ರಾಯರಮಠದಲ್ಲಿ ಧಾರ್ಮಿಕ ಶಿಬಿರ ಸಂಪನ್ನ

| Published : Apr 29 2024, 01:41 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ನಗರದ ಬಾಗಲಕೋಟೆ ರಸ್ತೆಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಮಂತ್ರಾಲಯ ಮಠಾಧೀಶ ಶ್ರೀ ಸುಬುಧೇಂದ್ರತೀರ್ಥ ಸ್ವಾಮಿಗಳ ಆದೇಶದ ಮೇರೆಗೆ ನಡೆದ ಒಂದು ವಾರ ಕಾಲ ಧಾರ್ಮಿಕ ಶಿಬಿರ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ಬಾಗಲಕೋಟೆ ರಸ್ತೆಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಮಂತ್ರಾಲಯ ಮಠಾಧೀಶ ಶ್ರೀ ಸುಬುಧೇಂದ್ರತೀರ್ಥ ಸ್ವಾಮಿಗಳ ಆದೇಶದ ಮೇರೆಗೆ ನಡೆದ ಒಂದು ವಾರ ಕಾಲ ಧಾರ್ಮಿಕ ಶಿಬಿರ ಸಂಪನ್ನಗೊಂಡಿತು.

ಅಧ್ಯಕ್ಷತೆ ವಹಿಸಿದ್ದ ಮಂತ್ರಾಲಯ ವೇಣುಗೋಪಾಲಾಚಾರ್ಯರು ಮಾತನಾಡಿ, ಮಂತ್ರಾಲಯ ಮಠದ ಪ್ರತಿ ಶಾಖೆಯಲ್ಲೂ ಪ್ರತಿ ವರ್ಷ ಧಾರ್ಮಿಕ ಶಿಬಿರ ನಡೆಸಲಾಗುತ್ತಿದೆ. ಇದಕ್ಕೆ ವಯಸ್ಸಿನ ಮಿತಿ ಇಲ್ಲ. ಪುರುಷರು ಮತ್ತು ಮಹಿಳೆಯರೂ ಭಾಗವಹಿಸುವ ಈ ಶಿಬಿರದಲ್ಲಿ ಮಂತ್ರ, ಧರ್ಮ, ಸಂಸ್ಕೃತಿ, ಜ್ಯೋತಿಷ್ಯಶಾಸ್ತ್ರ ಮುಂತಾದವುಗಳ ಕುರಿತು ಶಾಸ್ತ್ರ ಬದ್ಧವಾಗಿ ಕಲಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಡಾ.ಕೃಷ್ಟಾಚಾರ್ಯ ಕಾಖಂಡಕಿ ಮಾತನಾಡಿ, ಇಂದಿನ ದಿನಗಳಲ್ಲಿ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಲು ಇಂತಹ ಧಾರ್ಮಿಕ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಮಂತ್ರಾಲಯದಿಂದ ಆಗಮಿಸಿದ್ದ ಆನಂದಾಚಾರ್ಯ ದಿವಾಣಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಏಳು ದಿನಗಳ ಕಾಲ ನಡೆಸಿಕೊಟ್ಟ ಈ ಧಾರ್ಮಿಕ ಶಿಬಿರದಲ್ಲಿ ಸುಮಾರು ೨೦ಕ್ಕೂ ಅಧಿಕ ಮಕ್ಕಳು ಅತ್ಯಂತ ಶಿಸ್ತು ಬದ್ಧವಾಗಿ ಆಸಕ್ತಿಯಿಂದ ಆಲಿಸಿದರಲ್ಲದೇ ಕಲಿತ ವಿಷಯಗಳನ್ನು ತಮ್ಮ ಭಾವಿ ಜೀವನದಲ್ಲಿ ಮುಂದುವರೆಸುವ ಪಣ ತೊಟ್ಟರು. ಪ್ರತಿದಿನ ಬೆಳಿಗ್ಗೆ ೮.೩೦ ಕ್ಕೆ ಪ್ರಾರಂಭವಾಗುತ್ತಿದ್ದ ಶಿಬಿರ ಸಂಜೆ ೫ ಗಂಟೆಗೆ ಮುಕ್ತಾಯಗೊಳ್ಳುತ್ತಿತ್ತು. ಭಾಗವಹಿಸುವ ಪ್ರತಿಯೊಬ್ಬರಿಗೂ ಉಪಹಾರ, ಭೋಜನ ಮತ್ತು ಹಾಲಿನ ವ್ಯವಸ್ಥೆ ಮಾಡಲಾಗಿತ್ತು.

ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ಶೇಷ ವಸ್ತ್ರ, ಮಂತ್ರಾಲಯದಿಂದ ಶ್ರೀಗಳು ಕಳಿಸಿಕೊಟ್ಟಿದ್ದ ಫಲ ಮಂತ್ರಾಕ್ಷತೆ ವಿತರಿಸಲಾಯಿತು.

ಅರ್ಚಕ ಶ್ರೀಧರಾಚಾರ್ಯ ವೇದಘೋಷ, ಹಿರಿಯ ಭಕ್ತರಾದ ವಾಮನರಾವ ದೇಶಪಾಂಡೆ, ದಾಮೋದರಾಚಾರ್ಯ ಸಂದೀಪ ಮುಂತಾದವರು ಇದ್ದರು.