ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಜನವಿರೋಧಿ ಕಾಯ್ದೆ ರದ್ದುಗೊಳಿಸಲು ಆಗ್ರಹ

| Published : Apr 16 2025, 12:41 AM IST

ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಜನವಿರೋಧಿ ಕಾಯ್ದೆ ರದ್ದುಗೊಳಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮನೆಹಾಳು ಯೋಜನೆಗಳನ್ನೆಲ್ಲಾ ರದ್ದುಗೊಳಿಸಿ ಜನಪರ ನೀತಿಗಳನ್ನು ಜಾರಿಗೆ ತರುವುದಾಗಿ ಸಿದ್ದರಾಮಯ್ಯ ಮಾತುಕೊಟ್ಟಿದ್ದರು

ಕನ್ನಡಪ್ರಭ ವಾರ್ತೆ ಮೈಸೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆ ಸಂದರ್ಭದಲ್ಲಿ ಮಾತು ಕೊಟ್ಟಂತೆ ರೈತ, ಕಾರ್ಮಿಕ, ದಲಿತ, ಯುವಜನ, ಮಹಿಳಾ ಸಮುದಾಯಗಳ ಸಮಸ್ಯೆ ಬಗೆಹರಿಸಿ, ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಜನವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕದವರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟಿಸಿದರು.

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮನೆಹಾಳು ಯೋಜನೆಗಳನ್ನೆಲ್ಲಾ ರದ್ದುಗೊಳಿಸಿ ಜನಪರ ನೀತಿಗಳನ್ನು ಜಾರಿಗೆ ತರುವುದಾಗಿ ಸಿದ್ದರಾಮಯ್ಯ ಮಾತುಕೊಟ್ಟಿದ್ದರು. ಗೆದ್ದು ಮುಖ್ಯಮಂತ್ರಿಯಾದ ನಂತರವೂ ನೀಡಿದ್ದ ಭರವಸೆ ಈಡೇರಿಸಿಲ್ಲ. ಕೊಟ್ಟ ಮಾತಿಗೆ ವಿರುದ್ಧವಾಗಿ ಸರ್ಕಾರ ಸಾಗುತ್ತಿದೆ ಎಂದು ಅವರು ಕಿಡಿಕಾರಿದರು.

ಬಿಜೆಪಿ ಸರ್ಕಾರ ತಂದಿದ್ದ 9ಕ್ಕೆ 9 ಮನೆಹಾಳು ನೀತಿಗಳನ್ನು ರಾಜ್ಯದ ಕಾಂಗ್ರೆಸ್ ಸರ್ಕಾರವೂ ಮುಂದುವರಿಸುತ್ತಿದೆ. ಬಿಜೆಪಿ ತಂದಿದ್ದ ಈ ಎಲ್ಲಾ ಜನ ವಿರೋಧಿ ನೀತಿಗಳನ್ನು ಹಾಗೇ ಉಳಿಸಿಕೊಳ್ಳುತ್ತಾ ಜನಪರ ಸರ್ಕಾರವನ್ನು ಹೇಗೆ ನೀಡುತ್ತೀರಿ. ಅವನ್ನೇ ಮುಂದುವರೆಸುವುದಾದರೆ ಅಂದು ನೀವು ಒಡ್ಡಿದ್ದ ಪ್ರತಿರೋಧಕ್ಕೆ ಆರ್ಥವಾದರೂ ಏನು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರಿಂದ ಇಂತಹ ಆಡಳಿತ ನಿರೀಕ್ಷಿಸಿರಲಿಲ್ಲ. ಬೇಸರವೆನಿಸಿದರೂ ಇದು ಸತ್ಯ. ಕೊಟ್ಟ ಮಾತಿನಂತೆ ರೈತ, ಕಾರ್ಮಿಕ, ದಲಿತ, ಯುವಜನ, ಮಹಿಳಾ ಸಮುದಾಯಗಳ ಸಮಸ್ಯೆಗಳನ್ನು ಕೂಲಂಕುಷವಾಗಿ ಚರ್ಚಿಸಲು ಕೂಡಲೇ ಸಭೆ ನಿಗದಿ ಮಾಡಿ. ಈ ವಿಳಂಬ ನೀತಿ ಮತ್ತು ಕಡೆಗಣನಾ ಧೋರಣೆ ಮುಂದುವರೆದರೆ ಜನಹಿತ ರಕ್ಷಿಸಿಕೊಳ್ಳಲು ಸರ್ಕಾರದೊಂದಿಗೆ ತೀಕ್ಷ್ಣ ರೂಪದ ಸಂಘರ್ಷಗಳಿಗೆ ಇಳಿಯುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಸಿದರು.

