ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಗರದ ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಪಾರ್ವತಿ ಸಾಲೇರ ಎಂಬಿಎ ವಿಭಾಗದಲ್ಲಿ ವಿಟಿಯು ವ್ಯಾಪ್ತಿಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದು ನಾಲ್ಕು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ (ಎನ್ಇಎಸ್) ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಹೇಳಿದರು.

ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಇನ್ನೋರ್ವ ವಿದ್ಯಾರ್ಥಿ ಎಂ.ವಿ.ಸಂಜಯ್ ಎಂಟೆಕ್ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ರಾಜ್ಯಕ್ಕೆ ಎಂಟನೇ ರ‍್ಯಾಂಕ್ ಗಳಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವತಿಯಿಂದ ಬೆಳಗಾವಿಯಲ್ಲಿ ಆಯೋಜಿಸಿದ್ದ 25ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ಮತ್ತು ಬಂಗಾರದ ಪದಕ ನೀಡಿ ಅಭಿನಂದಿಸಿದ್ದಾರೆ ಎಂದು ತಿಳಿಸಿದರು.

ಜೆಎನ್‌ಎನ್‌ಸಿಇ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪದವಿ ಪಡೆಯುವ ವೇಳೆ ಪಾರ್ವತಿ ಸಾಲೇರ ಆರು ಚಿನ್ನದ ಪದಕಗಳನ್ನು ಪಡೆದಿದ್ದರು. ಇದೀಗ ಎಂಬಿಎ ಸ್ನಾತಕೋತ್ತರ ಪದವಿಯಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಭದ್ರಾವತಿ ಶಾಸಕರಾಗಿದ್ದ ಸಾಲೇರ ಸಿದ್ದಪ್ಪ ಅವರ ಮೊಮ್ಮಗಳು. ಅವರ ತಾಯಿ ಐಶ್ವರ್ಯ ಸಾಲೇರ ಕೂಡ ಜೆ.ಎನ್.ಎನ್.ಸಿ.ಇ ಹಿರಿಯ ವಿದ್ಯಾರ್ಥಿಯಾಗಿದ್ದು, ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ಐದನೇ ರ‍್ಯಾಂಕ್ ಪಡೆದಿದ್ದರು ಎಂದು ವಿವರಿಸಿದರು.


ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದ ಪಾರ್ವತಿ ಸಾಲೇರ ಅವರಿಗೆ ಸಂಸ್ಥೆಯ ಅಮೃತ ಮಹೋತ್ಸವದ ಸ್ಮರಣಾರ್ಥವಾಗಿ, ಎನ್ಇಎಸ್ ಅಮೃತಮಹೋತ್ಸವ ಚಿನ್ನದ ಪದಕ ನೀಡಲಾಗುವುದು. ಫೆಬ್ರವರಿ ಕೊನೆಯ ವಾರದಲ್ಲಿ‌ ನಡೆಯುವ ಐಡಿಯಾ ಲ್ಯಾಬ್ ಉದ್ಘಾಟನಾ ಸಮಾರಂಭದಲ್ಲಿ ರ‍್ಯಾಂಕ್ ವಿಜೇತರನ್ನು ಆಡಳಿತ ಮಂಡಳಿಯಿಂದ ಅಭಿನಂದಿಸಲಾಗುವುದು. ಎನ್ಇಎಸ್ ಅಮೃತಮಹೋತ್ಸವ ಅಂಗವಾಗಿ, ವಿವಿಧ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಯಾವುದೇ ವಿಭಾಗದ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯ ಮಟ್ಟದಲ್ಲಿ ಮೊದಲ ರ‍್ಯಾಂಕ್ ಪಡೆದರೆ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.

