ಮನುಷ್ಯ ದ್ವೇಷ ಬಿಟ್ಟಾಗ ಉದ್ಧಾರ ಸಾಧ್ಯ

| Published : Dec 21 2024, 01:20 AM IST

ಸಾರಾಂಶ

ಮಾನವನು ಉತ್ತಮ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಜೀವನಕ್ಕೊಂದು ಅರ್ಥ ಬರುತ್ತದೆ ಎಂದು ಮಾಡಾಳು ಶ್ರೀ ರುದ್ರಮನಿ ಮಹಾಸ್ವಾಮಿಗಳು ಕರೆ ನೀಡಿದರು. ನಾಟಕಗಳು ವೈಚಾರಿಕ ಹಿನ್ನೆಲೆಯನ್ನು ಪ್ರತಿಬಿಂಬಿಸುತ್ತದೆ. ಸಮಾಜಕ್ಕೆ ಸಂದೇಶಗಳನ್ನು ನೀಡುತ್ತವೆ. ದ್ವೇಷ, ಅಸೂಯೆ ಒಳ್ಳೆಯದಲ್ಲ, ಸಮಾಜದಲ್ಲಿ ಒಬ್ಬ ಮುಂದುವರೆದನೆಂದರೆ ಅವನ ಕಾಲು ಎಳೆಯುವುದು ತರವಲ್ಲ, ಕಾಲು ಎಳೆಯುವವರು ಯಾವಾಗಲೂ ಕೆಳಗೆ ಇರುತ್ತಾರೆ, ಎಂಬುದನ್ನು ಅವರು ನೆನಪು ಮಾಡಿಕೊಟ್ಟರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಮಾನವನು ಉತ್ತಮ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಜೀವನಕ್ಕೊಂದು ಅರ್ಥ ಬರುತ್ತದೆ ಎಂದು ಮಾಡಾಳು ಶ್ರೀ ರುದ್ರಮನಿ ಮಹಾಸ್ವಾಮಿಗಳು ಕರೆ ನೀಡಿದರು.

ನಗರದ ವೆಂಕಟೇಶ್ವರ ಕಲಾಮಂದಿರದಲ್ಲಿ ಸಾದು ವೀರಶೈವ ಸಮಾಜ ಶ್ರೀ ಶಿವಕುಮಾರ ಬಳಗ ತರಳಬಾಳು ಯುವ ವೇದಿಕೆ ಮತ್ತು ತರಳಬಾಳು ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಶಿವ ಸಂಚಾರ ನಾಟಕ ಉತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನಾಟಕಗಳು ವೈಚಾರಿಕ ಹಿನ್ನೆಲೆಯನ್ನು ಪ್ರತಿಬಿಂಬಿಸುತ್ತದೆ. ಸಮಾಜಕ್ಕೆ ಸಂದೇಶಗಳನ್ನು ನೀಡುತ್ತವೆ. ದ್ವೇಷ, ಅಸೂಯೆ ಒಳ್ಳೆಯದಲ್ಲ, ಸಮಾಜದಲ್ಲಿ ಒಬ್ಬ ಮುಂದುವರೆದನೆಂದರೆ ಅವನ ಕಾಲು ಎಳೆಯುವುದು ತರವಲ್ಲ, ಕಾಲು ಎಳೆಯುವವರು ಯಾವಾಗಲೂ ಕೆಳಗೆ ಇರುತ್ತಾರೆ, ಎಂಬುದನ್ನು ಅವರು ನೆನಪು ಮಾಡಿಕೊಟ್ಟರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ್ ಸಂತೋಷ್ ಕುಮಾರ್, ಪುರಾಣ, ಹರಿಕಥೆ, ನಾಟಕಗಳು ನಮ್ಮ ನೈಜ ಜೀವನದ ಚಿತ್ರಣವನ್ನ ಪ್ರತಿಬಿಂಬಿಸುತ್ತವೆ ಮತ್ತು ನಾವು ಹೇಗೆ ಬದುಕಬೇಕು ಎಂಬ ಸಂದೇಶವನ್ನು ಸಹ ನೀಡುತ್ತವೆ, ಸಾಂಸಾರಿಕ ಮತ್ತು ಸಾಮಾಜಿಕ ಸಮಾನತೆ, ಇದ್ದಿದ್ದರಲ್ಲಿಯೇ ತೃಪ್ತಿ ಪಡುವಿಕೆ ಮೊದಲಾದ ಚಿಂತನೆಗಳ ಬಗ್ಗೆ ಸಂದೇಶವನ್ನು ಸಹ ಸಾರುತ್ತವೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ನಾವು ಇಂದು ಮಾಧ್ಯಮ, ದೃಶ್ಯ ಮಾಧ್ಯಮಗಳಲ್ಲಿ ದ್ವೇಷ, ಅಸೂಯೆ, ಕ್ರೌರ್ಯವನ್ನು ನೋಡುತ್ತೇವೆ, ಪ್ರಸ್ತುತ ನಾಟಕಗಳ ಪ್ರದರ್ಶನ ಅಗತ್ಯವಿದೆ, ಇಂತಹ ನಾಟಕಗಳಿಂದ ಸಂದೇಶಗಳನ್ನು ಸಮಾಜಕ್ಕೆ ನೀಡುವ ಪ್ರಯತ್ನಗಳು ಇವುಗಳಿಂದ ಆಗುತ್ತಿದೆ, ಇದು ಅಗತ್ಯ. ಇಂಥ ನಾಟಕದಿಂದ ಮಾನವೀಯತೆ ನೈತಿಕತೆ ಅರಿವು ಮೂಡುತ್ತದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ರಾಜ್ಯ ಸಂಘದ ಉಪಾಧ್ಯಕ್ಷ ಓಂಕಾರ್ ಮೂರ್ತಿ ಪ್ರಾಸ್ತಾವಿಕ ನುಡಿಯಲ್ಲಿ ಶಿವ ಸಂಚಾರ ನಾಟಕೋತ್ಸವದ ಉದ್ದೇಶವನ್ನು ತಿಳಿಸಿಕೊಟ್ಟರು.

