ಬಸವನಾಡಲ್ಲಿ ಸನಾತನ ಚಿಗುರೋಲ್ಲ, ಸಾಗರ ಖಂಡ್ರೆ ಆಯ್ಕೆ ಸಾಕ್ಷಿ: ಮಾವಳ್ಳಿ ಶಂಕರ್

| Published : Oct 27 2024, 02:01 AM IST

ಬಸವನಾಡಲ್ಲಿ ಸನಾತನ ಚಿಗುರೋಲ್ಲ, ಸಾಗರ ಖಂಡ್ರೆ ಆಯ್ಕೆ ಸಾಕ್ಷಿ: ಮಾವಳ್ಳಿ ಶಂಕರ್
Share this Article
  • FB
  • TW
  • Linkdin
  • Email

ಸಾರಾಂಶ

ಬೀದರಿನ ರಂಗ ಮಂದಿರದಲ್ಲಿ ಶನಿವಾರ ನಡೆದ ನೂತನ ಸಂಸದ ಸಾಗರ ಖಂಡ್ರೆ ಹಾಗೂ ಎಂಎಲ್ಸಿ ಚಂದ್ರಶೇಖರ ಪಾಟೀಲ್ರ ಅಭಿನಂದನಾ ಸಮಾರಂಭದಲ್ಲಿ ಸಂವಿಧಾನ ಪೀಠಿಕೆ ವಾಚನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್

ಜಾತಿ ವೀಷ ಬೀಜಗಳನ್ನು ಬಿತ್ತುವ, ಧರ್ಮದ ವ್ಯಾಖ್ಯಾನವನ್ನೇ ಬದಲಿಸಿ ತುಳಿಯುವ ರಾಜಕೀಯ ಪಕ್ಷವನ್ನು ದೂರವಿಟ್ಟು ಸಂಸದರನ್ನಾಗಿ ಸಾಗರ ಖಂಡ್ರೆ ಅವರನ್ನು ಆಯ್ಕೆ ಮಾಡಿರುವ ಬಸವಣ್ಣನ ನೆಲದ ಈ ಜನ ಇಲ್ಲಿ ಸನಾತನ ಚಿಗುರೋಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ ಅಭಿಪ್ರಾಯ ವ್ಯಕ್ತಪಡಿಸಿದರು.ನಗರದ ಡಾ.ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಶನಿವಾರ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ದಲಿತ ಸಂಘಟನಗಳ ಒಕ್ಕೂಟ, ಸಂವಿಧಾನ ಸಂರಕ್ಷಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ನೂತನ ಸಂಸದ ಸಾಗರ ಖಂಡ್ರೆ ಹಾಗೂ ಎಂಎಲ್ಸಿ ಚಂದ್ರಶೇಖರ ಪಾಟೀಲ್ರ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಇಂದು ಸಂವಿಧಾನದ ಮೇಲೆ ಕತ್ತಿ ತೂಗುತ್ತಿದೆ. ಹೀಗಾಗಿ ಸಂವಿಧಾನ ಉಳಿಸುವ ಕೆಲಸ ಎಲ್ಲರೂ ಮಾಡಬೇಕಾಗಿದೆ ಎಂದರು.

ಜಾತ್ಯತೀತ ದೇಶದಲ್ಲಿ ಜಾತಿ ಗಣತಿ ಏಕೆ ಎಂದು ಪೇಜಾವರ ಶ್ರೀಗಳು ಪ್ರಶ್ನಿಸಿದ್ದಾರೆ ಆದರೆ ಮೇಲ ವರ್ಗದ ಜಾತಿ ಜನಾಂಗದವರಿಗೆ ಶಿಕ್ಷಣ, ನೌಕರಿ ಮತ್ತಿತರಗಳಲ್ಲಿ ಉತ್ತಮ ವ್ಯವಸ್ಥೆ ಕಲ್ಪಿಸುವಂತಹ ಇಡಬ್ಲ್ಯೂಎಸ್ ಮೀಸಲಾತಿ ನೀಡಿರುವುದು ಏತಕ್ಕೆ ಎಂದು ಶ್ರೀಗಳು ಉತ್ತರಿಸಬೇಕಾಗಿತು.

