ಸಾರಾಂಶ
ಕನ್ನಡಪ್ರಭ ವಾರ್ತೆ ಸಾಲಿಗ್ರಾಮ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಖಂಡಿಸಿ ಕೆ. ಆರ್. ನಗರ ವಿಧಾನಸಭಾ ಕ್ಷೇತ್ರದ ನೂರಾರು ಭಕ್ತರು ಸೋಮವಾರ ಕಾರು ರ್ಯಾಲಿ ನಡೆಸಿದರು.''ಧರ್ಮಸ್ಥಳ ಉಳಿಸಿ, ಆರೋಪಿಗಳ ಬಂಧಿಸಿ'' ಎಂಬ ಘೋಷವಾಕ್ಯದೊಂದಿಗೆ ಸುಮಾರು ಮುನ್ನೂರು ವಾಹನಗಳೊಂದಿಗೆ ರ್ಯಾಲಿ ನಡೆಯಿತು. ಮಾಜಿ ಸಚಿವ, ರಾಜ್ಯ ಜೆಡಿಎಸ್ ಕಾರ್ಯಾಧ್ಯಕ್ಷ ಸಾ.ರಾ. ಮಹೇಶ್ ನೇತೃತ್ವದಲ್ಲಿ ಮೈಸೂರಿನಿಂದ ಸಾಲಿಗ್ರಾಮದ ಯೋಗ ನರಸಿಂಹಸ್ವಾಮಿಯ ದೇವಾಲಯದ ಮುಂಭಾಗ ಪೂಜೆ ಸಲ್ಲಿಸಿ ವಾಹನಗಳಿಗೆ ಚಾಲನೆ ನೀಡಲಾಯಿತು.ಮಾಜಿ ಶಾಕ ಸಿ.ಎಸ್. ಪುಟ್ಟರಾಜು, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ಬಿ. ವಿವೇಕಾನಂದ, ಮಾಜಿ ಶಾಸಕ ಕೆ. ಮಹದೇವ್, ಜಿಪಂ ಮಾಜಿ ಸದಸ್ಯರು, ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್, ಸದಸ್ಯರು ಸೇರಿದಂತೆ ವಿವಿಧ ಮುಂಚೂಣಿಯ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಜೆಡಿಎಸ್ ಕಾರ್ಯಕರ್ತರು, ಮುಖಂಡರು ಈ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.ದಾರಿಯುದ್ಧಕ್ಕೂ ಪಟಾಕಿ ಸಿಡಿಸಿ ಜಯ ಘೋಷಗಳೊಂದಿಗೆ ಹರದನಹಳ್ಳಿ, ಕೇರಳಾಪುರ, ಕೊಣನೂರ್ ಶನಿವಾರ ಸಂತೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಮಾಜಿ ಸಚಿವ ಸಾ.ರಾ. ಮಹೇಶ್ ಮತ್ತು ಅವರ ತಂಡವನ್ನು ಹಿಂದೂ ಅಭಿಮಾನಿಗಳು ಬಿಜೆಪಿ ಕಾರ್ಯಕರ್ತರು, ಜೆಡಿಎಸ್ ಮುಖಂಡರು ಸ್ವಾಗತಿಸಿದರು. ಧರ್ಮಸ್ಥಳ ಪ್ರವೇಶಿಸುತ್ತಿದ್ದಂತೆ ಧರ್ಮಾಧಿಕಾರಿಗಳಾದ ಡಾ. ಶ್ರೀ ವೀರೇಂದ್ರ ಹೆಗ್ಗಡೆಯವರನ್ನು ಮುಖಂಡರು, ಕಾರ್ಯಕರ್ತರು ಒಡಗೂಡಿ ಭೇಟಿ ಮಾಡಿ ಅಭಿನಂದಿಸಿ ಮಾತನಾಡಿದ ಸಾ.ರಾ. ಮಹೇಶ್ ಅವರು, ನಿಮ್ಮ ಜೊತೆ ನಾವಿದ್ದೇವೆ. ಧೈರ್ಯವಾಗಿರಿ. ನೀವು ಪೂಜಿಸುವ ಶ್ರೀ ಮಂಜುನಾಥ ನಿಮ್ಮನ್ನು ಕಾಯುತ್ತಿದ್ದಾನೆ ಎಂದು ತಿಳಿಸಿದರು.ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗಡೆಯವರು ಅನ್ನ, ಅಕ್ಷರ, ಉದ್ಯೋಗ ಕಲ್ಪಿಸುವ ಮೂಲಕ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿಗಳ ವಿರುದ್ಧ ಮಾಡಿರುವ ಷಡ್ಯಂತ್ರ ಖಂಡನೀಯ. ಇದನ್ನು ಪ್ರತಿಯೊಬ್ಬರೂ ಖಂಡಿಸಬೇಕೆಂದು ಹೇಳಿದರು.ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಮಾತನಾಡಿ, ಸತ್ಯ ತಿಳಿಯದೆ ಏಕಾಏಕಿ ಧರ್ಮಕ್ಷೇತ್ರದ ಮೇಲೆ ಆರೋಪ ಮಾಡುವುದೇ ತಪ್ಪು. ಆದರೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿರುವುದು ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳಿಗೆ ಮಾಡಿದ ಅಪಮಾನವಲ್ಲ. ಇಡೀ ರಾಜ್ಯದ ಹಿಂದುಗಳಿಗೆ ಮಾಡಿರುವ ಅಪಮಾನವಾಗಿದೆ ತಕ್ಷಣ ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಂಡು ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆ ಅವರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು. ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ನನ್ನ ಪರವಾಗಿ ನಿಂತು ನನಗೆ ಧೈರ್ಯ ತುಂಬುವ ಜೊತೆಗೆ ನ್ಯಾಯದ ಪರ ಹೋರಾಟ ಮಾಡಲು ಸಿದ್ದರಿರುವ ಎಲ್ಲ ಕನ್ನಡಿಗರಿಗೂ ಹಾಗೂ ಹಿಂದುಗಳಿಗೂ ಮತ್ತು ಶ್ರೀ ಕ್ಷೇತ್ರದ ಪರವಾಗಿ ಜನಾಂದೋಲನವನ್ನು ಆರಂಭಿಸಲು ಸಹಕಾರ ನೀಡಿದ ಎಲ್ಲಾ ಮುಖಂಡರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ನಮ್ಮ ಕ್ಷೇತ್ರದ ಧ್ಯೇಯ ಒಂದೇ, ಶ್ರೀ ಮಂಜುನಾಥನ ಸೇವೆ ಮಾಡುವುದು. ಇಲ್ಲಿಗೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಜೊತೆಗೆ ಸಕಲ ಸೌಕರ್ಯಗಳನ್ನು ನೀಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ರ್ಯಾಲಿಯಲ್ಲಿ ಜೆಡಿಎಸ್ ಅಧ್ಯಕ್ಷರಾದ ಎಚ್.ಸಿ. ಕುಮಾರ್, ರಾಜಣ್ಣ, ಯುವ ಜೆಡಿಎಸ್ ಅಧ್ಯಕ್ಷ ಕರ್ತಾಳ್ ಮಧು, ಜಿಪಂ ಮಾಜಿ ಸದಸ್ಯರಾದ ದ್ವಾರಕಿ, ಎಂ.ಟಿ. ಕುಮಾರ್, ಮಾಜಿ ಮೇಯರ್ ಗಳಾದ ಚಿನ್ನಿರವಿ, ಆರ್. ಲಿಂಗಪ್ಪ, ಮುಖಂಡರಾದ ಕುಚೇಲ, ರಮೇಶ ಸೇರಿದಂತೆ ನೂರಾರು ಮುಖಂಡರು ಇದ್ದರು.