ಶಾಲೆಯಲ್ಲಿ ಸಾಲಿಗುಡಿ ದ್ವೈಮಾಸಿಕ ಪತ್ರಿಕೆ

| Published : Nov 28 2024, 12:33 AM IST

ಸಾರಾಂಶ

ಕಿರೇಸೂರ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ಸಾಹಸಕ್ಕೆ ಕೈಹಾಕಿದ್ದಾರೆ. ಒಟ್ಟು 8 ಪುಟ ಹೊಂದಿರುವ ಈ ಪತ್ರಿಕೆ ಪ್ರತಿ 2 ತಿಂಗಳಿಗೊಮ್ಮೆ ಪ್ರಕಟಗೊಳ್ಳುತ್ತದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ

ಮೊಬೈಲ್‌ ಯುಗದಲ್ಲಿ ಪತ್ರಿಕೆ ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂಬ ಆರೋಪವಿದೆ. ಆದರೆ, ಇಲ್ಲಿನ ಶಾಲೆಯೊಂದರಲ್ಲಿ ಮಕ್ಕಳ ಸಂಪಾದಕತ್ವ ಮಂಡಳಿಯಿಂದಲೇ ದ್ವೈಮಾಸಿಕ ಪತ್ರಿಕೆಯೊಂದು ಎರಡೂವರೆ ವರ್ಷಗಳಿಂದ ಯಶಸ್ವಿಯಾಗಿ ಪ್ರಕಟಗೊಳ್ಳುತ್ತಿದೆ. ಜತೆಗೆ ಗ್ರಾಮದ ಮನೆ-ಮನೆಯಲ್ಲೂ ಇದೇ ಪತ್ರಿಕೆ ಕಾಣಸಿಗುತ್ತಿದೆ.

ಹೌದು... ತಾಲೂಕಿನ ಕಿರೇಸೂರ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ಸಾಹಸಕ್ಕೆ ಕೈಹಾಕಿದ್ದಾರೆ. ಒಟ್ಟು 8 ಪುಟ ಹೊಂದಿರುವ ಈ ಪತ್ರಿಕೆ ಪ್ರತಿ 2 ತಿಂಗಳಿಗೊಮ್ಮೆ ಪ್ರಕಟಗೊಳ್ಳುತ್ತದೆ. ಇಂದಿಗೂ ಗ್ರಾಮೀಣ ಭಾಗಗಳಲ್ಲಿ ಶಾಲೆಗಳಿಗೆ ಸಾಲಿಗುಡಿ ಎಂದೇ ಕರೆಯುತ್ತಾರೆ. ಇದೇ ಕಾರಣದಿಂದಲೇ ಮಕ್ಕಳು-ಶಾಲೆ-ಸಮುದಾಯದೊಂದಿಗೆ ಅನ್ಯೋನ್ಯತೆ ಹೊಂದುವಂತೆಯೇ ಈ ಪತ್ರಿಕೆಯ ಸಂಪಾದಕರಾದ ಶಾಲೆಯ ಸಹ ಶಿಕ್ಷಕ ಡಾ. ಲಿಂಗರಾಜ ರಾಮಾಪುರ ಅವರು "ಸಾಲಿಗುಡಿ " ಎಂಬ ಹೆಸರಿನಲ್ಲಿ ಈ ಪತ್ರಿಕೆ ಹೊರತಂದಿದ್ದಾರೆ.

ಮಕ್ಕಳಲ್ಲಿ ಓದುವ ಮತ್ತು ಬರೆಯುವ ಸಂಸ್ಕೃತಿಯ ಭಾಗವಾಗಿ ಅಲ್ಲದೇ, ಮಕ್ಕಳಲ್ಲಿ ಕಲೆ, ಸಾಹಿತ್ಯ, ಸಂಗೀತದ ಚಟುವಟಿಕೆ ಪ್ರೋತ್ಸಾಹಿಸುವ ಉದ್ದೇಶ ಈ ಪತ್ರಿಕೆ ಹೊಂದಿದೆ. ಸಾಹಿತ್ಯಿಕ ಚಟುವಟಿಕೆಗಳು ಮಕ್ಕಳ ಭಾಷಾ ಕೌಶಲ್ಯ ಸುಧಾರಿಸುತ್ತವೆ. ಭಾಷೆ ಮಕ್ಕಳ ಭಾವನೆ ಅರಳಿಸುತ್ತದೆ. ಇಂತಹ ಸೃಜನಾತ್ಮಕ ಬರಹವನ್ನು ಅರಳಿಸುವ ಕಾರಣದಿಂದ ಸಾಲಿಗುಡಿಗೆ "ಮಕ್ಕಳ ಸೃಜನಶೀಲತೆಯ ಕನ್ನಡಿ " ಎಂಬ ಅಡಿಬರಹ ನೀಡಲಾಗಿದೆ.