ಕೇಂದ್ರ ಸರ್ಕಾರ ಈಗ ಮುಂದಿಟ್ಟಿರುವ ಕೃಷಿ ಉತ್ಪನ್ನಗಳ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ನೀತಿಯನ್ನು ಪಂಜಾಬ್ ಮಾದರಿಯಲ್ಲಿ ತಿರಸ್ಕರಿಸುವ ತೀರ್ಮಾನ ತೆಗೆದುಕೊಳ್ಳಬೇಕು. ಈ ಹಿಂದೆ ಬಿಜೆಪಿ ಸರ್ಕಾರ ತಂದಿದ್ದ ಭೂ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ತಿದ್ದುಪಡಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಅಕ್ರಮ ರೀತಿಯಲ್ಲಿ ಬೆಳಗಾವಿಯಲ್ಲಿ ತೆರೆದಿರುವ ಮೊದಲ ಖಾಸಗಿ ತರಕಾರಿ ಮಾರುಕಟ್ಟೆಯನ್ನು ಕೂಡಲೇ ಬಂದ್ ಮಾಡಿಸಿ ಎಪಿಎಂಸಿ ಕಟ್ಟಡದಲ್ಲೇ ಮಾರುಕಟ್ಟೆಗೆ ಪುನರ್ ಚಾಲನೆ ನೀಡಬೇಕು. ಕೃಷಿ ವಿದ್ಯುತ್ ಮೀಟರುಗಳಿಗೆ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಸುವುದನ್ನು ಕೈಬಿಡಬೇಕು. ಕೃಷಿಗೆ ವಿದ್ಯುತ್ ಸಂಪರ್ಕ ಪಡೆಯಲು ಘೋಷಿಸಲಾಗಿರುವ ಸ್ವಯಂ ವೆಚ್ಚ ಯೋಜನೆ ರದ್ದುಪಡಿಸಬೇಕು. ವಿದ್ಯುತ್ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಖಾಸಗೀಕರಿಸಬಾರದು ಎಂದು ಅವರು ಆಗ್ರಹಿಸಿದರು.

ಬಗರ್ ಹುಕುಂ ಮತ್ತು ಅರಣ್ಯ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಕಿರುಕುಳ ನೀಡಬಾರದು. ಚನ್ನರಾಯಪಟ್ಟಣದಲ್ಲಿ ಕೆಐಡಿಬಿಯಿಂದ ನಡೆಯುತ್ತಿರುವ ಅಕ್ರಮ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು. ಬಗರ್ ಹುಕುಂ ರೈತರ ಮೇಲೆ ಭೂ ಕಬಳಿಕೆ ನೀತಿಯಡಿ ಹಾಕಿರುವ ಮೊಕದ್ದಮೆಗಳನ್ನೆಲ್ಲಾ ರದ್ದು ಪಡಿಸಬೇಕು. ಕೃಷಿ ಕಾರ್ಮಿಕರಿಗೂ ಕಲ್ಯಾಣ ಮಂಡಳಿ ರಚಿಸಬೇಕು ಎಂದು ಅವರು ಒತ್ತಾಯಿಸಿದರು.

ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಅಧ್ಯಕ್ಷ ಚೌಡಹಳ್ಳಿ ಜವರಯ್ಯ, ಮುಖಂಡರಾದ ಪಿ. ಮರಂಕಯ್ಯ, ನಾಗನಹಳ್ಳಿ ವಿಜಯೇಂದ್ರ, ಕಂದೇಗಾಲ ಶ್ರೀನಿವಾಸ್, ಹೆಜ್ಜಿಗೆ ಪ್ರಕಾಶ್, ಮಹದೇವ ನಾಯಕ, ಎಚ್.ಎಂ. ಬಸವರಾಜು ಮೊದಲಾದವರು ಇದ್ದರು.