ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಸಮುದ್ಯತಾ ಶ್ರೋತೃ ಸಂಘವು ಫೆ.23 ರಂದು ಬೆಳಗ್ಗೆ 10.30ಕ್ಕೆ ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ತನ್ನ 13ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ಇದು ಆಕಾಶವಾಣಿಯ ಕೇಳುಗರ ಬಳಗವಾಗಿದೆ.2008 ರಲ್ಲಿ ಕೇಳುಗರು, ಆಕಾಶವಾಣಿಯ ಅಧಿಕಾರಿ, ಸಿಬ್ಬಂದಿ ವರ್ಗದವರು ಒಟ್ಟಾಗಿ ಸೇರಿದ್ದರು. ಎಲ್ಲರೂ ಸೇರಿ ಒಂದು ಸಂಘ ಮಾಡಲು ನಿರ್ಧರಿಸಿದರು.ಎಂ ಕೆ ರುಕ್ಮಿಣಿ ಅವರ. ಕೇಳುಗರ ಬಳಗಕ್ಕೆ "ಸಮುದ್ಯತಾ ಶ್ರೋತೃ ಸಂಘ " ಎಂದು ಹೆಸರು ಸೂಚಿಸಿದರು. ಕಾರ್ಯಕಾರಿಣಿ ಸಭೆಯನ್ನು ಅವರ ಮನೆಯಲ್ಲಿಯೇ ನಡೆಸುತ್ತಿದ್ದರು. ಸಂಘ 15 ವರ್ಷಗಳನ್ನು ಪೂರೈಸಿದೆ. ಆದರೆ ಕೋವಿಡ್‌ಸಂದರ್ಭದಲ್ಲಿ ಎರಡು ವರ್ಷ ವಾರ್ಷಿಕೋತ್ಸವ ಆಚರಿಸಲಿಲ್ಲ. ಹೀಗಾಗಿ 13 ವಾರ್ಷಿಕೋತ್ಸವ,ಸಂಘದಲ್ಲಿ ಕೇವಲ ಮೈಸೂರಿನ ಕೇಳುಗರೂ ಮಾತ್ರವಲ್ಲದೆ, ಸುತ್ತಮುತ್ತಲಿನ ತಾಲೂಕು, ಜಿಲ್ಲೆಯ ಕೇಳುಗರು ಇದ್ದಾರೆ. ಮೈಸೂರಿನಲ್ಲಿ ಮಾತ್ರವಲ್ಲದೇ ಹಗಿನವಾಳು, ಪಾಲಹಳ್ಳಿ, ಕ್ಯಾತನಹಳ್ಳಿ, ಹುಳಿಮಾವು, ಕೆನ್ನಾಳು, ಬಿಳಿಕೆರೆ, ಗೊಮ್ಮಟಗಿರಿ, ಸಾಲುಂಡಿ ಬಳಿಯ ಕಲಿಯುವ ಮನೆ, ಮೈಸೂರಿನ ಅಕ್ಕನ ಬಳಗ, ಸಿ ಎಫ್ ಟಿ ಆರ್ ಐ ಬಡಾವಣೆಯಲ್ಲಿನ ಅಜಿತನ ನೆಲೆ, ಜೊತೆಗೆ ವಿಜಯನಗರದ ವಿಜಯಕುಮಾರ್ ಮನೆ- ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನ ನಡೆಸಲಾಗಿದೆ. ಎಲ್ಲಾ ಗ್ರಾಮಗಳಲ್ಲೂ ಆರೋಗ್ಯ, ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವಂತಹ ಭಾಷಣ, ಚರ್ಚೆ, ಶಾಲೆಗಳಲ್ಲಿ ಜಾಗೃತಿ ಜಾಥಾ ನಡೆಸಲಾಗಿದೆ. ಕೋವಿಡ್ ನಂತಹ ಸಂಕಷ್ಟದ ಅವಧಿಯಲ್ಲಿಯೂ ಬಳಗ ಸುಮ್ಮನೆ ಕೂರದೆ ಮೈಸೂರು