ಸಾಂಬಶಿವ ದಳವಾಯಿ ರಂಗಭೂಮಿಗೆ ನೀಡಿದ ಕೊಡುಗೆ ಅನನ್ಯ: ಪ್ರೊ. ಕೆ.ಆರ್. ದುರ್ಗಾದಾಸ್

| Published : Nov 23 2025, 03:00 AM IST

ಸಾಂಬಶಿವ ದಳವಾಯಿ ರಂಗಭೂಮಿಗೆ ನೀಡಿದ ಕೊಡುಗೆ ಅನನ್ಯ: ಪ್ರೊ. ಕೆ.ಆರ್. ದುರ್ಗಾದಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಸಾಂಬಶಿವ ದಳವಾಯಿ ಅವರು 80ರ ದಶಕದಲ್ಲಿ ಇಡೀ ದಕ್ಷಿಣ ಭಾರತದಲ್ಲಿ ಹಾಗೂ ಕರ್ನಾಟಕದಿಂದ ರಾಷ್ಟ್ರೀಯ ನಾಟಕ ಶಾಲೆಗೆ ಆಯ್ಕೆಯಾದ ಏಕೈಕ ವ್ಯಕ್ತಿ.

ಕೂಡ್ಲಿಗಿ: ಸಾಂಬಶಿವ ದಳವಾಯಿ ಅವರು 80ರ ದಶಕದಲ್ಲಿ ಇಡೀ ದಕ್ಷಿಣ ಭಾರತದಲ್ಲಿ ಹಾಗೂ ಕರ್ನಾಟಕದಿಂದ ರಾಷ್ಟ್ರೀಯ ನಾಟಕ ಶಾಲೆಗೆ ಆಯ್ಕೆಯಾದ ಏಕೈಕ ವ್ಯಕ್ತಿ. ಇವರು ಹಂತ ಹಂತವಾಗಿ ನಾಟಕ, ಬಯಲಾಟ, ಜಾನಪದ ಕ್ಷೇತ್ರದಲ್ಲಿ ಸಾಗಿ ಬಂದ ಹಾದಿ ಬಹಳ ಕಠಿಣವಾದದ್ದು ಇವರು, ರಂಗಭೂಮಿಗೆ ನೀಡಿದ ಕೊಡುಗೆ ಅಪಾರ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ. ಕೆ.ಆರ್.ದುರ್ಗಾದಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಕೂಡ್ಲಿಗಿ ಪಟ್ಟಣ ಸಮೀಪದ ಗುಂಡಿನಹೊಳೆಯ ಜ್ಞಾನಮಂಟಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ಡಿ. ಕಗ್ಗಲ್ ನ ರಂಗಜಂಗಮ ಸಂಸ್ಥೆ, ರಾಜ್ಯ ಬರಹಗಾರರ ಸಂಘದ ಜಿಲ್ಲಾ ಘಟಕ ಆಯೋಜಿಸಿದ್ದ ಬಳ್ಳಾರಿ ಸಮೀಪದ ಡಿ.ಕಗ್ಗಲ್ ನ ಡಾ.ಅಣ್ಣಾಜಿ ಕೃಷ್ಣರೆಡ್ಡಿ ಸಂಪಾದಿಸಿದ ಸಾಂಬ ಅನನ್ಯ ಕೖತಿ ಲೋಕಾರ್ಪಣೆ ಮಾಡಿದ ನಂತರ ಮಾತನಾಡುತ್ತಿದ್ದರು.

ಸಾಂಬಶಿವ ದಳವಾಯಿ 45ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದು, 50ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. 16ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದಾರೆ. ಇದಲ್ಲದೇ 5 ಚಲನಚಿತ್ರಗಳಲ್ಲಿ ಅಭಿನಯಿಸುವ ಮೂಲಕ ದೇಸಿಯ ಭಾಷೆಯ ಕಲಾವಿದರಾಗಿ ಹೊರಹೊಮ್ಮಿದರೂ ಇದೂವರೆಗೂ ನಾಟಕ ಅಕಾಡೆಮಿ ಪ್ರಶಸ್ತಿ ಸಿಗದೇ ಇರುವುದು ದುರಂತವೇ ಸರಿ ಎಂದರು. ಸಾಂಬಶಿವ ದಳವಾಯಿಯವರು ನೇರ ನಡೆ ನುಡಿ ಮೂಲಕ ತನ್ನ ಬದುಕನ್ನು ಕಟ್ಟಿಕೊಂಡಿದ್ದು ಯಾವುದೇ ಪ್ರಶಸ್ತಿಗಳ ಹಿಂದೆ ಬೀಳದೆ, ಯಾರನ್ನೂ ಓಲೈಕೆ ಮಾಡದೇ ತಮ್ಮಿಚ್ಚೆಯಂತೆಯೇ ಬದುಕಿದವರು ಇವರ ಜೀವನ ಮೌಲ್ಯಗಳ ಬಗ್ಗೆ ದಾಖಲೆ ಮಾಡಿದರೆ ನಾನು ಅದೆಷ್ಟೋ ಪುಟಗಳಿರಲಿ ನಮ್ಮ ಬಯಲಾಟ ಅಕಾಡೆಮಿಯಿಂದ ಪ್ರಕಟ ಮಾಡುವೆ ಎಂದು ತಿಳಿಸಿದರು.

