ಸಾರಾಂಶ
ಯಾರದೋ ನಿರ್ಲಕ್ಷ್ಯಕ್ಕೆ ನದಿಯ ಹಿನ್ನೀರು ನುಗ್ಗಿ ನೂರಾರು ಎಕರೆ ಭತ್ತ ಬೆಳೆಯುವ ಗದ್ದೆಗಳು ಬರಡಾಗಿದ್ದು, ತಕ್ಷಣ ಕ್ರಮ ಕೈಗೊಂಡು ರೈತರ ಹಿತ ರಕ್ಷಿಸಬೇಕಿದೆ.
ಕುಮಟಾ: ತಾಲೂಕಿನ ಮಾಸೂರು- ಲುಕ್ಕೇರಿ ಜಂತ್ರಡಿ ಸೇತುವೆ ಹಿನ್ನೀರು ಕ್ಷೇತ್ರದ ಭತ್ತದ ಗದ್ದೆಗಳಿಗೆ ಶನಿವಾರ ಉಪ್ಪು ನೀರು ನುಗ್ಗಿ ತೀವ್ರ ಸಮಸ್ಯೆಯಾಗಿದೆ. ಪ್ರತಿವರ್ಷ ಎರಡು ಬೆಳೆ ತೆಗೆಯುತ್ತಿದ್ದ ಇಲ್ಲಿನ ರೈತರ ಗದ್ದೆಗಳು ಅಪಾರ ಪ್ರಮಾಣದ ಉಪ್ಪು ನೀರು ಇಂಗಿ ಅಕ್ಷರಶಃ ಬರಡಾದಂತಾಗಿದೆ.
ಈ ಕುರಿತು ವಿವರಿಸಿದ ಹಳಕಾರದ ನಾಗರಾಜ ಭಟ್, ನಮ್ಮ ಭಾಗದ ಭತ್ತದ ಗದ್ದೆಗಳಲ್ಲಿ ಲುಕ್ಕೇರಿ ಸೇತುವೆಯಿಂದ ಮೇಲಕ್ಕೆ ಉಕ್ಕಿ ಬರುವ ನೀರು ನುಗ್ಗಿದೆ. ಈ ರೀತಿ ಉಪ್ಪು ನೀರು ತುಂಬಿದರೆ ಗದ್ದೆಯಲ್ಲಿ ಎರಡು ಬೆಳೆಯಿರಲಿ, ಒಂದೂ ಬೆಳೆ ಬೆಳೆಯಲೂ ಸಾಧ್ಯವಿಲ್ಲ. ಇದಕ್ಕೆ ಮಾಸೂರು- ಲುಕ್ಕೇರಿ ಸೇತುವೆಯಲ್ಲಿ ಗೇಟ್ ಹಾಕದಿರುವುದೇ ಕಾರಣ. ಚಿಕ್ಕ ನೀರಾವರಿ ಅಧಿಕಾರಿಗಳು ರೈತರ ಬದುಕಿನ ಜತೆ ಆಟ ಆಡುತ್ತಿದ್ದಾರೆ.ಲುಕ್ಕೇರಿ ಸೇತುವೆ ಅನಾದಿ ಕಾಲದಿಂದ ಜಂತ್ರಡಿ ಸೇತುವೆಯಾಗಿದ್ದು, ಅಲ್ಲಿ ಉಪ್ಪು ನೀರಿನ ಭರತ ಇಳಿತ ನಿಯಂತ್ರಿಸಲು ಇರುವ ಹಲಗೆಗಳನ್ನು ಹಾಕದೇ ಈ ರೀತಿ ತೊಂದರೆ ಕೊಡುತ್ತಿದ್ದಾರೆ. ಇಡೀ ಊರಿನಲ್ಲಿ ಇದೇ ರೀತಿ ಎಲ್ಲರ ಗದ್ದೆಗಳಿಗೆ ಉಪ್ಪು ನೀರು ತುಂಬಿದೆ ಎಂದರು.