ಎನ್ಇಎಸ್ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿ, ಕಾಲೇಜಿನಲ್ಲಿ ನಾವೀನ್ಯತೆ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. 2025ರಲ್ಲಿ ವಿವಿಧ ವಿಭಾಗಗಳ ಸುಮಾರು 14 ಉಪನ್ಯಾಸಕರು ಪಿಎಚ್.ಡಿ ಪದವಿ ಪಡೆದಿದ್ದು, ಇತ್ತೀಚೆಗೆ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪ್ರಮಾಣ ಪತ್ರ ಪಡೆದಿದ್ದಾರೆ. ಪ್ಲೇಸ್ಮೆಂಟ್ ಚಟುವಟಿಕೆಗಳು ವಿದ್ಯಾಸಂಸ್ಥೆಯಲ್ಲಿ ಸಕ್ರಿಯವಾಗಿ ನಡೆಯುತ್ತಿದೆ. ಟಿಸಿಎಸ್, ಐಬಿಎಂ ನಂತಹ ಪ್ರತಿಷ್ಟಿತ ಕಂಪನಿಗಳು ಈಗಾಗಲೇ ಉದ್ಯೋಗವಕಾಶ ನೀಡುವಂತಹ ಚಟುವಟಿಕೆಗಳಲ್ಲಿ ನಿರಂತರವಾಗಿ ನಡೆಯುತ್ತಿದೆ. ದೈನಂದಿನ ತರಗತಿಗಳ ಜೊತೆಯಲ್ಲಿ ಪ್ರಾಯೋಗಿಕ ಆಧಾರಿತ ಕಲಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ ಎಂದು ವಿವರಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ವೈ.ವಿಜಯಕುಮಾರ್ ಮಾತನಾಡಿ, ನ್ಯೂಜೆನ್ ಐಇಡಿಸಿ ಮೂಲಕ ಕೇಂದ್ರ ಸರ್ಕಾರದ ಆರ್ಥಿಕ ಸಹಕಾರದೊಂದಿಗೆ, ವಿದ್ಯಾರ್ಥಿಗಳ ನಾವೀನ್ಯಯುತ ಯೋಚನೆಗಳನ್ನು, ಯೋಜನೆಯಾಗಿ ರೂಪಿಸಿ ಸ್ವಂತ ಕಂಪನಿಗಳನ್ನು ಸ್ಥಾಪಿಸುವಂತೆ ಪ್ರೇರಣೆ ನೀಡುವಂತಹ ಪೂರಕ ವೇದಿಕೆ ನೀಡುವಲ್ಲಿ ಕಾಲೇಜು ಕ್ರಿಯಾಶೀಲವಾಗಿದೆ ಎಂದು ಹೇಳಿದರು.

ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಸಂಶೋಧನಾ ಡೀನ್ ಡಾ.ಎಸ್. ವಿ.ಸತ್ಯನಾರಾಯಣ, ಎಂಬಿಎ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಜಲೇಶ್ ಕುಮಾರ್, ಪೋಷಕರಾದ ಜ್ಯೋತಿ ಸಾಲೇರ, ಐಶ್ವರ್ಯ ಸಾಲೇರ, ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ, ಸುಭದ್ರ, ಸಂತೋಷ್ ಶಾನಭಾಗ್ ಹಾಜರಿದ್ದರು.

ವಿದ್ಯಾಸಂಸ್ಥೆಗೆ ಅಭಾರಿ: ಸಾಲೇರ

ಬಿಇ ಮತ್ತು ಎಂಬಿಎನಲ್ಲಿ ಮೊದಲ ರ‍್ಯಾಂಕ್ ಪಡೆಯಲು ಕಾಲೇಜು ಮತ್ತು ಉಪನ್ಯಾಸಕರಿಂದ ಪೂರಕ ವಾತಾವರಣವಿತ್ತು. ಅದಕ್ಕಾಗಿ ವಿದ್ಯಾಸಂಸ್ಥೆಗೆ ಅಭಾರಿಯಾಗಿದ್ದೇನೆ. ಈಗಾಗಲೇ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕಂಪನಿಯಲ್ಲಿ ಪ್ರಮುಖ ಹುದ್ದೆಯ ಅವಕಾಶ ದೊರೆತಿದ್ದು, ಇನ್ನಷ್ಟು ಉನ್ನತ ಹೆಜ್ಜೆಗಳ ಕುರಿತಾಗಿ ಯೋಜಿಸಲಿದ್ದೇನೆ ಎಂದು ರ‍್ಯಾಂಕ್ ವಿಜೇತ ವಿದ್ಯಾರ್ಥಿನಿ ಪಾರ್ವತಿ ಸಾಲೇರ ಹೇಳಿದರು.