ಸರ್ಕಾರಿ ಜೆ ಸಿ ಆಸ್ಪತ್ರೆಯ ಡಾ. ಬಿ. ಸಿ ಷಡಕ್ಷರಿ, ಕಾಂಗ್ರೆಸ್ ಮುಖಂಡ ಜಿ.ಬಿ. ಶಶಿಧರ್, ವೀರಶೈವ ಸಮಾಜದ ಕಾರ್ಯದರ್ಶಿ ಸ್ವಾಮಿ, ತಳಬಾಳು ಯುವ ವೇದಿಕೆ ಗೌರವ ಅಧ್ಯಕ್ಷ ಪ್ರವೀಣ್, ಅರ್ಬನ್ ಕೋ ಬ್ಯಾಂಕ್ ನಿರ್ದೇಶಕ ಸಾಗರ್ಶಿ, ಶಿವಕುಮಾರ್ ಬಳಗದ ಕಾರ್ಯದರ್ಶಿ ಶಶಿಧರ್, ತರಳಬಾಳು ಶಾಲೆ ಸಲಹಾ ಸಮಿತಿ ಸದಸ್ಯ ದಿವಾಕರ ಬಾಬು ಪಾಲ್ಗೊಂಡಿದ್ದರು.

ಶಿವ ಸಂಚಾರ ಕಲಾ ಬಳಗ ಕಲಾವಿದರು ಪ್ರದರ್ಶಿಸಿದ ತುಲಾಭಾರ ನಾಟಕ ಎಲ್ಲರ ಮೆಚ್ಚುಗೆ ಗಳಿಸಿತು.

=====

ಫೊಟೋ:

ಅರಸೀಕೆರೆ ನಗರದ ವೆಂಕಟೇಶ್ವರ ಕಲಾಮಂದಿರದಲ್ಲಿ ಆಯೋಜಿಸಿದ್ದ ಶಿವ ಸಂಚಾರ ನಾಟಕ ಉತ್ಸವ ಕಾರ್ಯಕ್ರಮವನ್ನು ಮಾಡಾಳು ರುದ್ರಮನಿ ಮಹಾಸ್ವಾಮಿ ಉದ್ಘಾಟಿಸಿದರು.