ನಿಷೇಧಿತ ಕೀಟನಾಶಕ ಮಾರಾಟ : ದಾಸ್ತಾನು ಜಪ್ತಿ

| Published : Nov 21 2024, 01:04 AM IST

ಸಾರಾಂಶ

ತುಮಕೂರು ತಾಲೂಕಿನ ಹೆಬ್ಬೂರು ಗ್ರಾಮದ ಲಕ್ಷ್ಮೀವೆಂಕಟೇಶ್ವರ ಅಗ್ರೋಟೆಕ್ ಕೀಟನಾಶಕ ಮಾರಾಟ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತಿದ್ದ ಅಂದಾಜು 7286 ರು. ಮೌಲ್ಯದ 10.2 ಲೀಟರ್ ಪ್ರಮಾಣದ ಡೈಮಿಥೋಯೇಟ್-30% ಇ.ಸಿ.(ರೋಗಾರ್) ಎಂಬ ನಿಷೇಧಿತ ಕೀಟನಾಶಕವನ್ನು ಕೃಷಿ ಇಲಾಖೆಯ ಜಾರಿದಳ ವಿಭಾಗವು ಜಪ್ತಿ ಮಾಡಿ ಇಲಾಖೆ ವಶಕ್ಕೆ ಪಡೆಯಲಾಗಿದೆ ಎಂದು ಕೀಟನಾಶಕ ಪರಿವೀಕ್ಷಕ ಹಾಗೂ ಸಹಾಯಕ ಕೃಷಿ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರು ತಾಲೂಕಿನ ಹೆಬ್ಬೂರು ಗ್ರಾಮದ ಲಕ್ಷ್ಮೀವೆಂಕಟೇಶ್ವರ ಅಗ್ರೋಟೆಕ್ ಕೀಟನಾಶಕ ಮಾರಾಟ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತಿದ್ದ ಅಂದಾಜು 7286 ರು. ಮೌಲ್ಯದ 10.2 ಲೀಟರ್ ಪ್ರಮಾಣದ ಡೈಮಿಥೋಯೇಟ್-30% ಇ.ಸಿ.(ರೋಗಾರ್) ಎಂಬ ನಿಷೇಧಿತ ಕೀಟನಾಶಕವನ್ನು ಕೃಷಿ ಇಲಾಖೆಯ ಜಾರಿದಳ ವಿಭಾಗವು ಜಪ್ತಿ ಮಾಡಿ ಇಲಾಖೆ ವಶಕ್ಕೆ ಪಡೆಯಲಾಗಿದೆ ಎಂದು ಕೀಟನಾಶಕ ಪರಿವೀಕ್ಷಕ ಹಾಗೂ ಸಹಾಯಕ ಕೃಷಿ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ. ತರಕಾರಿ ಮತ್ತು ಹಣ್ಣಿನ ಬೆಳೆಗಳಿಗೆ ಈ ಕೀಟನಾಶಕ ಬಳಸುವುದನ್ನು ನಿಷೇಧ ಮಾಡಿದ್ದರೂ ಸಹ ಲೇಬಲ್‌ನಲ್ಲಿ ನಮೂದಿಸಿ ನ್ಯೂ ಪ್ಯಾಕ್ ಆಗ್ರೋ ಕೆಮ್ ಕಂಪನಿಯು ಡೈಮಿಥೋಯೇಟ್-30% ಇ.ಸಿ., (ರೋಗಾರ್) ಎಂಬ ಕೀಟನಾಶಕವನ್ನು ಉತ್ಪಾದನೆ ಮಾಡಿ ಮಾರಾಟ ಮಾಡುತ್ತಿದ್ದರಿಂದ ಜಪ್ತಿ ಮಾಡಲಾಗಿದೆ. ಕೃಷಿ ಇಲಾಖೆಯ ಜಾರಿದಳ ವಿಭಾಗವು ಶ್ರೀ ಲಕ್ಷ್ಮೀವೆಂಕಟೇಶ್ವರ ಆಗ್ರೋಟೆಕ್ ಕೀಟನಾಶಕ ಮಾರಾಟ ಮಳಿಗೆ ಮೇಲೆ ದಾಳಿ ಮಾಡಿ ನಿಯಮಾನುಸಾರ ಪರಿಶೀಲಿಸಿದಾಗ, ಮೇಲ್ಕಂಡ ಉಲ್ಲಂಘನೆ ಕಂಡು ಬಂದಿತ್ತು. ಕಳೆದ ಬಾರಿ ಕ್ಷೇತ್ರ ಭೇಟಿ ಸಂದರ್ಭದಲ್ಲಿ ನಿಷೇಧಿತ ಕೀಟನಾಶಕ ದಾಸ್ತಾನಿಗೆ ಮಾರಾಟ ತಡೆ ಆದೇಶ ಜಾರಿಗೊಳಿಸಿ ಸಂಬಂಧಿಸಿದ ಮಾರಾಟಗಾರರು, ಸರಬರಾಜುದಾರರು, ವಿತರಕರು ಮತ್ತು ಉತ್ಪಾದಕರಿಗೆ ನೋಟಿಸ್ ಜಾರಿ ಮಾಡಿ ಸೂಕ್ತ ದಾಖಲೆಗಳೊಂದಿಗೆ ಸಮಜಾಯಿಷಿ ನೀಡಲು ಕ್ರಮ ಕೈಗೊಳ್ಳಲಾಗಿತ್ತು.ಆದರೆ ಉತ್ಪಾದಕ ಕಂಪನಿಯು ಸೂಕ್ತ ದಾಖಲೆಗಳನ್ನು ಸಲ್ಲಿಸದೇ ಇರುವ ಕಾರಣ ಕೀಟನಾಶಕ ಕಾಯ್ದೆ 1968 ಮತ್ತು ಕೀಟನಾಶಕ ನಿಯಮಗಳು 1971 ರ ಉಲ್ಲಂಘನೆ ಮೇರೆಗೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಸದರಿ ಕೀಟನಾಶಕದ ಮಾದರಿಯನ್ನು ತೆಗೆದು ಗುಣ ನಿಯಂತ್ರಣ ವಿಶ್ಲೇಷಣೆಗೆ ಕಳುಹಿಸಿಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.