ಸೀರತ್ ಸಮಿತಿ, ಮೂಡಬಿದಿರೆ ವತಿಯಿಂದ ಪ್ರವಾದಿ ಮುಹಮ್ಮದ್ ಅವರ ಜೀವನ, ಸಂದೇಶ ಹಾಗೂ ಮಾನವೀಯ ಮೌಲ್ಯಗಳನ್ನು ಸಮಾಜಕ್ಕೆ ಪರಿಚಯಿಸುವ ಉದ್ದೇಶದಿಂದ ಕನ್ನಡ ಭವನದಲ್ಲಿ ಶುಕ್ರವಾರ ಸಂಜೆ ಆಯೋಜಿಸಲಾಗಿದ್ದ ‘ಸೀರತ್ ಅಭಿಯಾನ 2026’ ಕಾರ್ಯಕ್ರಮ

ಮೂಡುಬಿದಿರೆ: ಉರಿಯುವ ದೀಪವಾಗಲೀ ಅರಳುವ ಹೂವಾಗಲೀ ಒಂದು ಸಮುದಾಯಕ್ಕೆ ಸೀಮಿತವಾಗದೇ ಎಲ್ಲರಿಗೂ ಸೇರುತ್ತದೆ. ಅದೇ ರೀತಿ ವಿವಿಧ ಸಮುದಾಯಗಳವರು ತಾವೆಲ್ಲರೂ ಒಂದೇ ಎಂದು ಭಾವಿಸಿ ಮುನ್ನಡೆದಾಗ ಭಾರತ ಜಗತ್ತಿನ ಶ್ರೇಷ್ಠ ರಾಷ್ಟ್ರವಾಗಲು ಸಾಧ್ಯ ಎಂದು ಸಂಪಿಗೆ ಹೋಲಿ ಸ್ಪಿರಿಟ್ ಚರ್ಚಿನ ಧರ್ಮಗುರು ವಿನ್ಸೆಂಟ್ ಡಿ ಸೋಜ ಹೇಳಿದರು. ಸೀರತ್ ಸಮಿತಿ, ಮೂಡಬಿದಿರೆ ವತಿಯಿಂದ ಪ್ರವಾದಿ ಮುಹಮ್ಮದ್ ಅವರ ಜೀವನ, ಸಂದೇಶ ಹಾಗೂ ಮಾನವೀಯ ಮೌಲ್ಯಗಳನ್ನು ಸಮಾಜಕ್ಕೆ ಪರಿಚಯಿಸುವ ಉದ್ದೇಶದಿಂದ ಕನ್ನಡ ಭವನದಲ್ಲಿ ಶುಕ್ರವಾರ ಸಂಜೆ ಆಯೋಜಿಸಲಾಗಿದ್ದ ‘ಸೀರತ್ ಅಭಿಯಾನ 2026’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಎಂ. ವಿವೇಕ ಆಳ್ವ ಮಾತನಾಡಿ ಧರ್ಮಗಳು ಮನುಷ್ಯರಿಂದ ಕಟ್ಟಿದ ಮನೆಗಳಂತೆ. ಕಾಲ ಕಾಲಕ್ಕೆ ದಾರ್ಶನಿಕರು, ಸಂತರಿಂದ ಅವುಗಳ ಶುದ್ಧೀಕರಣವಾಗುತ್ತಲೇ ಇದೆ. ಜಾತ್ಯಾತೀತೆಯ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದರು.

ಜೈನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಭಾತ್ ಬಲ್ನಾಡ್ ಮಾತನಾಡಿ ಭಿನ್ನಾಭಿಪ್ರಾಯಗಳಿಂದಾಗಿಯೇ ಎಲ್ಲ ಧರ್ಮಗಳಲ್ಲಿಯೂ ಪಂಗಡಗಳಾಗಿವೆ ಎಂದರು.

ಎಮ್.ಐ.ಟಿ , ಮಣಿಪಾಲದ ಅಸೋಸಿಯೇಟ್ ಪ್ರೊಫೆಸರ್ ಡಾ. ಜಮಾಲುದ್ದೀನ್ ಹಿಂದಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸಮಾಜ ತಾಂತ್ರಿಕ ಪ್ರಗತಿಯ ನಡುವೆಯೂ ಸಹನೆ, ಕರುಣೆ, ಅನುಕಂಪವೇ ಮೊದಲಾದ ಮಾನವೀಯ ಮೌಲ್ಯಗಳಿಂದ ದೂರಾಗುತ್ತಿದೆ. ಎಲ್ಲರೂ ನಮ್ಮವರೆನ್ನುವ ಪ್ರವಾದಿ ಮಹಮ್ಮದರ ನುಡಿದಂತೆ ನಡೆದ ಜೀವನ ಮಾದರಿ ಅನನ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಜ.ಮುಹಮ್ಮದ್ ಕುಂಞಿ ಜಗತ್ತಿನಲ್ಲಿ ಬದುಕುವ ದಾರಿ, ಬೆಳಕನ್ನು ತೋರಿಸಿದ ಮಾನವತೆಯ ಪ್ರತಿಪಾದಕ ದಾರ್ಶನಿಕರನ್ನು ಒಂದು ಸಮುದಾಯಕ್ಕೆ ಸೀಮಿತವಾಗಿಸಿ ಸಮಾಜವನ್ನು ವಿಘಟಿಸುವ ಅಸ್ತ್ರಗಳಾಗಿ ಬಳಸುತ್ತಿರುವುದು ಸರಿಯಲ್ಲ. ಎಲ್ಲರೂ ಎಲ್ಲರ ಸಂದೇಶವನ್ನು ತಿಳಿಯುವ ವಾತಾವರಣದಿಂದ ಆರೋಗ್ಯಪೂರ್ಣ ಸಮಾಜದ ನಿರ್ಮಾಣ ಸಾಧ್ಯ ಎಂದರು.

ಸೀರತ್ ಸಮಿತಿಯ ಉಪಾಧ್ಯಕ್ಷ ಅಬ್ದುಲ್ ಸಲಾಂ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಶೇಖ್ ನೂರುದ್ದೀನ್ ವಂದಿಸಿದರು. ಮುನೀರ್ ಪದರಂಗಿ ಕಾರ್ಯಕ್ರಮ ನಿರೂಪಿಸಿದರು.