ಏನೆಲ್ಲ ಇದೆ?:

ಪತ್ರಿಕೆಯಲ್ಲಿ ಸಂಪಾದಕೀಯ, ನಮ್ಮೂರು, ನಮ್ಮೂರ ಸಾಧಕರು, ಫೋಟೋ ಅಲ್ಬಮ್, ತಿಂಗಳ ವಿಶೇಷ, ಕಥೆ-ಕಾದಂಬರಿ, ಶಾಲೆಯ ವಿದ್ಯಾರ್ಥಿಗಳ, ಶಿಕ್ಷಕರ, ಗ್ರಾಮದ ಪ್ರಮುಖರ ಬರಹಗಳು, ಇಂಗ್ಲಿಷ್‌ನಲ್ಲಿ ಫಜಲ್‌, ಕಲೆ, ಸಂಗೀತ, ಸಾಹಿತ್ಯ ಕುರಿತು ಮಾಹಿತಿ, ಮುಖ್ಯವಾಗಿ ತಿಂಗಳ ಹಾಡು ಎಂಬ ಕಾಲಂನಲ್ಲಿ ಪ್ರಮುಖ ಕವಿಗಳ ಹಾಡನ್ನು ಪ್ರಕಟಿಸುವುದರೊಂದಿಗೆ ಅವರ ಇಂಪಾದ ದ್ವನಿ ಕೇಳಲು ಕ್ಯೂಆರ್‌ ಕೋಡ್‌ ಸ್ಕ್ಯಾನ್‌ನ ವ್ಯವಸ್ಥೆ ಮಾಡಲಾಗಿದೆ. ಶಾಲೆಗಳಲ್ಲಿ ನಡೆದ ಕಾರ್ಯಕ್ರಮಗಳ ಕುರಿತು ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ಪ್ರಕಟಿಸಲಾಗುತ್ತದೆ.

ಕಸಾಪ ಸ್ಫೂರ್ತಿ:

ಕಳೆದ ಎರಡೂವರೆ ವರ್ಷಗಳ ಹಿಂದೆ ಜಿಲ್ಲಾ ಕಸಾಪದ ಅಡಿ "ಶಾಲಾ ಅಂಗಳದಲ್ಲಿ ಸಾಹಿತ್ಯ " ಎಂಬ ಶೀರ್ಷಿಕೆಯ ಅಡಿ ಶಾಲೆಯಲ್ಲಿ ವರ್ಷಪೂರ್ತಿ ಸಂವಾದ ಮತ್ತು ಕಾರ್ಯಾಗಾರ ಹಮ್ಮಿಕೊಳ್ಳುವುದರೊಂದಿಗೆ ಮಕ್ಕಳಿಗೆ ಕಲೆ, ಸಾಹಿತ್ಯ, ಸಂಗೀತ ದಿಗ್ಗಜರ ಕುರಿತು ಹಲವು ಹಿರಿಯ ಸಾಹಿತಿ, ಕವಿಗಳನ್ನು ಶಾಲೆಗೆ ಕರೆಯಿಸಿ ಮಕ್ಕಳಿಗೆ ಮಾಹಿತಿ ನೀಡುವ ಕಾರ್ಯ ಮಾಡಿತ್ತು. ಆಗ ಮಕ್ಕಳ ಸಂಪಾದಕತ್ವ ಮಂಡಳಿಯಿಂದ ಪತ್ರಿಕೆ ಆರಂಭಿಸಬೇಕು ಎಂಬ ಕಲ್ಪನೆ ಬಂದಿತು. ಆಗ ಗ್ರಾಮಸ್ಥರು ಹಾಗೂ ಶಾಲೆಯ ಎಲ್ಲ ಶಿಕ್ಷಕರು ಸೇರಿ "ಸಾಲಿಗುಡಿ " ಎಂಬ ಹೆಸರಿನಲ್ಲಿ ದ್ವೈಮಾಸಿಕ ಪತ್ರಿಕೆ ಆರಂಭಿಸಲು ಯೋಚಿಸಿ 2022ರ ಏಪ್ರಿಲ್‌ನಲ್ಲಿ ಸಾಹಿತಿ ಶಂಕರ ಹಲಗತ್ತಿ ಅವರಿಂದ ಈ ಪತ್ರಿಕೆ ಬಿಡುಗಡೆಗೊಳಿಸಲಾಗಿದ್ದು, ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

