ಆರೋಪಿಗಳ ಗಡಿಪಾರಿಗೆ ಸಮತಾ ಸೈನಿಕ ದಳ ಆಗ್ರಹಿಸಿ ರಾಮನಗರದಲ್ಲಿ ಪ್ರತಿಭಟನೆ

| Published : Jul 27 2024, 12:53 AM IST

ಆರೋಪಿಗಳ ಗಡಿಪಾರಿಗೆ ಸಮತಾ ಸೈನಿಕ ದಳ ಆಗ್ರಹಿಸಿ ರಾಮನಗರದಲ್ಲಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕನಕಪುರ, ಮಳಗಾಳು ಮತ್ತು ಕಲ್ಲಹಳ್ಳಿ, ತಾಮಸಂದ್ರ ಗ್ರಾಮಗಳಲ್ಲಿ ನಡೆದ ದಲಿತರ ಮೇಲೆ ದೌರ್ಜನ್ಯವೆಸಗಿರುವ ಆರೋಪಿಗಳನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಕರ್ನಾಟಕ ಸಮತಾ ಸೈನಿಕ ದಳದ ಕಾರ್ಯಕರ್ತರು ರಾಮನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

-ಕನಕಪುರ, ಮಳಗಾಳು, ಕಲ್ಲಹಳ್ಳಿ, ತಾಮಸಂದ್ರ ಗ್ರಾಮಗಳಲ್ಲಿ ದಲಿತರ ಮೇಲೆ ದೌರ್ಜನ್ಯ -ಸಂಘಟನೆಯ ಕಾರ್ಯಕರ್ತರಿಂದ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ರಾಮನಗರ

ಕನಕಪುರ, ಮಳಗಾಳು ಮತ್ತು ಕಲ್ಲಹಳ್ಳಿ, ತಾಮಸಂದ್ರ ಗ್ರಾಮಗಳಲ್ಲಿ ನಡೆದ ದಲಿತರ ಮೇಲೆ ದೌರ್ಜನ್ಯವೆಸಗಿರುವ ಆರೋಪಿಗಳನ್ನು ಗಡಿಪಾರು ಮಾಡುವಂತೆ ಮತ್ತು ಕರ್ತವ್ಯ ಲೋಪವೆಸಗಿರುವ ಪೊಲೀಸರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಆಗ್ರಹಿಸಿ ಕರ್ನಾಟಕ ಸಮತಾ ಸೈನಿಕ ದಳದ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೇರಿದ ಕಾರ್ಯಕರ್ತರು ದಲಿತರ ಮೇಲೆ ದೌರ್ಜನ್ಯ ಎಸಗಿರುವ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಧಿಕ್ಕಾರ ಕೂಗಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಕೋಟೆ ಕುಮಾರ್ ಮಾತನಾಡಿ, ಕನಕಪುರದ ಮಳಗಾಳು ಎ.ಕೆ.ಕಾಲೋನಿಯಲ್ಲಿ ಇಡೀ ದೇಶವೇ ತಲೆ ತಗ್ಗಿಸುವಂತಹ ಅಮಾನವೀಯ ಘಟನೆ ನಡೆದಿದ್ದು ಪರಿಶಿಷ್ಟ ಜಾತಿಗೆ ಸೇರಿದ ಅನೀಶ್, ಲಕ್ಷ್ಮಣ್ ಮತ್ತು ಇತರರ ಮೇಲೆ ಅದೇ ಗ್ರಾಮದ ಸವರ್ಣಿಯರ ಗುಂಪು ಮನೆಗೆ ನುಗ್ಗಿ ಹಲ್ಲೆ ನಡೆಸಿದೆ. ಈ ಘಟನೆಯಿಂದಾಗಿ ಅನೀಶ್ ಎಂಬ ಯುವಕನ ಎಡ ಗೈ ಅನ್ನು ಕತ್ತರಿಸಿ ಹಾಕಲಾಗಿದೆ. ಲಕ್ಷ್ಮಣ್ ಮತ್ತು ಇತರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದರು.

ಘಟನೆ ಜರುಗಿ ಹಲವು ದಿನಗಳೆ ಕಳೆಯುತ್ತಿವೆ. ಆದರೂ ಪ್ರಮುಖ ಆರೋಪಿಗಳನ್ನು ಈವರೆಗೂ ಪೊಲೀಸರು ಬಂಧಿಸಿಲ್ಲ. ಇದು ಪೋಲಿಸರ ಕಾರ್ಯ ಕ್ಷಮತೆಯನ್ನು ಪ್ರಶ್ನಿಸುವಂತೆ ಮಾಡಿದೆ. ಆರೋಪಿಗಳ ಪೈಕಿ ಹರ್ಷ ಎಂಬುವನು ರೌಡಿ ಶೀಟರ್ ಆಗಿದ್ದು ಆತನನ್ನು ಈ ಹಿಂದೆ ಜಿಲ್ಲೆಯಿಂದ ಗಡಿ ಪಾರು ಮಾಡಲಾಗಿದೆ. ಆದರೂ ಸಹ ಜಿಲ್ಲೆಯೊಳಗೆ ಬಂದು ಇಂತಹ ಹೇಯ ಕೃತ್ಯ ನಡೆಸಿರುವುದು ಸ್ಥಳೀಯ ಪೋಲಿಸರ ಕರ್ತವ್ಯಕ್ಕೆ ಹಿಡಿದ ಸಾಕ್ಷಿಯಾಗಿದೆ ಎಂದು ಟೀಕಿಸಿದರು.

