ಜನೌಷಧಿ ಕೇಂದ್ರಗಳಲ್ಲಿ ಕಳಪೆ ಔಷಧಗಳ ಮಾರಾಟ

| Published : Oct 27 2025, 12:00 AM IST

ಸಾರಾಂಶ

ಚಿತ್ರದುರ್ಗದಲ್ಲಿ ಭಾನುವಾರ ಆಯೋಜಿಸಿದ್ದ ಔಷಧ ಭವನದ ಉದ್ಘಾಟನೆಯ ಸಭಾ ಕಾರ್ಯಕ್ರಮವನ್ನು ಉಪ ವಿಭಾಗಾಧಿಕಾರಿ ಮಹಮದ್ ಜುಲಾನಿ ಖುರೇಷಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜನೌಷಧಿ ಕೇಂದ್ರಗಳಲ್ಲಿ ಕಳಪೆ ಔಷಧಗಳ ಮಾರಾಟ ಮಾಡಲಾಗುತ್ತಿದೆ ಎಂದು ಕರ್ನಾಟಕ ರೀಟೇಲರ್ಸ್‌ ಡಿಸ್ಟ್ರಿಬ್ಯೂಟರ್ರ್ಸ್‌ ಆರ್ಗನೈಸೇಷನ್‌ ಅಧ್ಯಕ್ಷ ಸಿ.ಜಯರಾಮ್ ಆರೋಪ ಮಾಡಿದರು.

ಚಿತ್ರದುರ್ಗ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ವತಿಯಿಂದ ಚಳ್ಳಕೆರೆ ರಸ್ತೆಯ ಆಕ್ಷಯ ಗ್ಲೋಬಲ್ ಆಸ್ಪತ್ರೆಯ ಹಿಂಭಾಗದ ಶ್ರೀರಾಮ ಬಡಾವಣೆಯಲ್ಲಿ ನಿರ್ಮಾಣ ಮಾಡಲಾದ ಔಷಧಿ ಭವನದ ಉದ್ಘಾಟನಾ ಸಮಾರಂಭದಲ್ಲಿ ಭಾನುವಾರ ಭಾಗವಹಿಸಿ ಮಾತನಾಡಿದ ಅವರು ಕಳಪೆ ಔಷಧ ಮಾರಾಟದ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲವೆಂದರು.

ಔಷಧಿ ಭವನ ರಾಜ್ಯ ಮಟ್ಟದಲ್ಲಿ ಇಲ್ಲ. ಆದರೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನಿರ್ಮಾಣವಾಗಿದೆ. ಕೋವಿಡ್ ಸಮಯದಲ್ಲಿ ನಮ್ಮ ಔಷಧಿ ವಿತರಕರು ಉತ್ತಮವಾದ ಕೆಲಸವನ್ನು ಮಾಡಿದ್ದಾರೆ. ಆದರೆ ಸರ್ಕಾರ ಇವರ ಕೆಲಸವನ್ನು ಗುರುತಿಸಿಲ್ಲ. ಕೋವಿಡ್ ಸಮಯದಲ್ಲಿ ನಮ್ಮವರು 30 ಜನ ಮೃತ ಪಟ್ಟಿದ್ದಾರೆ. ಪರಿಹಾರ ನೀಡಲಾಗಿಲ್ಲ. ಸರ್ಕಾರದ ಬದಲಿಗೆ ನಮ್ಮ ಸಂಸ್ಥೆವತಿಯಿಂದ ತಲಾ 3 ಲಕ್ಷ ರು ಗಳಂತೆ 90 ಲಕ್ಷ ರು ವಿತರಿಸಿದ್ದೇವೆ ಎಂದರು.

ಉಪ ವಿಭಾಗಾಧಿಕಾರಿ ಮಹಮದ್ ಜುಲಾನಿ ಖುರೇಷಿ ಮಾತನಾಡಿ,ಮಾರುಕಟ್ಟೆಗೆ ಲಗ್ಗೆ ಇಡುವ ನಕಲಿ ಔಷಧಗಳ ನಿಯಂತ್ರಣಕ್ಕೆ ಎಲ್ಲರ ಸಹಕಾರ ಅಗತ್ಯ.ಮಾನವನ ಇಂದಿನ ಜೀವನದಲ್ಲಿ ಔಷಧಿಯೂ ಒಂದು ಭಾಗವಾಗಿದೆ. ಉತ್ತಮ ಆರೋಗ್ಯ ನಿರ್ಮಾಣಕ್ಕೆ ಔಷಧಿಯೂ ಸಹಾಯಕವಾಗಿದ್ದು ಕಳಪೆ ನುಸುಳದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಔಷಧಿ ಇದ್ದವರು ಸೌಭಾಗ್ಯವನ್ನು ಹೊಂದಿದವರಾಗಿದ್ದಾರೆ ಎಂಬುವುದು ಈಗಿನ ಕಾಲಕ್ಕೆ ಆನ್ವಯವಾಗುವ ಮಾತಾಗಿದೆ. ಇಂದಿನ ದಿನಮಾನದಲ್ಲಿ ಆಹಾರದಷ್ಟೇ ಪ್ರಾಮುಖ್ಯತೆಯನ್ನು ಔಷಧಿಗೂ ನೀಡಬೇಕಾದ ಅನಿವಾರ್ಯತೆ ಉಂಟಾಗಿದೆ. ರೋಗ ಬಂದಾಗ ಚಿಕಿತ್ಸೆ ನೀಡಲು ಆತ್ಮಸ್ಥೈರ್ಯ ತುಂಬುವಂತ ಕಾರ್ಯವಾಗಬೇಕಿದೆ.