ಜನಗಣತಿ ಎಂಬುದು ಯಾವುದೇ ಜಾತಿಯನ್ನು ಬೇರ್ಪಡಿಸುವ ಕೆಲಸವಲ್ಲ ಕೇವಲ ಸಂಖ್ಯೆಗಾಗಿ ಮಾತ್ರ ಗಣತಿ ನಡೆಯುತ್ತಿದೆ ಇದರಿಂದ ಸೌಲಭ್ಯದಿಂದ ವಂಚಿತ ಜಾತಿಗಳಿಗೆ ಸೌಲಭ್ಯ ಸಿಗುತ್ತದೆ ವಿನಹ ಮತ್ತೇನಿಲ್ಲಾ ಎಂದರು.

ಮುಖ್ಯಮಂತ್ರಿ ಸಿದ್ರಾಮಯ್ಯ ನೇತೃತ್ವದ ಸರ್ಕಾರ ಎಲ್ಲ ವರ್ಗಗಳಿಗೆ ಅವಕಾಶ ನೀಡಿದೆ. ದಿನ ಯುವ ಪೀಳಿಗೆ ಡಾ. ಅಂಬೇಡ್ಕರ್ ಅವರ ಚಿಂತನೆಗಳನ್ನು ಆದರ್ಶವನ್ನಾಗಿ ಮಾಡಿಕೊಳ್ಳಬೇಕಾಗಿರುವುದು ಅಗತ್ಯವಿದೆ ಎಂದರು.

ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಪ್ರಧಾನ ಸಂಚಾಲಕ ಕೆಎಂ ರಾಮಚಂದ್ರಪ್ಪ ಮಾತನಾಡಿ, ನಮ್ಮನ್ನು ಆಳುವವರು ಪ್ರಜಾಪ್ರಭುತ್ವಕ್ಕೆ ಧಕ್ಕೆ ಬರುವಂತೆ ಮಾಡುತಿದ್ದಾರೆ. ಕಳೆದ 10 ವರ್ಷದಿಂದ ಸಂವಿಧಾನವನ್ನು ಬದಲಾಯಿಸಬೇಕು ಎಂದು ನಾವು ಆಯ್ಕೆ ಮಾಡಿದವರೆ ಹೇಳುತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನಾವು ಯಾರ ಮನೆ ಬಾಗಿಲು ಕಾಯುವುದು ಬೇಡ ನಮ್ಮ ಹಕ್ಕುಗಳನ್ನು ಹೋರಾಟದ ಮೂಲಕ ಪಡೆಯಲು ಸಿದ್ಧರಿರಬೇಕು ಎಂದರು. ನಮ್ಮ ಬೇಡಿಕೆ ಈಡೇರದಿದ್ದರೆ ಮುಂದಿನ ದಿಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ಪಕ್ಷಾತೀತ ಹೋರಾಟ ಮಾಡಲಾಗುವುದು ಎಂದರು

ಇಡೀ ದೇಶದಲ್ಲಿಯೇ ಅತಿ ಚಿಕ್ಕ ವಯಸ್ಸಿನಲ್ಲಿ ಸಂಸದರಾಗಿ ಆಯ್ಕೆಯಾದ ಸಾಗರ ಖಂಡ್ರೆ ಕೂಡ ಸಂವಿಧಾನಕ್ಕೆ ಮಾನ್ಯತೆ ಕೊಡುವ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

ಸಂವಿಧಾನ ದೇಶದ ಹೃದಯವಿದ್ದಂತೆ

ಸಂವಿಧಾನದ ಮೇಲೆ ನಮ್ಮ ದೇಶ ನಡೆಯುತ್ತಿದೆ. ಸಂವಿಧಾನ ಎಂದರೆ ನಮ್ಮ ದೇಶದ ಹೃದಯವಿದ್ದಂತೆ ಅದು ಕೆಲಸ ಮಾಡುವುದನ್ನು ನಿಲ್ಲಿಸಿ ಬಿಟ್ಟರೆ ಇಡೀ ದೇಶವೇ ಸ್ತಬ್ಧವಾಗುತ್ತದೆ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಹೇಳಿದರು.

