ಸಮರಸ ಸಮರ ಎರಡಕ್ಕೂ ಸಜ್ಜಾಗಿ: ರಾಘವೇಶ್ವರ ಶ್ರೀ

| Published : Sep 12 2024, 01:48 AM IST

ಸಾರಾಂಶ

ಸಮಾಜದ ಸಾಮರಸ್ಯಕ್ಕಾಗಿ ಸಂಘಟನೆ ಶ್ರಮಿಸಬೇಕು. ಸಂಘಟನೆಗೆ ಹೆಮ್ಮೆಯಾಗುವ ರೀತಿಯಲ್ಲಿ ಇಡೀ ಸಮಾಜ ಇದಕ್ಕೆ ಸ್ಪಂದಿಸಬೇಕು ಎಂದು ರಾಘವೇಶ್ವರ ಶ್ರೀಗಳು ತಿಳಿಸಿದರು.

ಗೋಕರ್ಣ: ಸಮರಸ ಮತ್ತು ಸಮರ ಎರಡಕ್ಕೂ ಸಮಾಜ ಸಜ್ಜಾಗಬೇಕು. ಸಮಾಜದಲ್ಲಿ ಸಮರಸ ಮೂಡಿಸಲು ಶ್ರಮಿಸೋಣ. ಇದರ ಜತೆಗೆ ನಮ್ಮತನವನ್ನು ಉಳಿಸಿಕೊಳ್ಳಲು ಹೋರಾಟದ ಕೆಚ್ಚನ್ನೂ ರೂಢಿಸಿಕೊಳ್ಳೋಣ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದರು.ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು, 53ನೇ ದಿನವಾದ ಬುಧವಾರ ಮುಳ್ಳೇರಿಯಾ ಮಂಡಲದ ಕೊಡಗು, ಗುಂಪೆ, ಕಾಸರಗೋಡು, ಚಂದ್ರಗಿರಿ, ಗುತ್ತಿಗಾರು ಮತ್ತು ಸುಳ್ಯ ವಲಯಗಳ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.ಜಗತ್ತಿಗೆ ಸಮರ ಗೊತ್ತೇ ವಿನಾ ಸಮರಸ ಗೊತ್ತಿಲ್ಲ. ಮುಳ್ಳೇರಿಯಾ ಮಂಡಲ ವ್ಯಾಪ್ತಿಯಲ್ಲಿ ಸಮರಸ ಟ್ರಸ್ಟ್ ಹೆಸರಿನಲ್ಲಿ ಒಳ್ಳೆಯ ಕಾರ್ಯಗಳು ನಡೆಯುತ್ತಿವೆ. ಸುಮಾರು ₹2 ಕೋಟಿ ಅಂದಾಜು ವೆಚ್ಚದಲ್ಲಿ ಭವ್ಯ ಸಭಾಗೃಹ ಮತ್ತು ಗುರುನಿವಾಸ ನಿರ್ಮಾಣವಾಗುತ್ತಿದೆ. ಇದು ಸಕಾಲದಲ್ಲಿ ಪೂರ್ಣಗೊಳ್ಳಲು ಸಮಾಜದ ಸ್ಪಂದನೆ ಬೇಕು ಎಂದರು.

