ಸಂಭ್ರಮದ ಕೆರೆ ಬಸವೇಶ್ವರ ರಥೋತ್ಸವ

| Published : May 02 2025, 12:12 AM IST

ಸಾರಾಂಶ

ರಥೋತ್ಸವಕ್ಕೆ ಮುನ್ನ ಪಟ್ಟಣದಲ್ಲಿನ ಶರಣಬಸವೇಶ್ವರ ದೇವಸ್ಥಾನದಿಂದ ಭಾಜಾ-ಭಜಂತ್ರಿಗಳ ವಾದ್ಯದೊಂದಿಗೆ ಬಸವೇಶ್ವರರ ಪಲ್ಲಕ್ಕಿ ತರಲಾಯಿತು.

ಕಾರಟಗಿ:

ಬಸವೇಶ್ವರ ಜಯಂತಿ ಅಂಗವಾಗಿ ಪಟ್ಟಣದ ನವಲಿ ರಸ್ತೆಯ ಕೆರೆ ಬಸವೇಶ್ವರ ದೇವಸ್ಥಾನದ ರಥೋತ್ಸವ ಬುಧವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಹೆಬ್ಬಾಳ ಮಠದ ಡಾ. ನಾಗಭೂಷಣ ಶಿವಾಚಾರ್ಯರು ರಥಕ್ಕೆ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ದೇವಸ್ಥಾನದ ಮುಂದಿನ ರಸ್ತೆಯಲ್ಲಿ ಸಾಗಿ ಚಳ್ಳೂರ ಕ್ರಾಸ್‌ನ ಪಾದಗಟ್ಟೆ ತಲುಪಿ ಮರಳಿ ದೇವಸ್ಥಾನ ತಲುಪಿತು. ಭಕ್ತರು ರಥಕ್ಕೆ ಹೂವು. ಹಣ್ಣು ಅರ್ಪಿಸಿದರು.

ಬೆಳಗ್ಗೆ ದೇವಸ್ಥಾನದಲ್ಲಿ ಬಸವ ಜಯಂತಿ ಅಂಗವಾಗಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ಜರುಗಿದವು. ಅಭಿಷೇಕ, ಅರ್ಚನೆ, ಅಲಂಕಾರ, ನೈವೇದ್ಯ, ಮಹಾಮಗಳಾರತಿ ನಡೆಸಲಾಯಿತು. ಇದಕ್ಕೂ ಮುಂಚೆ ಉಚ್ಛಾಯಕ್ಕೆ ಕಳಸಧಾರಣೆ, ಧ್ವಜಾರೋಹಣ, ರಥೋತ್ಸವ ನಂದಿಕೋಲು, ತಾಶ್ಯ, ೫೦೧ ರುದ್ರಾಕ್ಷಿಧಾರಣೆ ಏರಿಸಲಾಯಿತು.

ರಥೋತ್ಸವಕ್ಕೆ ಮುನ್ನ ಪಟ್ಟಣದಲ್ಲಿನ ಶರಣಬಸವೇಶ್ವರ ದೇವಸ್ಥಾನದಿಂದ ಭಾಜಾ-ಭಜಂತ್ರಿಗಳ ವಾದ್ಯದೊಂದಿಗೆ ಬಸವೇಶ್ವರರ ಪಲ್ಲಕ್ಕಿ ತರಲಾಯಿತು.

ಡಾ. ನಾಗಭೂಷಣ ಶಿವಾಚಾರ್ಯರು, ಮರುಳ ಸಿದ್ಧಯ್ಯಸ್ವಾಮಿ ಹಿರೇಮಠ ಸಾನ್ನಿಧ್ಯ ವಹಿಸಿದ್ದರು.

ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಬೂದಗುಂಪಾದ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾ ವಿರಕ್ತಮಠದ ಸಿದ್ದೇಶ್ವರ ದೇವರು ಪಾಲ್ಗೊಂಡಿದ್ದರು. ಕಲಾವಿದ ವೀರಭದ್ರ ಬೆನಕನಾಳ ಅವರಿಂದ ಸಂಗೀತ ಹಾಗೂ ವಿವಿಧ ಹಾಸ್ಯ ಕಾರ್ಯಕ್ರಮ ಜರುಗಿದವು.

ಈ ವೇಳೆ ಕಾಂಗ್ರೆಸ್ ಮುಖಂಡ ವೆಂಕಟೇಶ ತಂಗಡಗಿ, ಸಚಿವ ಶಿವರಾಜ ತಂಗಡಗಿ ಪತ್ನಿ ವಿದ್ಯಾ ತಂಗಡಗಿ, ವೀರಶೈವ ಯುವಕ ಸಂಘದ ಅಧ್ಯಕ್ಷ ಜಿ. ಯಂಕನಗೌಡ, ಕಾರ್ಯದರ್ಶಿ ಶರಣಪ್ಪ ಕಟಾಂಬ್ಲಿ, ಖಜಾಂಚಿ ಆರ್. ಚಂದ್ರಕಾಂತ, ಪ್ರಮುಖರಾದ ಎಚ್. ಈಶಪ್ಪ, ಬಿ. ಶರಣಯ್ಯಸ್ವಾಮಿ, ಬಸವರಾಜ ಪಗಡದಿನ್ನಿ, ರುದ್ರಗೌಡ ನಂದಿಹಳ್ಳಿ, ಸೋಮಶೇಖರ ಬೇರಗಿ, ರಾಜಶೇಖರ ಸಿರಿಗೇರಿ, ಮಂಜುನಾಥ ಮೆಗೂರ, ಬಸವರಾಜ ಎತ್ತಿನಮನಿ, ಸ್ವಪ್ರಕಾಶ ಹಿರೇಮಠ ಸೇರಿದಂತೆ ದೇವಸ್ಥಾನ ಸಮಿತಿ ಸೇವಾಕರ್ತರು ಸೇರಿದಂತೆ ಇತರರು ಇದ್ದರು.