ಹಿರಿಯ ರಂಗನಟ, ನಿರ್ದೇಶಕ ಸಾಂಬಶಿವ ದಳವಾಯಿ ಮಾತನಾಡಿ, ನಾನು ಪ್ರಶಸ್ತಿಗಾಗಿ ರಂಗಸೇವೆ ಮಾಡಿಲ್ಲ, ನನ್ನ ಪ್ರತಿಭೆ ಗುರುತಿಸುವ ಸಮಯದಲ್ಲಿಯೇ ಈ ವ್ಯವಸ್ಥೆ ಗುರುತಿಸಿಲ್ಲ, ನನ್ನ ಶಿಷ್ಯ ಡಾ. ಅಣ್ಣಾಜಿ ಕೖಷ್ಣರೆಡ್ಡಿ ನನ್ನ ಬಗ್ಗೆ ಸಂಪಾದನ ಕೖತಿ ತಂದಿದ್ದು, ಪ್ರೊಪೆಸರ್ ಕೆ.ಆರ್. ದುರ್ಗಾದಾಸ್ ರಂತವರು ಲೋಕಾರ್ಪಣೆ ಮಾಡಿದ್ದು ಖುಷಿ ತಂದಿದೆ ಎಂದರು. ಜ್ಞಾನಮಂಟಪ ವಿದ್ಯಾ ಸಂಸ್ಥೆಯ ಅಧ್ಯಕ್ಷ ಜಿ.ಉಮೇಶ್ ಕಾರ್ಯಕ್ರಮ ಉದ್ಗಾಟಿಸಿದರು. ಲೇಖಕ ಭೀಮಣ್ಣ ಗಜಾಪುರ ಕೃತಿ ಕುರಿತು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಶಿವುನಾಯಕ ದೊರೆ, ಆಂಗ್ಲ ಭಾಷಾ ಉಪನ್ಯಾಸಕ ಜಗದೀಶ್ಚಂದ್ರ ಬೋಸ್, ಬಳ್ಳಾರಿ ಜಿಲ್ಲಾ ಬರಹಗಾರರ ಸಂಘದ ಲಲಿತ ಕಪ್ಪರಮಠ, ಚಲನಚಿತ್ರ ನಟ, ಹಾಗೂ ರಂಗಭೂಮಿ ಕಲಾವಿದ ರಾಕೇಶ್ ದಳವಾಯಿ, ಜ್ಞಾನಮಂಟಪ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಾಣಿ, ತಂಬ್ರಹಳ್ಳಿ ನಾಗರಾಜ, ಪ್ರಾಂಶುಪಾಲರಾದ ಎಸ್. ಚಾರೇಶ್ ಮುಂತಾದವರು ಉಪಸ್ಥಿತರಿದ್ದರು. ಬೆಂಗಳೂರು ವಿಶ್ವವಿದ್ಯಾಲಯದ ರಂಗಭೂಮಿ ಸಂಶೋಧಕ ಬಿ. ಅರುಣ್ ಮಾನ್ವಿ, ಎಂ.ಎನ್.ಸಂತೋಷ್, ಎಂ.ಸುನಿಲಕುಮಾರ್ ಕ್ರಾಂತಿಗೀತೆಗಳನ್ನು ಹಾಡಿ ಪ್ರಶಿಕ್ಷಣಾರ್ಥಿಗಳ ಮನ ತಣಿಸಿದರು.ಕವಿಗೋಷ್ಠಿಯಲ್ಲಿ ಹುಡೇಂ ಕೖಷ್ಣಮೂರ್ತಿ, ಸಂಡೂರಿನ ಕರಿಬಸಮ್ಮ, ಕರಿಯಮ್ಮ, ವೀರೇಶ್ ಉಬ್ಬಲಗಂಡಿ, ಮಹಾಂತೇಷ್ ಇಲಕಲ್, ಪಂಪಾ ಒಡೆಯರ್, ಜಿ. ಜಗದೀಶ್, ನಾಗರಾಜ ಸೂರನಹಳ್ಳಿ, ಶೋಭಾ ಕಾತರಕಿ, ಪಾಟೇಲ್ ಬಸವನಗೌಡ ಕವಿತೆ ವಾಚನ ಮಾಡಿದರು.