ಇದು ಪೊಲೀಸರ ಆಂತರಿಕ ಭದ್ರತೆಯ ವೈಫಲ್ಯವಾಗಿದೆ. ಈ ಹಿಂದೆ ಇದೇ ರೀತಿಯ ಹಲವಾರು ಘಟನೆಗಳು ಇದೇ ಗ್ರಾಮದಲ್ಲಿ ನಡೆದಿದ್ದರೂ ಸಹ ಮುಂಜಾಗ್ರತೆ ವಹಿಸದ ಠಾಣಾಧಿಕಾರಿಯನ್ನು ಈ ಕೂಡಲೇ ಅಮಾನತ್ತು ಗೊಳಿಸಬೇಕು ಹಾಗೂ ಪರಾರಿಯಾಗಿರುವ ಉಳಿದ ಆರೋಪಿಗಳಿಗೆ ಕಂಡಲ್ಲಿ ಗುಂಡು ಆದೇಶವನ್ನು ಹೊರಡಿಸಬೇಕೆಂದು ಎಂದು ಆಗ್ರಹಿಸಿದರು.

ಇತ್ತೀಚಿಗೆ ಕಲ್ಲಹಳ್ಳಿ, ತಾಮಸಂದ್ರ ಗ್ರಾಮದ ಭೋವಿ ಕಾಲೋನಿಯಲ್ಲಿ ಇದೇ ರೀತಿ ದಲಿತರ ಮೇಲೆ ಲಾಂಗು, ಮಚ್ಚುಗಳಿಂದ ಹಲ್ಲೆ ನಡೆಸಲಾಗಿದೆ. ಹೀಗೆ ಜಿಲ್ಲೆಯಾದ್ಯಂತ ದಲಿತರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಇವುಗಳನ್ನು ತಡೆಯಬೇಕು ಎಂದು ಆಗ್ರಹಿಸಿದರು.

ಓಡಾಡುವ ರಸ್ತೆಯ ವಿಷಯಕ್ಕೆ, ಕುಡಿಯುವ ನೀರಿಗೆ ಸಮಸ್ಯೆ ಮಾಡಿ ದೌರ್ಜನ್ಯವೆಸಗಿ ತೊಂದರೆ ನೀಡಲಾಗುತ್ತಿದೆ. ಇಂತಹ ಸಮಸ್ಯೆಗಳನ್ನು ಠಾಣೆಗಳಿಗೆ ಹೊತ್ತು ತರುವ ದಲಿತ ಸಮುದಾಯದವರ ಮೇಲೆ ಪೋಲಿಸರು ಉದ್ದೇಶ ಪೂರ್ವಕವಾಗಿ ಕೌಂಟರ್ ಕೇಸ್ ಮಾಡುವ ಬೆದರಿಕೆವೊಡ್ಡಿ ಯಾವುದೋ ಪ್ರಭಾವಿಗಳ ಒತ್ತಡಕ್ಕೆ ಮಣಿದು ಠಾಣೆಗಳನ್ನು ರಾಜಿ ಸಂಧಾನದ ಕೇಂದ್ರಗಳನ್ನಾಗಿಸುತ್ತಿದ್ದಾರೆ ಎಂದು ಕೋಟೆ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಗುಡ್ಡೆ ವೆಂಕಟೇಶ್, ಅಂಜನ್ ಮೂರ್ತಿ, ಕೋಟೆ ಪ್ರಕಾಸ್, ರಾಮಲಿಂಗಯ್ಯ ಮಲ್ಲೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರತಿಭಟನಾಕಾರರ ಹ್ಕಕೊತ್ತಾಯ

ಘಟನೆಯ ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕು. ಪರಾರಿಯಾಗಿರುವ ಆರೋಪಿಗಳಿಗೆ ಕಂಡಲ್ಲಿ ಗುಂಡು ಆದೇಶ ಹೊರಡಿಸಬೇಕು. ಈ ಪ್ರಕರಣದಲ್ಲಿ ವಾದಿಸಲು ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಬೇಕು.

ದಲಿತರ ದೌರ್ಜನ್ಯ ಪ್ರಕರಣಗಳನ್ನು ವಿಚಾರಣೆ ಮಾಡಲು ತ್ವರಿತ ವಿಶೇಷ ನ್ಯಾಯಲಯವನ್ನು ಸ್ಥಾಪಿಸಬೇಕು. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಪ್ರತಿ ಹೋಬಳಿಯಲ್ಲಿಯೂ ಡಿ.ಸಿ ಮತ್ತು ಎಸ್.ಪಿ ನೇತೃತ್ವದಲ್ಲಿ ದಲಿತರ ಕುಂದುಕೊರತೆ ಸಭೆ ನಡೆಸಬೇಕು ಎಂದು ಕರ್ನಾಟಕ ಸಮತಾ ಸೈನಿಕ ದಳ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.