವೆ ನಂಬರ್‌ಗಳಲ್ಲಿ ಒತ್ತುವರಿಯಾಗಿದ್ದ ಜಾಗವನ್ನು ಪ್ರಾಧಿಕಾರ ವಶಕ್ಕೆ ಪಡೆದಿದೆ.

ಬೆಂಗಳೂರು ದಕ್ಷಿಣ ತಾಲೂಕು ಉತ್ತರಹಳ್ಳಿ ಹೋಬಳಿ, ದೊಡ್ಡಕಲ್ಲಸಂದ್ರ, ರಘುವನಹಳ್ಳಿ ಮತ್ತು ತಿಪ್ಪಸಂದ್ರ ಸೇರಿದಂತೆ ಇತರೆ ಗ್ರಾಮಗಳ ಹಲವು ಸರ್ವೆ ನಂಬರ್‌ಗಳಲ್ಲಿ 191.02 ಎಕರೆ ಜಮೀನನ್ನು ಬಡಾವಣೆ ಅಭಿವೃದ್ಧಿಪಡಿಸಲು ಬಿಡಿಎ ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದಿತ್ತು. ಈ ಜಾಗವನ್ನು ಬ್ಯಾಂಕ್‌ ಅಧಿಕಾರಿಗಳು ಮತ್ತು ನೌಕರರ ಗೃಹ ನಿರ್ಮಾಣ ಸಹಕಾರ ಸಂಘದವರಿಗೆ ನೀಡಲಾಗಿತ್ತು.

ಸಹಕಾರ ಸಂಘವು ಅನುಮೋದಿತ ನಕ್ಷೆಯಂತೆ ಬಡಾವಣೆಯನ್ನು ರಚನೆ ಮಾಡದೇ ಪ್ರಾಧಿಕಾರಕ್ಕೆ ಪರಿತ್ಯಾಜನಾ ಪತ್ರದ ಮೂಲಕ ನೋಂದಾಯಿಸಿಕೊಟ್ಟಿರುವ ಉದ್ಯಾನವನದ ಸ್ಥಳಗಳಲ್ಲಿ ನಿವೇಶನಗಳನ್ನು ಮಾರಾಟ ಮಾಡಿ ಪ್ರಾಧಿಕಾರದ ಆದೇಶವನ್ನು ಉಲ್ಲಂಘನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಉದ್ಯಾನವನ ಮತ್ತು ಆಟದ ಮೈದಾನದಲ್ಲಿ ಒತ್ತುವರಿ ಮಾಡಿದ್ದ ಸುಮಾರು 2 ಎಕರೆ ಪ್ರದೇಶವನ್ನು ಹಾಗೂ ನಾಗರಿಕ ಸೌಲಭ್ಯ ನಿವೇಶನದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಕಟ್ಟಡವನ್ನು ತೆರವುಗೊಳಿಸಿ 4 ಗುಂಟೆ ಜಾಗವನ್ನು ಪ್ರಾಧಿಕಾರವು ವಶಪಡಿಸಿಕೊಂಡಿದೆ. ವಶಪಡಿಸಿಕೊಂಡಿರುವ ನಾಗರಿಕ ಸೌಲಭ್ಯ ನಿವೇಶನದ ಬೆಲೆ ಸುಮಾರು ₹3.20 ಕೋಟಿಗಳು ಎಂದು ಅಂದಾಜಿಸಲಾಗಿದೆ.

ಒತ್ತುವರಿ ತೆರುವ ಕಾರ್ಯಾಚರಣೆಯಲ್ಲಿ ಪ್ರಾಧಿಕಾರದ ಆರಕ್ಷಕ ಅಧೀಕ್ಷಕರು ಮತ್ತು ಸಿಬ್ಬಂದಿ ಸಹಕಾರದಲ್ಲಿ ಬಿಡಿಎ ಅಧಿಕಾರಿಗಳು ಪಾಲ್ಗೊಂಡಿದ್ದರು.