ಉಗ್ರರನ್ನು ನಾಶ ಮಾಡಿದ ಹೆಮ್ಮೆಯ ಸೈನಿಕರಿಗೆ ನಮನ

| Published : May 24 2025, 12:58 AM IST

ಸಾರಾಂಶ

ಶಿರಾ ನಗರದಲ್ಲಿ ಇಂದು ಪಕ್ಷಾತೀತವಾಗಿ ರಾಷ್ಟ್ರೀಯ ರಕ್ಷಣೆಗಾಗಿ ನಾಗರೀಕರು ಎಂಬ ಘೋಷ ವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ಬೃಹತ್ ತಿರಂಗಾ ಯಾತ್ರೆ

ಕನ್ನಡಪ್ರಭ ವಾರ್ತೆ ಶಿರಾ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಮ್ಮ ಮಾತೆಯರ, ಸಹೋದರಿಯರ ಸಿಂದೂರವನ್ನು ಅಳಿಸಿದ ಪಾಪಿ ಪಾಕಿಸ್ತಾನದ ಭಯೋತ್ಪಾದಕರನ್ನು ನಮ್ಮ ದೇಶದ ಹೆಮ್ಮೆಯ ಸೈನಿಕರು ಆಪರೇಷನ್ ಸಿಂದೂರದ ಮೂಲಕ ಉಗ್ರರ ನೆಲೆಗಳನ್ನು ನಾಶ ಮಾಡಿ, ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾರೆ. ನಮ್ಮೆಲ್ಲರ ಸೈನಿಕರಿಗೂ ನಮ್ಮ ನಮನಗಳು ಎಂದು ಮಧುಗಿರಿ ವಿಭಾಗದ ಬಿಜೆಪಿ ಮುಖಂಡ ಬಿ.ಕೆ.ಮಂಜುನಾಥ್ ಹೇಳಿದರು.