ಪ್ರತಿ ಮನೆಯಲ್ಲೂ ಪತ್ರಿಕೆ:

ಸುಮಾರು 3500 ಜನಸಂಖ್ಯೆ ಹೊಂದಿರುವ ಪುಟ್ಟಗ್ರಾಮ ಕಿರೇಸೂರ. ಇಲ್ಲಿ 840ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿವೆ. ಇಲ್ಲಿನ ಯಾವುದೇ ಮನೆಗೆ ಹೋಗಿ ನೋಡಿದರೂ ಈ "ಸಾಲಿಗುಡಿ " ಪತ್ರಿಕೆ ಕಾಣಸಿಗುತ್ತದೆ. ಪ್ರತಿ ಬಾರಿ 500ಕ್ಕೂ ಅಧಿಕ ಪ್ರತಿ ಮುದ್ರಿಸಲಾಗುತ್ತದೆ. ನಂತರ ಗ್ರಾಮದ ಮನೆಗಳಿಗೆ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಪತ್ರಿಕೆಯ ಮುದ್ರಣಕ್ಕೆ ಬೇಕಾದ ಹಣಕಾಸಿನ ನೆರವನ್ನು ಗ್ರಾಮಸ್ಥರೇ ನೋಡಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ.

ಸಾಲಿಗುಡಿಯಿಂದ ಮಕ್ಕಳ ಭಾವನೆ ಅಭಿವ್ಯಕ್ತ...

ಮಕ್ಕಳಲ್ಲಿ ಸುಪ್ತವಾಗಿರುವ ಓದು, ಬರಹ ಕಲೆಯನ್ನು ಹೊರತರುವ, ಅವರ ಭಾವನೆ ಅಭಿವ್ಯಕ್ತಗೊಳಿಸಲು ''''ಸಾಲಿಗುಡಿ'''' ಸಹಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಓದಿನಿಂದ ವಿಮುಖವಾಗುತ್ತಿರುವ ಮಕ್ಕಳಿಗೆ ಓದಿನ ರುಚಿ ಬೆಳೆಸಲೆಂದೇ ಮಕ್ಕಳಿಂದ ಮಕ್ಕಳಿಗಾಗಿ ತರುವ ಈ ಪತ್ರಿಕೆ ನಿಜಕ್ಕೂ ಮಕ್ಕಳಲ್ಲಿ ಸಾಹಿತ್ಯದ ರುಚಿ ಬೆಳೆಸಲು ಸಹಕಾರಿಯಾಗಿದೆ. ದಿನನಿತ್ಯದ ಬದುಕಿನಲ್ಲಿ ಮಕ್ಕಳು ಕಂಡ ಅನುಭವಗಳಿಗೆ ಒಂದು ರೂಪ ಕೊಡುವಲ್ಲಿ ಈ ಪತ್ರಿಕೆ ಕೈಜೋಡಿಸಿದೆ ಎಂದು ಸಂಪಾದಕ, ಶಾಲೆಯ ಸಹ ಶಿಕ್ಷಕ ಡಾ. ಲಿಂಗರಾಜ ರಾಮಾಪೂರ ಕನ್ನಡಪ್ರಭಕ್ಕೆ ತಿಳಿಸಿದರು.

ಒಂದು ಶಾಲೆಯಲ್ಲಿ ಕ್ರಿಯಾಶೀಲ ಶಿಕ್ಷಕನಿದ್ದರೆ ಏನೆಲ್ಲ ಚಟುವಟಿಕೆ ಮಾಡಬಹುದು ಎಂಬುದಕ್ಕೆ ಡಾ. ಲಿಂಗರಾಜ ರಾಮಾಪೂರ ಉತ್ತಮ ಉದಾಹರಣೆ. ಮಕ್ಕಳಲ್ಲಿ ಅಡಕವಾಗಿರುವ ಕಲೆ, ಸಾಹಿತ್ಯ ಪ್ರತಿಭೆ ತೋರ್ಪಡಿಸಲು ಕಿರೇಸೂರ ಶಾಲೆಯಲ್ಲಿ ಸಾಲಿಗುಡಿ ಹೆಸರಿನಲ್ಲಿ ದ್ವೈಮಾಸಿಕ ಪತ್ರಿಕೆ ಹೊರತಂದಿರುವುದು ಶ್ಲಾಘನೀಯ ಎಂದು ಸಾಹಿತಿ ಶಂಕರ ಹಲಗತ್ತಿ ಹೇಳಿದರು.