ಈ ವಿಷಯವಾಗಿ ಮಾರುಕಟ್ಟೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅವರು ಬೇಜವಾಬ್ದಾರಿ ಉತ್ತರ ನೀಡಿ ರೈತರನ್ನು ಸಾಗಹಾಕಲು ಯತ್ನಿಸಿದ್ದರಿಂದ ಅನ್ನದಾತರ ಆಕ್ರೋಶದ ಕಟ್ಟೆಯೊಡೆದು ಅಧಿಕಾರಿಗಳು ಮತ್ತು ದಲ್ಲಾಳಿಗಳ ಈ ನಿರಂತರ ವಂಚನೆಯನ್ನು ಖಂಡಿಸಿ ನೂರಾರು ರೈತರು ಮಾರುಕಟ್ಟೆಯಿಂದ ಹೊರಬಂದು ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಧಾವಿಸಿ ವಾಹನ ತಡೆದು ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ರೇಷ್ಮೆ ಮಾರುಕಟ್ಟೆಯ ಜಾಲರಿಯಲ್ಲಿ ರೈತರು ಮುಂಗಡವಾಗಿ ಇರಿಸಿದ್ದ ರೇಷ್ಮೆ ಗೂಡನ್ನು ಅಕ್ರಮವಾಗಿ ತೆರವುಗೊಳಿಸಿ, ಬೇರೆಯವರಿಗೆ ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ದಲ್ಲಾಳಿಗಳು ಮತ್ತು ಮಾರುಕಟ್ಟೆ ಸಿಬ್ಬಂದಿ ವಿರುದ್ಧ ರೊಚ್ಚಿಗೆದ್ದ ರೇಷ್ಮೆ ಬೆಳೆಗಾರರು ನಗರದಲ್ಲಿ ಬುಧವಾರ ಬೆಳಗ್ಗೆ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಿದರು.

ರೇಷ್ಮೆ ಗೂಡನ್ನು ಮಾರುಕಟ್ಟೆಗೆ ತಂದು, ಹರಾಜು ಪ್ರಕ್ರಿಯೆಗಾಗಿ ನಿಯಮಾನುಸಾರ ಜಾಲರಿಗಳಲ್ಲಿ ಮುಂಗಡವಾಗಿ ಶೇಖರಿಸಿ ಇಡಲಾಗಿತ್ತು. ಆದರೆ, ಮಾರುಕಟ್ಟೆಯ ಅಧಿಕಾರಿಗಳು ಹಾಗೂ ಕೆಲ ಪಟ್ಟಭದ್ರ ದಲ್ಲಾಳಿಗಳು ಶಾಮೀಲಾಗಿ, ರೈತರ ಗಮನಕ್ಕೆ ಬಾರದಂತೆ ಉತ್ತಮ ಗುಣಮಟ್ಟದ ಆ ರೇಷ್ಮೆ ಗೂಡುಗಳನ್ನು ಜಾಲರಿಯಿಂದ ತೆರವುಗೊಳಿಸಿ ಹೆಚ್ಚಿನ ಲಾಭಕ್ಕಾಗಿ ದೂರದ ಊರುಗಳಿಂದ ರಾತ್ರಿ ವೇಳೆ ಗೂಡು ತರುವ ರೇಷ್ಮೆ ಬೆಳೆಗಾರರಿಗೆ ಜಾಲರಿ ಮಾರಾಟ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದರು.

ಈ ವಿಷಯವಾಗಿ ಮಾರುಕಟ್ಟೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅವರು ಬೇಜವಾಬ್ದಾರಿ ಉತ್ತರ ನೀಡಿ ರೈತರನ್ನು ಸಾಗಹಾಕಲು ಯತ್ನಿಸಿದ್ದರಿಂದ ಅನ್ನದಾತರ ಆಕ್ರೋಶದ ಕಟ್ಟೆಯೊಡೆದು ಅಧಿಕಾರಿಗಳು ಮತ್ತು ದಲ್ಲಾಳಿಗಳ ಈ ನಿರಂತರ ವಂಚನೆಯನ್ನು ಖಂಡಿಸಿ ನೂರಾರು ರೈತರು ಮಾರುಕಟ್ಟೆಯಿಂದ ಹೊರಬಂದು ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಧಾವಿಸಿ ವಾಹನ ತಡೆದು ಪ್ರತಿಭಟಿಸಿದರು.

ಸ್ಥಳಕ್ಕೆ ಧಾವಿಸಿದ ಪೊಲೀಸ್ ಸಿಬ್ಬಂದಿ ಪ್ರತಿಭಟನಾ ಕಾರರೊಂದಿಗೆ ಮಾತುಕತೆ ನಡೆಸಿ, ಗೂಡು ಕಳೆದು ಕೊಂಡ ರೈತರಿಗೆ ಸೂಕ್ತ ಪರಿಹಾರ ಕೊಡಿಸುವು ದಾಗಿ ಮತ್ತು ಈ ದಂಧೆಯಲ್ಲಿ ಶಾಮೀಲಾಗಿರುವ ಅಧಿಕಾರಿಗಳು ಹಾಗೂ ದಲ್ಲಾಳಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ರೈತರು ರಸ್ತೆ ತಡೆ ಹಿಂಪಡೆದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.