ಆಕಾಶವಾಣಿಯೊಂದಿಗೆ ಜೊತೆಗೂಡಿ ನೊಂದವರಿಗೆ, ಸಂತ್ರಸ್ತ ಕುಟುಂಬ ವರ್ಗದವರಿಗೆ ಆ ಆ ಕ್ಷಣದಲ್ಲಿ ಬೇಕಾಗಿದ್ದ ಆಹಾರದ ಕಿಟ್ ಗಳನ್ನು ಕೂಡ ವಿತರಿಸಿದೆ. ಮೈಸೂರು ಆಕಾಶವಾಣಿ ಕೂಡ ನೇರ ಪೋನ್‌ಇನ್‌ಕಾರ್ಯಕ್ರಮದ ಮೂಲಕ ನೊಂದವರಿಗೆ ಸಾಂತ್ವನ ಹೇಳಿತು.10ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ರಾಜ್ಯಾದ್ಯಂತ ಲೇಖನ, ಕಥಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಮೈಸೂರು ಆಕಾಶವಾಣಿಯಲ್ಲಿ ಪ್ರಸಾರವಾದ ಪ್ರಮುಖ ಕಾರ್ಯಕ್ರಮಗಳ ಕುರಿತಾಗಿಯೂ ಕೂಡ ಬಳಗ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು. ಆ ಕಾರ್ಯಕ್ರಮದ ಉದ್ದೇಶ, ಜೊತೆಗೆ ಅಲ್ಲಿ ಭಾಗಿಯಾದ ಅನೇಕರನ್ನ ಸನ್ಮಾನಿಸಿತು. "ಅರಿವಿನ ಶಿಖರ ", "ಚಟ್ಪಟ್ ಚುರುಮುರಿ " ಇಂತಹ ಕಾರ್ಯಕ್ರಮಗಳ ಜನಪ್ರೀತಿಯನ್ನು ಕೂಡ ನೆನಪಿಸಿಕೊಂಡಿತು. ಮೈಸೂರು, ಮಂಡ್ಯ, ಚಾಮರಾಜನಗರ ಸಾವಯವ ಕೃಷಿಕರ ಜೊತೆಯಲ್ಲಿ ಒಪ್ಪಂದವನ್ನು ಕೂಡ ಮಾಡಿಕೊಂಡಿತು. ಈ ಮೂಲಕ ಬಳಗದ ಕೇಳುಗರಿಗೆ ಸಾವಯುವ ಪದಾರ್ಥಗಳು, ಕೃಷಿ ಪಧಾರ್ಥಗಳನ್ನು ಕೂಡ ಕಡಿಮೆ ದರದಲ್ಲಿ ಪಡೆದುಕೊಳ್ಳುವಂತಾಯಿತು. ಮೈಸೂರು ಆಕಾಶವಾಣಿಯೊಂದಿಗೆ ವನಮಹೋತ್ಸವ ಏರ್ಪಡಿಸಲಾಗಿತ್ತು. ಕೇಳುಗರಿಗೆ ಅನೇಕ ಶಿಬಿರ, ಪ್ರವಾಸ, ಸ್ಪರ್ಧೆ ನಡೆಸಿ, ವಾರ್ಷಿಕೋತ್ಸವದಲ್ಲಿ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕೂಡ ನಡೆಸಲಾಯಿತು.ಆಕಾಶವಾಣಿ ಕೇಳುಗರ ಬಳಗದ ರೂವಾರಿಯಾದ ದಿವಂಗತ ಎಂ.ಕೆ. ರುಕ್ಮಿಣಿ ಅವರ ಹೆಸರಿನಲ್ಲಿ ಪ್ರಶಸ್ತಿ ಕೂಡ ಸ್ಥಾಪಿಸಲಾಗಿದೆ. ಮೊದಲ ವರ್ಷ ಹನುಮನಾಳು ಶಿಲ್ಪಿ ರಮೇಶ್ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಬಾರಿ ಕಾಳಿಹುಂಡಿ ಶಿವಕುಮಾರ್ ಅವರಿಗೆ ನೀಡಲಾಗುತ್ತಿದೆ.