ಮಣ್ಣಿನ ಮೂರ್ತಿಗಳ ಮಾರಾಟದ ಭರಾಟೆ ಜೋರು

| Published : Aug 27 2025, 01:02 AM IST

ಮಣ್ಣಿನ ಮೂರ್ತಿಗಳ ಮಾರಾಟದ ಭರಾಟೆ ಜೋರು
Share this Article
  • FB
  • TW
  • Linkdin
  • Email

ಸಾರಾಂಶ

ಗಣೇಶ ಪ್ರತಿಷ್ಠಾಪನೆಯು ಅತ್ಯಂತ ವೈಭವದಿಂದ ಬುಧವಾರ ನಡೆಯಲಿದ್ದು, ಮಂಗಳವಾರ ಮಾರುಕಟ್ಟೆಯಲ್ಲಿ ಬಗೆ ಬಗೆಯ ಮಣ್ಣಿನ ಗಣೇಶ ಮೂರ್ತಿಗಳ ಮಾರಾಟ, ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ

ಗಣೇಶ ಪ್ರತಿಷ್ಠಾಪನೆಯು ಅತ್ಯಂತ ವೈಭವದಿಂದ ಬುಧವಾರ ನಡೆಯಲಿದ್ದು, ಮಂಗಳವಾರ ಮಾರುಕಟ್ಟೆಯಲ್ಲಿ ಬಗೆ ಬಗೆಯ ಮಣ್ಣಿನ ಗಣೇಶ ಮೂರ್ತಿಗಳ ಮಾರಾಟ, ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿ ನಡೆಯಿತು.

ಪ್ರಥಮ ಪೂಜಿತ ಗಣೇಶ್‌ ಮೂರ್ತಿಗಳನ್ನು ಕಲಾವಿದರು ಅನೇಕ ವಿಧದ ರೂಪಗಳಲ್ಲಿ, ಒಂದಕ್ಕಿಂತ ಒಂದು ವಿಶಿಷ್ಟ, ವಿಭಿನ್ನ ಹಾಗೂ ಆಕರ್ಷಕವಾಗಿ ತಯಾರಿಸಿದ್ದಾರೆ.

ಹೀಗೆ ಆಕರ್ಷಕ ವಿವಿಧ ನಮೂನೆಯ 300ರಿಂದ 400 ಗಣೇಶನ ಮೂರ್ತಿಗಳನ್ನು ಪ್ರತಿ ವರ್ಷವೂ ತಯಾರಿಸಿ ಸ್ಥಳೀಯ ಜನರಿಗೆ ಮಾರಾಟ ಮಾಡುವಂತಹ ಕುಟುಂಬವು ಮರಿಯಮ್ಮನಹಳ್ಳಿಯಲ್ಲಿದೆ. ಅನೇಕ ವರ್ಷಗಳಿಂದಲೂ ಮಣ್ಣಿನ ಗಣೇಶನ ಮೂರ್ತಿಗಳನ್ನು ತಯಾರಿಕೆಯಲ್ಲಿ ಮರಿಯಮ್ಮನಹಳ್ಳಿಯ ಜೀನಗಾರ ಮನೆತನದವರು ಸಿದ್ಧ ಹಸ್ತರು.

ಈ ಮನೆತನದ ಮೂರನೇ ತಲೆಮಾರಾದ ವೀರಾಂಜನೇಯ ಇಂದಿಗೂ ಮಣ್ಣೆತ್ತು, ಗೌರಿಗಣೇಶ ಮೂರ್ತಿಗಳನ್ನು ತಯಾರಿಸುವ ಕೆಲಸ ಮುಂದುವರೆದಿದ್ದಾರೆ. ಇವರ ಪೂರ್ವಜರಾದ ಲೋಕಪ್ಪ ಜೀನಗಾರ, ನಂತರ ಅವರ ಮಗ ಬೆನಕಪ್ಪ ಮತ್ತು ಅವರ ಸೊಸೆ ಯಮುನಮ್ಮ ನಂತರ ಈಗ ಮೂರನೇ ತಲೆಮಾರಿನ ವೀರಾಂಜನೇಯ ಜೀನಗಾರ ತಮ್ಮ ಪಾರಂಪರಿಕ ವೃತ್ತಿ ಮುಂದುವರೆಸಿಕೊಂಡು ಬಂದಿದ್ದಾರೆ. 59 ವರ್ಷದ ಇವರು ಇಂದಿಗೂ ಸುಮಾರು 400-500 ವಿವಿಧ ಮಾದರಿಯ ಗಣೇಶ ಮೂರ್ತಿಗಳನ್ನು ತಯಾರಿಸುತ್ತಾರೆ. ಮೂರ್ತಿ ತಯಾರಿಕೆಯನ್ನು ಕರಗತ ಮಾಡಿಕೊಂಡಿದ್ದು, ಇವರ ಕೈಯಲ್ಲಿ ಅರಳಿದ ಗಣೇಶ ಮೂರ್ತಿ ನೋಡಿದರೆ ವಾರೇವ್ಹಾ ಎನ್ನುವಂತಿರುತ್ತವೆ.

ಇದೇ ರೀತಿಯಲ್ಲಿ ಇತ್ತೀಚೆಗೆ ಗಣೇಶ ಮೂರ್ತಿ ತಯಾರಿಕೆಯಲ್ಲಿ ಮತ್ತೊಂದು ಕುಟುಂಬ ತೊಡಗಿಕೊಂಡಿದೆ. ಕುಂಬಾರ್‌ ಕೊಟ್ರೇಶ್‌ ಅವರ ಕೈಯಲ್ಲಿಯೂ ಗಣೇಶ ಮೂರ್ತಿಗಳು ಅತ್ಯಂತ ಆಕರ್ಷಕವಾಗಿ ಮೂಡಿ ಬಂದಿವೆ.

ನಮ್ಮ ಪೂರ್ವಿಕರ ಕಾಲದಿಂದಲೂ ಗಣೇಶ ಹಬ್ಬಕ್ಕಾಗಿ ಮಣ್ಣಿನ ಗಣೇಶ ಮೂರ್ತಿ ತಯಾರಿಸುತ್ತಿದ್ದೇವೆ. ನಾನು ಚಿಕ್ಕವಯಸ್ಸಿನಿಂದಲೇ ಮಣ್ಣಿನ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಪರಿಸರಸ್ನೇಹಿ ಗಣಪತಿಗಳನ್ನು ಮಾತ್ರ ನಾವು ತಯಾರಿಸುತ್ತೇ ಎನ್ನುತ್ತಾರೆ ಮೂರ್ತಿ ತಯಾರಕ ವೀರಾಂಜನೇಯ ಜೀನಗಾರ.