ಚಿಕ್ಕ ನೀರಾವರಿ ಇಲಾಖೆಯ ಎಂಜಿನಿಯರ್ ಅಮಿತಾ ತಳೆಕರ ಪ್ರಕಾರ, ನ್ಯಾಯಾಲಯದ ಆದೇಶದಂತೆ ಲುಕ್ಕೇರಿ ಸೇತುವೆಯ ವಿಚಾರದಲ್ಲಿ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಅದರಂತೆ ಲುಕ್ಕೇರಿ ಸೇತುವೆಯ ಹಲಗೆಗಳ ನಿರ್ವಹಣೆಯನ್ನು ಸ್ಥಳೀಯವಾಗಿ ಮಾರಪ್ಪ ಪಟಗಾರ ಎಂಬವರ ಅಧ್ಯಕ್ಷತೆಯಲ್ಲಿ ಸೊಸೈಟಿ ರಚಿಸಿ ಜವಾಬ್ದಾರಿ ವಹಿಸಿದ್ದೇವೆ. ಹಲಗೆಗಳನ್ನು ಭರತ- ಇಳಿತ ಗಮನಿಸಿ ಕಾಲಕಾಲಕ್ಕೆ ಹಾಕಿ ತೆಗೆಯುವ ಜವಾಬ್ದಾರಿ ಅವರದ್ದೇ ಆಗಿದೆ. ನಾವು ಮಧ್ಯ ಪ್ರವೇಶಿಸಲಾಗದು ಎನ್ನುತ್ತಾರೆ.ಒಟ್ಟಾರೆ ಯಾರದೋ ನಿರ್ಲಕ್ಷ್ಯಕ್ಕೆ ನದಿಯ ಹಿನ್ನೀರು ನುಗ್ಗಿ ನೂರಾರು ಎಕರೆ ಭತ್ತ ಬೆಳೆಯುವ ಗದ್ದೆಗಳು ಬರಡಾಗಿದ್ದು, ತಕ್ಷಣ ಕ್ರಮ ಕೈಗೊಂಡು ರೈತರ ಹಿತ ರಕ್ಷಿಸಬೇಕಿದೆ.ಬಾರ್ಜ್‌ನಲ್ಲಿ ನಿಗದಿತ ಶುಲ್ಕ ಪಡೆಯಲು ಸೂಚನೆ
ಗೋಕರ್ಣ: ತದಡಿ- ಅಘನಾಶಿನಿ ನಡುವೆ ಸಂಚರಿಸುವ ಬಾರ್ಜ್‌ನಲ್ಲಿ ಪ್ರಯಾಣಿಕರಿಂದ ನಿಗದಿತ ಪ್ರಯಾಣ ದರಕ್ಕಿಂತ ಹೆಚ್ಚು ಪಡೆಯುವುದು ಹಾಗೂ ಸಾರ್ಮಥ್ಯಕ್ಕಿಂತ ಹೆಚ್ಚು ಜನರನ್ನು ಕರೆದುಕೊಂಡು ಹೋಗುತ್ತಿರುವ ಬಗ್ಗೆ ಸಾರ್ವಜನಿಕ ದೂರು ಬಂದ ಹಿನ್ನೆಲೆಯಲ್ಲಿ ಕರಾವಳಿ ಕಾವಲು ಪೊಲೀಸ್ ಪಡೆಯ ಅಧಿಕಾರಿಗಳು ಶುಕ್ರವಾರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.ಕರಾವಳಿ ಪೊಲೀಸ್ ಕುಮಟಾ ಠಾಣೆಯ ಪಿಎಸ್‌ಐ ಅನೂಪ್ ನಾಯಕ ಹಾಗೂ ಸಿಬ್ಬಂದಿ ಪ್ರಯಾಣಿಕರಿಂದ ಮಾಹಿತಿ ಪಡೆದರು. ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆಯವುದು ಕಂಡುಬಂತು. ಬಂದರು ಇಲಾಖೆ ನಿಗದಿಪಡಿಸಿದ ದರಪಟ್ಟಿಯಂತೆ ಶುಲ್ಕ ಸ್ವೀಕರಿಸಬೇಕು. ಪ್ರಯಾಣಿಕರಿಗೆ ಲೈಫ್ ಜಾಕೆಟ್ ನೀಡಬೇಕು. ಬಾರ್ಜ್ ಸಾಮರ್ಥ್ಯಕ್ಕೆ ಅನುಗಣವಾಗಿ ಜನರನ್ನು ಕರೆದೊಯ್ಯಬೇಕು ಎಂದು ಪಿಎಸ್‌ಐ ಬಾರ್ಜ್‌ನವರಿಗೆ ತಿಳಿವಳಿಕೆ ನೀಡಿದರು. ಪ್ರಸ್ತುತ ಜನರಿಗೆ ₹೧೦ ಹಾಗೂ ಬೈಕ್‌ಗೆ ₹10 ಶುಲ್ಕ ಪಡೆಯಲಾಗುತ್ತಿದೆ.