ಔಷಧಿಯನ್ನು ತೆಗೆದುಕೊಳ್ಳಲು ಬರುವವರಿಗೆ ವ್ಯೆದ್ಯರು ಚೀಟಿಯಲ್ಲಿ ಬರೆದಿರುವುದ ಮಾತ್ರ ನೀಡಿ. ಅದಕ್ಕೆ ಪರ್ಯಾಯವಾಗಿ ಬೇರೆ ಮಾತ್ರೆ ಕೊಡಬೇಡಿ. ಇತ್ತೀಚೆಗಿನ ದಿನದಲ್ಲಿ ನಕಲಿ ಔಷಧಿಗಳ ಹಾವಳಿ ಹೆಚ್ಚಾಗಿದೆ. ಸರ್ಕಾರ ಇದರ ನಿಯಂತ್ರಣಕ್ಕೂ ಮುಂದಾಗಿದೆ. ನಕಲಿ ಎಂದು ಗೋತ್ತಾದರೆ ಅದರ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ, ಜನರಲ್ಲಿ ಜಾಗೃತಿಯನ್ನು ಮೂಡಿಸಿ ಎಂದರು.

ಸಹಾಯಕ ಔಷಧಿ ನಿಯಂತ್ರಕ ಕೆಂಪಯ್ಯ ಸುರೇಶ್ ಮಾತನಾಡಿ, ನೂತನವಾಗಿ ನಿರ್ಮಾಣ ಮಾಡಲಾದ ಕಟ್ಟಡ ಉತ್ತಮವಾಗಿದ್ದು ಸದುಪಯೋಗವಾಗಬೇಕು. ಕಾಲ ಕಾಲಕ್ಕೆ ಸರ್ಕಾರದ ಮಟ್ಟದಲ್ಲಿ ಜಾರಿಯಾಗುವ ಆದೇಶಗಳನ್ನು ಸಕಾಲಕ್ಕೆ ಸಂಘದ ಸದಸ್ಯರಿಗೆ ತಲುಪಿಸುವುದರ ಮೂಲಕ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕು. ಔಷಧಿ ವಿತರಣೆಯಲ್ಲಿ ಬೇರೆ ರಾಜ್ಯಗಳು ಆಭಿವೃದ್ದಿ ಕಾಣುತ್ತಿವೆ, ಆದರೆ ಕರ್ನಾಟಕ ಹಿಂದೆ ಇದೆ. ಇಲಾಖೆಯ ವೆಬ್ ಸೈಟನ್ನು ಪ್ರತಿ ದಿನ ನೋಡುವ ಹವ್ಯಾಸವನ್ನು ಬೆಳಸಿಕೊಂಡರೆ ಅನುಕೂಲವಾಗುತ್ತದೆ ಎಂದರು.

ಹರೀಶ್ ಜೈನ್ ಮಾತನಾಡಿ, ಯಾವುದೇ ಒಂದು ಸಂಘಕ್ಕೆ ಅವರದ್ದೇ ಆದ ಕಟ್ಟಡ ಇರುವುದು ಗೌರವದ ಸಂಕೇತ. ತಿಂಗಳಿಗೆ ಒಮ್ಮೆ ಸಭೆ ಮಾಡುವುದರ ಮೂಲಕ ವೃತ್ತಿಗೆ ಸಂಬಂಧಪಟ್ಟ ಮಾಹಿತಿ ಪಡೆಯಬೇಕು. ಸಮಾಜ ಮತ್ತು ವೃತ್ತಿಗೆ ಗೌರವವನ್ನು ನೀಬೇಕು ಎಂದರು.

ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತದ ಅಪರ ಔಷಧ ನಿಯಂತ್ರಕ ಡಾ.ಉಮೇಶ್ ಎಸ್. ಚಿರಾಗ್ ಫಾರ್ಮನ ಮಾಜಿ ಅಧ್ಯಕ್ಷ ಕೆ.ಇ.ಪ್ರಕಾಶ್, ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಪ್ರಾದೇಶಿಕ ಕಚೇರಿಯ ಉಪ ಔಷಧಿ ನಿಯಂತ್ರಕ ಡಾ.ಎಂ.ಖಲಿದ್ ಆಹ್ಮದ್ ಖಾನ್, ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಕಚೇರಿ ಚಿತ್ರದುರ್ಗ ವೃತ್ತದ ಸಹಾಯಕ ಔಷಧಿ ನಿಯಂತ್ರಕ ಸಿ.ಹೆಚ್.ಗಿರೀಶ್, ಎಸ್ ಜೆಎಂ ಕಾಲೇಜ್ ಆಫ್ ಫಾರ್ಮಸಿ ಪ್ರಾಂಶುಪಾಲ ಡಾ.ಟಿ.ಎಸ್.ನಾಗರಾಜ್ ಉಪಸ್ಥಿತರಿದ್ದರು. ಚಿತ್ರದುರ್ಗ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಸ್.ಓಂಕಾರಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಚಿತ್ರದುರ್ಗ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಚಂದ್ರಮೋಹನ್ ರೆಡ್ಡಿ ಸ್ವಾಗತಿಸಿದರು. ಉಪಾಧ್ಯಕ್ಷ ಎಸ್.ವಿರೇಶ್ ಪ್ರಸ್ತಾವಿಕ ಮಾತನಾಡಿದರು. ಬಿ.ಟಿ.ಬಸವರಾಜು ಕಾರ್ಯಕ್ರಮ ನಿರೂಪಿಸಿದರು.