ಶಿಕ್ಷಣದಿಂದ ಮಾತ್ರ ಸಮಾಜದ ಉದ್ಧಾರ: ಎಂ.ವಿ. ಅಂಜಿನಪ್ಪ

| Published : Jan 16 2024, 01:47 AM IST

ಶಿಕ್ಷಣದಿಂದ ಮಾತ್ರ ಸಮಾಜದ ಉದ್ಧಾರ: ಎಂ.ವಿ. ಅಂಜಿನಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಲು ಒಡೆಯುವುದು, ಮಣ್ಣು ತೆಗೆಯುವುದು ನಮ್ಮ ಸಮಾಜದ ಮೂಲ ವೃತ್ತಿಯಾಗಿದ್ದು, ಅವರಿಗೆ ಕಂದಾಯ ಇಲಾಖೆಯಿಂದ 1 ಅಥವಾ 2 ಎಕರೆ ಭೂಮಿ ಕೊಟ್ಟು ಸಹಕರಿಸಬೇಕು.

ಹರಪನಹಳ್ಳಿ: ಸಮಾಜದ ಉದ್ಧಾರ ಶಿಕ್ಷಣದಿಂದ ಮಾತ್ರ ಸಾಧ್ಯ. ಹಾಗಾಗಿ ಮಕ್ಕಳ ಕೈಗೆ ಗುದ್ದಲಿ, ಸಲಿಕೆ, ಹಾರೆ, ಕೊಡುವ ಬದಲು ಲೇಖನಿಯನ್ನು ಕೊಡಿ ಎಂದು ಪುರಸಭೆ ಹಿರಿಯ ಸದಸ್ಯ ಎಂ.ವಿ. ಅಂಜಿನಪ್ಪ ಹೇಳಿದರು.ಪಟ್ಟಣದ ಸಾಮರ್ಥ್ಯಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಸೋಮವಾರ ಆಯೋಜಿಸಿದ್ದ ಶ್ರೀ ಸಿದ್ದರಾಮೇಶ್ವರರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅ‍ವರು ಮಾತನಾಡಿದರು. ಶಿಕ್ಷಣದಿಂದಲೇ ಡಾ. ಬಿ.ಆರ್. ಅಂಬೇಡ್ಕರ್ ಅವರು ನಮ್ಮ ದೇಶದ ಸಂವಿಧಾನ ರಚಿಸಲು ಸಾಧ್ಯವಾಯಿತು. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ವಿಜ್ಞಾನಿಯಾಗಿ, ದೇಶದ ಉನ್ನತ ಹುದ್ದೆ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದರು ಎಂದು ಸ್ಮರಿಸಿದರು.

ಮಾಜಿ ಶಾಸಕ ಎಂ.ಪಿ. ರವೀಂದ್ರ ಅವರು ಭೋವಿ ಸಮಾಜಕ್ಕೆ 2 ಎಕರೆ ಭೂಮಿ ನೀಡಿದ್ದರು. ಅವರ ಸಹೋದರಿ ಎಂ. ಲತಾ ಮಲ್ಲಿಕಾರ್ಜುನ ಅವರು ನಮ್ಮ ಸಮಾಜಕ್ಕೆ ಒಂದು ಸುಸಜ್ಜಿತವಾದ ಸಮುದಾಯ ಭವನ ನಿರ್ಮಿಸಿ ಕೊಡಬೇಕು ಎಂದು ಮನವಿ ಮಾಡಿದರು.

ಕಲ್ಲು ಒಡೆಯುವುದು, ಮಣ್ಣು ತೆಗೆಯುವುದು ನಮ್ಮ ಸಮಾಜದ ಮೂಲ ವೃತ್ತಿಯಾಗಿದ್ದು, ಅವರಿಗೆ ಕಂದಾಯ ಇಲಾಖೆಯಿಂದ 1 ಅಥವಾ 2 ಎಕರೆ ಭೂಮಿ ಕೊಟ್ಟು ಸಹಕರಿಸಬೇಕು ಎಂದು ತಹಸೀಲ್ದಾರ್ ಜಿ.ವಿ. ಗಿರೀಶ್ ಬಾಬು ಅವರಿಗೆ ಮನವಿ ಮಾಡಿದರು. ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಇಲ್ಲದವರಿಗೆ ಸೂರು ಕಲ್ಪಿಸುವಂತೆ ತಾಪಂ ಇಓ ಕೆ.ಆರ್. ಪ್ರಕಾಶ್ ಅವರಿಗೆ ಮನವಿ ಮಾಡಿದರು.ಪ್ರಗತಿಪರ ಚಿಂತಕ ಸಾಹಿತಿ ಇಸ್ಮಾಯಿಲ್ ಎಲಿಗಾರ ಮಾತನಾಡಿ, 12ನೇ ಶತಮಾನದಲ್ಲಿ ಶರಣರ ಪರಂಪರೆಯಲ್ಲಿ ಮಹಾಮನೆಯಲ್ಲಿ ಜಾತಿ, ಭೇದವೆನ್ನದೆ ತಮ್ಮದೆ ಆದ ವಚನಗಳ ಮೂಲಕ ಕಾಯಕದಲ್ಲಿ ತೊಡಗಿದ್ದರು. ದಾರ್ಶನಿಕರನ್ನು ಜಾತಿಗಳ ಜೈಲಿನಲ್ಲಿ ಬಂಧಿಸಿದ್ದು, ಅದರಿಂದ ಬಿಡುಗಡೆ ಮಾಡಿ, ಮೌಢ್ಯತೆಯಿಂದ ಹೊರಬಂದು, ಶಿಕ್ಷಣ ಪಡೆದು, ಸಮಾನತೆ ಎತ್ತಿಹಿಡಿಯುವ ಕೆಲಸ ಮಾಡಬೇಕು ಎಂದರು.ಆಯ್ಕೆ ಶ್ರೇಣಿ ಉಪನ್ಯಾಸಕ ತಿರುಮಲೇಶ್ ತಿಮ್ಮಪ್ಪನವರು ವಿಶೇಷ ಉಪನ್ಯಾಸ ನೀಡಿದರು. ತಹಸೀಲ್ದಾರ್ ಗಿರೀಶಬಾಬು ಅಧ್ಯಕ್ಷತೆ ವಹಿಸಿದ್ದರು.ತಾಪಂ ಇಓ ಕೆ.ಆರ್. ಪ್ರಕಾಶ್, ಭೋವಿ ಸಮುದಾಯದ ತಾಲೂಕು ಅಧ್ಯಕ್ಷ ಕಂಚಿಕೇರಿ ಅಂಜಿನಪ್ಪ, ಪುರಸಭೆ ಸದಸ್ಯರಾದ ಲಾಟಿ ದಾದಾಪೀರ, ಉದ್ದಾರ ಗಣೇಶ, ವಕೀಲ ವೆಂಕಟೇಶ್, ಗೊಂಗಡಿ ನಾಗರಾಜ, ವಸಂತಪ್ಪ, ಎಂ. ಶಂಕರ, ದೈಹಿಕ ಶಿಕ್ಷಣ ಶಿಕ್ಷಕ ದೇವರಾಜ, ಬೆಂಡಿಗೇರಿ ಗುರುಸಿದ್ದಪ್ಪ, ನೀಲಗುಂದ ಮಹಾಂತೇಶ್, ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.