ಸಂವಿಧಾನದ ಆಧಾರದ ಮೇಲೆಯೇ ನಮಗೆ ಈ ಸ್ಥಾನ ಸಿಕ್ಕಿದ್ದು, ಸಾಗರ ಖಂಡ್ರೆ ಒಬ್ಬ ಯುವ ಸಂಸದರಿದ್ದಾರೆ. ತಾವೆಲ್ಲರೂ ಸಾಗರ ಖಂಡ್ರೆ ಅವರನ್ನು ಗೆಲ್ಲಿಸುವ ಮೂಲಕ ಜಿಲ್ಲೆಯ ಇತಿಹಾಸವನ್ನೇ ಬದಲಿಸಿದ್ದೀರಿ. ನಾವು ಅವರು, ಸಚಿವ ಖಂಡ್ರೆ ಸೇರಿದಂತೆ ಎಲ್ಲರು ಕೂಡ ಜಿಲ್ಲೆಯನ್ನು ಅಭಿವೃದ್ಧಿ ಮಾಡುವ ಮಾದರಿ ಜಿಲ್ಲೆಯನ್ನಾಗಿ ಮಾಡೋಣ ಎಂದರು.

ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಸಂಸದ ಸಾಗರ ಖಂಡ್ರೆ, ಎಂಎಲ್ಸಿ ಚಂದ್ರಶೇಖರ ಪಾಟೀಲ್, ನಗರ ಸಭೆ ಅಧ್ಯಕ್ಷ ಮ್ಹಮದ ಗೌಸ್, ಅಮೃತರಾವ ಚಿಮಕೋಡೆ, ಬಸವರಾಜ ಜಾಬಶೆಟ್ಟಿ, ಮನ್ನಾನ ಸೇಠ, ಜಾನ ವೆಸ್ಲಿ, ಶ್ರೀಪತರಾವ ದೀನೆ ಮತ್ತಿತರರು ಇದ್ದರು.

ಸಂವಿಧಾನ ಸಂರಕ್ಷಣಾ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ಅನೀಲಕುಮಾರ ಬೆಲ್ದಾರ್ ಅಧ್ಯಕ್ಷತೆ ವಹಿಸಿದರು. ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ರಮೇಶ ಡಾಕುಳಗಿ ಸ್ವಾಗತಿಸಿದರು. ಶೋಷಿತ ಸಮುದಾಯಗಳ ಒಕ್ಕೂಟದ ಸಂಚಾಲಕ ಬಸವರಾಜ ಮಾಳಗೆ ಪ್ರಾಸ್ತಾವಿಕ ಮಾತನಾಡಿದರು. ಬಾಬು ಪಾಸ್ವಾನ್ ಸಂವಿಧಾನ ಪೀಠಿಕೆ ವಾಚನ ಮಾಡಿದರು. ಪ್ರದೀಪ ನಾಟೇಕರ್ ನಿರೂಪಿಸಿದರು.

ಇದಕ್ಕೂ ಮುನ್ನ ನಗರದ ಡಾ.ಅಂಬೇಡ್ಕರ್ ವೃತ್ತದಿಂದ ರಂಗಮಂದಿರ ವರೆಗೆ ವಿವಿಧ ಸಂಘಟನೆಯ ಪ್ರಮುಖರು ಮೆರವಣಿಗೆ ನಡೆಸಿದರು.