ಸಮಾಜದ ಸಾಮರಸ್ಯಕ್ಕಾಗಿ ಸಂಘಟನೆ ಶ್ರಮಿಸಬೇಕು. ಸಂಘಟನೆಗೆ ಹೆಮ್ಮೆಯಾಗುವ ರೀತಿಯಲ್ಲಿ ಇಡೀ ಸಮಾಜ ಇದಕ್ಕೆ ಸ್ಪಂದಿಸಬೇಕು ಎಂದರು.ಪೊಸಡಿಗುಂಪೆಯ ಸುಂದರ ಪರಿಸರದಲ್ಲಿ, ಪರ್ವತಾಗ್ರದಲ್ಲಿ ಶಂಕರಧ್ಯಾನ ಮಂದಿರ ಸ್ಥಾಪನೆಯ ಉದ್ದೇಶದಿಂದ ಈ ಭಾಗದ ಶಿಷ್ಯಭಕ್ತರು ಸುಮಾರು 10 ಎಕರೆ ಭೂಮಿಯನ್ನು ಕ್ರೋಢೀಕರಿಸಿದ್ದಾರೆ. ಈ ಭೂಮಿಯ ಮೇಲೆ ಸರ್ಕಾರದ ಕೆಟ್ಟ ದೃಷ್ಟಿ ಬಿದ್ದಿದೆ. ಇದನ್ನು ಉಳಿಸಿಕೊಳ್ಳಲು ಸಂಘಟಿತ ಹೋರಾಟ ನಡೆಸಬೇಕು ಎಂದರು.ನಮ್ಮತನವನ್ನು ಉಳಿಸಿಕೊಳ್ಳಲು ಸಮರ ಅನಿವಾರ್ಯವಾದಲ್ಲಿ, ಅದಕ್ಕೆ ಸಜ್ಜಾಗಬೇಕು. ಭೂಮಿ ಕಳೆದುಕೊಳ್ಳಲು ಬೇಸರವಿಲ್ಲ. ದೊಡ್ಡ ಪ್ರಮಾಣದ ಭೂಮಿಯನ್ನು ಮಠ ಕಳೆದುಕೊಂಡಿದೆ. ಆದರೆ ಹೀಗೆ ಕಳೆದುಕೊಂಡ ಭೂಮಿ ಅದು ಸದುಪಯೋಗವಾಗಬೇಕು. ದುರುಪಯೋಗವಾಗುವುದಾದಲ್ಲಿ ಭೂಮಿ ನೀಡಲು ಸಿದ್ಧರಿಲ್ಲ ಎಂದು ಸ್ಪಷ್ಟಪಡಿಸಿದರು.ಕಾಲ ಸರಣಿಯ ಪ್ರವಚನ ಮುಂದುವರಿಸಿದ ಶ್ರೀಗಳು, ನಾವು ದೈವಜ್ಞರಿಗೆ ನೀಡುವ ತಾಂಬೂಲ ನಮ್ಮ ಪೂರ್ವಾಪರಗಳನ್ನು ತಿಳಿಸಬಲ್ಲದು. ಇದರ ಮೂಲಕ ಶುಭಾಶುಭ ಫಲಗಳನ್ನು ಕೂಡಾ ಸುಲಭವಾಗಿ ತಿಳಿದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು. ಹನ್ನೆರಡು ಎಲೆಗಳಿಂದ ದ್ವಾದಶ ಭಾವಗಳನ್ನು ಅರ್ಥ ಮಾಡಿಕೊಳ್ಳಬಹುದು ಎಂದು ವಿಶ್ಲೇಷಿಸಿದರು.ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಉಪಾಧ್ಯಕ್ಷರಾದ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ವಿದ್ಯಾರ್ಥಿ ಪ್ರಧಾನ ಈಶ್ವರ ಪ್ರಸಾದ್ ಕನ್ಯಾನ, ಯುವ ಪ್ರಧಾನ ಕೇಶವ ಪ್ರಕಾಶ್ ಎಂ., ಮುಳ್ಳೇರಿಯಾ ಮಂಡಲಾಧ್ಯಕ್ಷ ಕೃಷ್ಣಮೂರ್ತಿ ಮಾಡಾವು, ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಚಾತುಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುರ್ವಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ವಿವಿವಿ ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ, ಕಾರ್ಯದರ್ಶಿ ಜಿ.ಕೆ. ಮಧು, ಶ್ರೀಶ ಶಾಸ್ತ್ರಿ, ದೈವಜ್ಞರಾದ ಕೇಶವ ಭಟ್ ಮಿತ್ತೂರು ಮತ್ತಿತರರು ಉಪಸ್ಥಿತರಿದ್ದರು.