ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಸಮಾಜಕ್ಕಾಗಿ, ಸಮಾಜದ ಉದ್ದಾರಕ್ಕಾಗಿ ಶ್ರಮಿಸಿದ ಮಹಾಪುರುಷರನ್ನು ಸ್ಮರಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಕಲ್ಪತರು ವಿದ್ಯಾಸಂಸ್ಥೆ ಹಾಗೂ ವೀರಶೈವಾನಂದಾಶ್ರಮದ ಅಧ್ಯಕ್ಷ ಪಿ.ಕೆ. ತಿಪ್ಪೇರುದ್ರಪ್ಪ ತಿಳಿಸಿದರು.ನಗರದ ಪಿಜಿಎಂ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಮುರುಘರಾಜೇಂದ್ರ ಬೃಹನ್ಮಠ ಚಿತ್ರದುರ್ಗ ಮಠದ ಶೂನ್ಯ ಪೀಠಾಧ್ಯಕ್ಷ ತ್ರಿವಿದ ದಾಸೋಹಿ ಲಿಂಗೈಕ್ಯ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಪುಣ್ಯ ಸ್ಮರಣೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಲಿಂ. ಜಯದೇವ ಮುರುಘರಾಜೇಂದ್ರ ಶ್ರೀಗಳ ಪುಣ್ಯಸ್ಮರಣೆಯನ್ನು ಮಾಡಲಾಗುತ್ತಿದ್ದು, ಶ್ರೀಗಳು ರಾಜ್ಯದ್ಯಂತ ಜಯದೇವ ಹಾಸ್ಟೆಲ್‌ಗಳನ್ನು ನಿರ್ಮಿಸುವ ಮೂಲಕ ಸಾವಿರಾರು ಮಕ್ಕಳಿಗೆ ಜ್ಞಾನ ಮತ್ತು ಅನ್ನ ದಾಸೋಹ ಮಾಡಿದ್ದರು. ತಿಪಟೂರು ನಗರದಲ್ಲಿಯೂ ಜಯದೇವ ಹಾಸ್ಟೆಲ್‌ಯಿದ್ದು ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿರುವ ಜಯದೇವ ಹಾಸ್ಟೆಲ್ ವಾಣಿಜ್ಯ, ವ್ಯವಹಾರಿಕ ಜಾಗದಲ್ಲಿರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಆದ್ದರಿಂದ ನಗರದ ಕೆಐಟಿ ಪಕ್ಕದಲ್ಲಿ ಐದು ಎಕರೆ ಜಾಗವನ್ನು ಖರೀದಿಸಿದ್ದು ಮುಂದಿನ ದಿನಗಳಲ್ಲಿ ಹಾಸ್ಟೆಲ್ ನಿರ್ಮಾಣವಾಗಲಿದೆ ಎಂದರು.ಇತಿಹಾಸ ತಜ್ಞ ಹಾಗೂ ಸಂಶೋಧಕ ಡಾ.ಜಿ. ನಂಜುಂಡಸ್ವಾಮಿ ಶೂನ್ಯ ಪೀಠದ ಇತಿಹಾಸ ಹಾಗೂ ಪರಂಪರೆಯ ಬಗ್ಗೆ ಉಪನ್ಯಾಸ ನೀಡುತ್ತಾ, ಬಸವಣ್ಣ ಅವರು ಕಾಯಕ ಜೀವಿಗಳ ಧರ್ಮವನ್ನು ಹುಟ್ಟುಹಾಕಿ, ಶೂನ್ಯ ಪೀಠವನ್ನು ಸ್ಥಾಪಿಸಿ ಅದರ ಪ್ರಥಮ ಅಧ್ಯಕ್ಷರನ್ನಾಗಿ ಅಲ್ಲಮಪ್ರಭುವನ್ನು ಮಾಡಿದರು. ಅವರ ಅಧ್ಯಕ್ಷತೆಯಲ್ಲಿ ಸಹಸ್ರಾರು ಶರಣರು ವಚನಗಳ ರಚನೆ ಮಾಡಿ ಶರಣ ಧರ್ಮಕ್ಕೆ ಕಾಯಕಲ್ಪ ನೀಡಿದರು.
