ಸಾರಾಂಶ
ನಮ್ಮಲ್ಲಿ ಕ್ರೀಡೆಗೆ ಬೇಕಿರುವ ಸಕಲ ವ್ಯವಸ್ಥೆಗಳನ್ನು ಶಿಸ್ತುಬದ್ಧವಾಗಿ ಮಾಡಿದ್ದು ಮಕ್ಕಳು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಪುತ್ತೂರು ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಬಹುಮಾನ ವಿತರಣಾ ಸಮಾರಂಭ ‘ಸಮ್ಮಾನ ರಶ್ಮಿ’ ವಿಜೃಂಭಣೆಯಿಂದ ನಡೆಯಿತು.
ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ, ಸಹಕಾರ ರತ್ನ ಸವಣೂರು ಸೀತಾರಾಮ ರೈ ಮಾತನಾಡಿ ಇಂದು ಮಕ್ಕಳು ಸ್ಪರ್ಧೆಗಳಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿರುವುದು ತೀರಾ ಸಾಮಾನ್ಯವಾಗಿದೆ. ಇದಕ್ಕೆ ಶಿಕ್ಷಕರ ಜೊತೆ ಹೆತ್ತವರೂ ಕೈಜೋಡಿಸಿ ಅವರನ್ನು ಹುರಿದುಂಬಿಬೇಕು. ನಮ್ಮಲ್ಲಿ ಕ್ರೀಡೆಗೆ ಬೇಕಿರುವ ಸಕಲ ವ್ಯವಸ್ಥೆಗಳನ್ನು ಶಿಸ್ತುಬದ್ಧವಾಗಿ ಮಾಡಿದ್ದು ಮಕ್ಕಳು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.ಆಡಳಿತಾಧಿಕಾರಿ, ನ್ಯಾಯವಾದಿ ಅಶ್ವಿನ್ ಎಲ್. ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯದ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಅತಿಥಿಯಾಗಿ ಆಗಮಿಸಿದ್ದರು.
ಆರಂಭದಲ್ಲಿ ಅತ್ಯಾಧುನಿಕ ಸ್ಮಾರ್ಟ್ ಬೋರ್ಡನ್ನು ಉದ್ಘಾಟಿಸಲಾಯಿತು. ಸಂಸ್ಥೆಯ ಟ್ರಸ್ಟ್ಟಿಗಳಾದ ನಡುಮನೆ ಸುಂದರ ರೈ, ರಶ್ಮಿ ಅಶ್ವಿನ್ ಶೆಟ್ಟಿ, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮ್ ಪ್ರಸಾದ್ ರೈ ಕಲಾಯಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ ಮತ್ತು ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ಉಪಸ್ಥಿತರಿದ್ದರು. ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಫಾತಿಮಾತ್ ಹನ್ನಾ ಸಂವಿಧಾನದ ಪೀಠಿಕೆ ವಾಚಿಸಿದರು. ಎಂ . ವೈಷ್ಣವಿ ವಂದಿಸಿದರು. ರಶ್ಮಿತಾ ನಿರೂಪಿಸಿದರು.