30ರಂದು ಉಡುಪಿ ತಾಲೂಕು ಸಾಹಿತ್ಯ ಸಮ್ಮೇಳನ

| Published : Dec 28 2023, 01:45 AM IST / Updated: Dec 28 2023, 01:46 AM IST

ಸಾರಾಂಶ

ಮಣಿಪಾಲದಲ್ಲಿ ಡಿ.೩೦ರಂದು ಉಡುಪಿ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಡಿ.30 ರಂದು ಮಣಿಪಾಲದ ಶ್ರೀ ಕ್ಷೇತ್ರ ಶಿವಪಾಡಿ ಉಮಾಮಹೇಶ್ವರ ದೇವಸ್ಥಾನದ ಶ್ರೀ ರಮಾನಂದ ಸ್ಮೃತಿ ಮಂಟಪದಲ್ಲಿ ನಡೆಯಲಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ರವಿರಾಜ್ ಎಚ್‌.ಪಿ. ತಿಳಿಸಿದ್ದಾರೆ. ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಅಂದು ಬೆಳಗ್ಗೆ 8.15ರಿಂದ ರಾತ್ರಿ 8.15ರ ವರೆಗೆ ನಿರಂತರ 12 ಗಂಟೆಗಳ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ ಮಣಿಪಾಲದ ಎಂ.ಐ.ಟಿ ಬಸ್ ನಿಲ್ದಾಣದಿಂದ ಮೆರವಣಿಗೆಯೊಂದಿಗೆ ಸಮ್ಮೇಳನಾಧ್ಯಕ್ಷ ಎಚ್. ಶಾಂತರಾಜ್ ಐತಾಳ್ ಅವರನ್ನು ಸ್ವಾಗತಿಸಲಾಗುವುದು. 9.25ಕ್ಕೆ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್. ಧ್ವಜಾರೋಹಣ ನಡೆಸಲಿದ್ದಾರೆ. ಸಮ್ಮೇಳನವನ್ನು ಅಂತಾರಾಷ್ಟ್ರೀಯ ಕಲಾವಿದ, ಪರಿಸರವಾದಿ ದಿನೇಶ್ ಹೊಳ್ಳ ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ಚಲನಚಿತ್ರ ನಿರ್ದೇಶಕ ಕೃಷ್ಣಪ್ಪ ಉಪ್ಪೂರು, ಕಲಾವಿದ ಮನೋಹರ್ ನಾಯಕ್, ಅಂತಾರಾಷ್ಟ್ರೀಯ ಕ್ರೀಡಾಪಟು ಅರುಣಾಕಲಾ ರಾವ್, ಸಮಾಜ ಸೇವಕ ರವೀಂದ್ರ ಶೆಟ್ಟಿ ಕಡೆಕಾರ್ ಅವರನ್ನು ಗೌರವಿಸಲಾಗುವುದು. ನಂತರ ಗೃಹಣಿಯರ ಅಂಚೆ ಕಾರ್ಡ್ ಕಥಾಗೋಷ್ಠಿ, ಯುವ ಕವಿಗೋಷ್ಠಿ, ಹಾಸ್ಯಗೋಷ್ಠಿ, ಅಧ್ಯಕ್ಷರೊಂದಿಗೆ ಮುಖಾಮುಖಿ ನಡೆಯಲಿದೆ. ಸಮಾರೋಪ ಸಮಾರಂಭ: ಅಂದು ಸಂಜೆ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪದಲ್ಲಿ ಸಾಹಿತ್ಯ ವಿಮರ್ಷಕ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ ಮಾತನಾಡಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಮಣಿಪಾಲದ ಗುರು ವಸಂತಿ ಸಾಂಸ್ಕೃತಿಕ ವೇದಿಕೆಯ ಕಲಾವಿದರಿಂದ ‘ಕಾದಿರುವಳು ಶಬರಿ’ ನಾಟಕ ಪ್ರದರ್ಶನಗೊಳ್ಳಲಿದೆ. ಪತ್ರಿಕಾಗೋಷ್ಠಿಯಲ್ಲಿ ಕಸಾಪ ತಾಲೂಕು ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು, ಭುವನ ಪ್ರಸಾದ್ ಹೆಗ್ಡೆ, ಜಿಲ್ಲಾ ಸಹ ಕಾರ್ಯದರ್ಶಿ ಮೋಹನ್ ಉಡುಪ ಹಂದಾಡಿ ಹಾಜರಿದ್ದರು.