ಇವರು ಶ್ರೀಶೈಲದ ಕದಳಿಗೆ ತೆರೆಳಿದ ನಂತರ ಚನ್ನಬಸವಣ್ಣನವರು ಆ ನಂತರ ಶಿವಯೋಗಿ ಸಿದ್ದರಾಮರನ್ನು ಶೂನ್ಯ ಪೀಠದ ಅಧ್ಯಕ್ಷರನ್ನಾಗಿ ಮಾಡಿ ಶರಣ ಧರ್ಮ ಪ್ರಚಾರ ಪಡಿಸಿದರು. ಆ ಪರಂಪರೆಯ ಗುರುಮಠವೇ ಚಿತ್ರದುರ್ಗದ ಬೃಹನ್ಮಠ. ಈ ಪರಂಪರೆಯಲ್ಲಿ ಬಂದ ಜಯದೇವ ಶ್ರೀಗಳು ಯುಗಪುರುಷರಾಗಿ ನೂರಾರು ವಸತಿ ನಿಲಯ ಸ್ಥಾಪಿಸಿ ಅಕ್ಷರ, ಅನ್ನ, ವಸತಿ ವಂಚಿತ ಜನರಿಗೆ ತ್ರಿವಿಧ ದಾಸೋಹ ನೀಡಿದರು ಎಂದರು.ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಗಮಕ ವಿದ್ವಾನ್ ಎಂ.ಜಿ. ಸಿದ್ದರಾಮಯ್ಯ ಉಪನ್ಯಾಸ ನೀಡಿ, ಶತಮಾನಗಳ ಹಿಂದೆ ವಿದ್ಯಾರ್ಥಿ ನಿಲಯಗಳನ್ನು ತೆರೆದು ಅನ್ನ, ಜ್ಞಾನ ನೀಡುತ್ತಾ ಸಾವಿರಾರು ವಿದ್ಯಾರ್ಥಿಗಳ ಬದುಕಿನ ಭವಿಷ್ಯವನ್ನು ರೂಪಿಸಿದ ಲಿಂಗೈಕ್ಯ ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿಗಳ ಪುಣ್ಯಸ್ಮರಣೆ ಸಮಾಜಕ್ಕೆ ಪ್ರಸ್ತುತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷ ಎಂ.ಸಿ. ಗುರುಬಸಪ್ಪ, ಟ್ರಸ್ಟಿಗಳಾದ ಟಿ.ಎನ್. ಪರಮಶಿವಯ್ಯ, ಜಿ.ಕೆ. ನಟರಾಜು, ಕಾರ್ಯದರ್ಶಿಗಳಾದ ಜಿ.ಎಸ್. ಉಮೇಶ್, ಎಚ್. ಲೋಕೇಶ್, ನಿರ್ದೇಶಕ ಕೆ.ಪಿ. ರುದ್ರಮುನಿಸ್ವಾಮಿ, ಗಂಡಸಿ ಸುರೇಶ್, ಶಸಾಪ ತಾ. ಅಧ್ಯಕ್ಷ ಕೆ.ಎಂ. ಪರಮೇಶ್ವರಯ್ಯ ಸೇರಿದಂತೆ ಇತರೆ ನಿರ್ದೇಶಕರು ಹಾಗೂ ಸಮಾಜದ ಮುಖಂಡರು, ಶ್ರೀಮಠದ ಭಕ್ತರು ಭಾಗವಹಿಸಿದ್ದರು. ಅಕ್ಕಮಹಾದೇವಿ ಸಮಾಜದವರಿಂದ ವಚನ ಗಾಯನ ನಡೆಯಿತು. ವಕೀಲರಾದ ಶೋಭಾಜಯದೇವ ನಿರೂಪಿಸಿ, ಜಿ. ನಂದಕುಮಾರ್ ಸ್ವಾಗತಿಸಿ, ವಂದಿಸಿದರು.