ಆಪರೇಷನ್ ಸಿಂದೂರ ಯಶಸ್ಸಿನ ಹಿನ್ನೆಲೆಯಲ್ಲಿ ಶಿರಾ ನಗರದಲ್ಲಿ ಇಂದು ಪಕ್ಷಾತೀತವಾಗಿ ರಾಷ್ಟ್ರೀಯ ರಕ್ಷಣೆಗಾಗಿ ನಾಗರೀಕರು ಎಂಬ ಘೋಷ ವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ಬೃಹತ್ ತಿರಂಗಾ ಯಾತ್ರೆಯಲ್ಲಿ ಅವರು ಮಾತನಾಡಿದರು. ನಗರ ಬಿಜೆಪಿ ಅಧ್ಯಕ್ಷ ಗಿರಿಧರ್ ಮಾತನಾಡಿ ಭಾರತೀಯ ಹೆಮ್ಮೆಯ ಸೈನಿಕರು ಪಾಕಿಸ್ತಾನದ ವಾಯು ನೆಲೆಗಳನ್ನು ಧ್ವಂಸ ಮಾಡಿ ಭಯೋತ್ಪಾದಕರನ್ನು ಸದೆಬಡಿದಿದ್ದಾರೆ. ಭಾರತದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಯೋತ್ಪಾದನೆ ಬೆಂಬಲಿಸುವವರಿಗೆ ಉಳಿಗಾಲವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ಇಡೀ ವಿಶ್ವಕ್ಕೆ ಭಾರತದ ಶಕ್ತಿ ಸಾಮರ್ಥ್ಯವನ್ನು ಅನಾವರಣಗೊಳಿಸಿದ್ದಾರೆ. ಭಾರತೀಯ ಯೋಧರಿಗೆ ಶಕ್ತಿ ತುಂಬವ ಸಲುವಾಗಿ ನಾವು ಇಂದು ಬೃಹತ್ ತಿರಂಗಾ ಯಾತ್ರೆ ಹಮ್ಮಿಕೊಂಡಿದ್ದೇವೆ ಎಂದರು. ಮಧುಗಿರಿ ವಿಭಾಗದ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ನಗರಸಭಾ ಸದಸ್ಯೆ ಉಮಾ ವಿಜಯರಾಜ್ ಮಾತನಾಡಿ ಭಾರತೀಯರೆಲ್ಲವೂ ಒಂದೇ ಎಂದು ಭಾರತೀಯ ಯೋಧರಿಗೆ ಸಂದೇಶ ನೀಡಲು ಬೃಹತ್ ತಿರಂಗಾ ಯಾತ್ರೆ ಹಮ್ಮಿಕೊಂಡಿದ್ದೇವೆ. ನಮ್ಮ ಹೆಣ್ಣು ಮಕ್ಕಳ ಸಿಂದೂರ ಅಳಿಸಿದವರಿಗೆ ಸೈನಿಕರು ತಕ್ಕ ಪಾಠ ಕಲಿಸಿದ್ದಾರೆ ಎಂದರು. ಬೃಹತ್ ತಿರಂಗಾ ಯಾತ್ರೆಯು ನಗರದ ಅಂಬೇಡ್ಕರ್ ಸರ್ಕಲ್‌ನಿಂದ ಹೊರಟು ಪ್ರಮುಖ ರಸ್ತೆ, ಕಲ್ಯಾಣ ಮಂಟಪ ರಸ್ತೆ ಮೂಲಕ ಹಳೇ ರಾಷ್ಟ್ರೀಯ ಹೆದ್ದಾರಿ, ಸರಕಾರಿ ಆಸ್ಪತ್ರೆ ಮುಂಭಾಗದಿಂದ ಅಂಬೇಡ್ಕರ್ ವೃತ್ತ ತಲುಪಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮುಕ್ತಾಯಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಧುಗಿರಿ ವಿಭಾಗದ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ಮಾಗೋಡು ಪ್ರತಾಪ್, ಪ್ರಧಾನ ಕಾರ್ಯದರ್ಶಿ ಯಂಜಲಗೆರೆ ಮೂರ್ತಿ, ಶಿರಾ ಗ್ರಾಮಂತರ ಮಂಡಲ ಬಿಜೆಪಿ ಅಧ್ಯಕ್ಷ ಈರಣ್ಣ ಪಟೇಲ್, ಮಾಜಿ ಅಧ್ಯಕ್ಷ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ಕೊಟ್ಟ ಡಿ.ಪಿ. ರಂಗನಾಥ್, ನಗರಸಭಾ ಸದಸ್ಯ ರಂಗರಾಜು, ಮಾಜಿ ಸದಸ್ಯ ಸಂತೇಪೇಟೆ ನಟರಾಜ್, ಶಾರದಾ ಶಿವಕುಮಾರ್, ಮಾಜಿ ಸೈನಿಕರಾದ ಸುಬೇದಾರ್ ಬಸಪ್ಪ.ಜಿ, ಎಸಿಪಿ ಹವಾಲ್ದಾರ್ ವಸಂತ.ಬಿ.ಆರ್, ಸುಬೇದಾರ್ ಪ್ರಕಾಶ್.ಜಿ.ಎಚ್, ದಯಾನಂದ್.ಜಿ, ಮುಖಂಡರಾದ ಮುದಿಮಡು ಮಂಜುನಾಥ್, ಕೃಷ್ಣಮೂರ್ತಿ, ಮುರುಳಿ, ಶ್ರೀಧರ್, ಚಿಕ್ಕನಕೋಟೆ ಕರಿಯಣ್ಣ, ಲಕ್ಷ್ಮೀನಾರಾಯಣ, ಹನುಮಂತನಾಯ್ಕ, ಬೊಪ್ಪರಾಯಪ್ಪ, ಶಿವಣ್ಣ, ನಟರಾಜ್, ಸುರೇಶ್, ಮಹಿಳಾ ಘಟಕದ ಪದ್ಮ ಮಂಜುನಾಥ್, ನಾಗರತ್ನಮ್ಮ, ಸೇರಿದಂತೆ ಹಲವರು ಹಾಜರಿದ್ದರು.