ಸನಾತನ ಸಂಸ್ಕೃತಿ ಯಾರ ಮೇಲೂ ಸವಾರಿ ಮಾಡಿಲ್ಲ: ಶ್ರೀರಾಘವೇಶ್ವರ ಸ್ವಾಮೀಜಿ

| Published : Mar 24 2024, 01:31 AM IST

ಸನಾತನ ಸಂಸ್ಕೃತಿ ಯಾರ ಮೇಲೂ ಸವಾರಿ ಮಾಡಿಲ್ಲ: ಶ್ರೀರಾಘವೇಶ್ವರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಜಗತ್ತಿನಲ್ಲಿ ಹೆಸರು ಮಾಡಿದ ಅದೆಷ್ಟೋ ಸಾಮ್ರಾಜ್ಯಗಳು ಪತನಗೊಂಡಿದೆ. ಅವು ಮತ್ತೆ ಎದ್ದು ಬಂದ ದಾಖಲೆಯೇ ಇಲ್ಲ. ಆದರೆ ನಮ್ಮ ಸನಾತನ ಧರ್ಮದ ನಂಬಿಕೆಯ ಮೂಲ ದೇವಾಲಯಗಳು. ಬೇರೆ ಬೇರೆ ಕಾರಣಕ್ಕೆ ಅಂದು ಪತನಗೊಂಡಿದ್ದರೂ ಮತ್ತೆ ಎದ್ದು ನಿಂತಿರುವುದು ನಮ್ಮ ಸಂಸ್ಕೃತಿಯ ಮೂಲ ಬೇರು ಎನಿಸಿಕೊಂಡ ಆಧ್ಯಾತ್ಮದ ಶಕ್ತಿಯ ಮಹತ್ವ ತಿಳಿಸುತ್ತದೆ. ಸನಾತನ ಸಂಸ್ಕೃತಿ ಯಾರೊಬ್ಬರ ಮೇಲೆಯೂ ಸವಾರಿ ಮಾಡಿ ಬೆಳೆದಿದ್ದಲ್ಲ.

ಕನ್ನಡಪ್ರಭ ವಾರ್ತೆ ಸಾಗರ

ಸನಾತನ ಹಿಂದೂ ಧರ್ಮ ಪರಂಪರೆಯ ಮೂಲ ಸತ್ವದ ಮೇಲೆ ನಿಂತಿದೆಯೇ ಹೊರತು ಹಣ ಹಾಗೂ ತೋಳ್ಬಲದ ಮೇಲೆ ನಿಂತಿಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ತಾಲೂಕಿನ ಮಂಕಳಲೆ ಗ್ರಾಮದಲ್ಲಿ ಪುನರ್ನವ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ಶ್ರೀ ಶಂಭುಲಿಂಗೇಶ್ವರ, ಶ್ರೀ ಮಹಾಕಾಳಿ ಹಾಗೂ ಪರಿವಾರ ದೇವರ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಕಾರ್ಯಕ್ರಮದ ಧರ್ಮಸಭೆ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ ಧರ್ಮದ ಮೂಲಸತ್ವ ಯಾರಿಗೆ, ಯಾವಾಗ ಬೇಕಾದರೂ ಪ್ರೇರಣೆ ನೀಡಿ ಸಮಾಜದಲ್ಲಿ ಉತ್ತಮ ಕೆಲಸ ನಡೆಯುವಂತೆ ಮಾಡುತ್ತದೆ. ಇದಕ್ಕೆ ಜೀರ್ಣೋದ್ಧಾರವಾಗಿ ಲೋಕಾರ್ಪಣೆಗೊಂಡ ಶ್ರೀ ಶಂಭುಲಿಂಗೇಶ್ವರ ಮತ್ತು ಮಹಾಕಾಳಿ ದೇವಾಲಯವೇ ಸಾಕ್ಷಿ ಎಂದರು.

ಜಗತ್ತಿನಲ್ಲಿ ಹೆಸರು ಮಾಡಿದ ಅದೆಷ್ಟೋ ಸಾಮ್ರಾಜ್ಯಗಳು ಪತನಗೊಂಡಿದೆ. ಅವು ಮತ್ತೆ ಎದ್ದು ಬಂದ ದಾಖಲೆಯೇ ಇಲ್ಲ. ಆದರೆ ನಮ್ಮ ಸನಾತನ ಧರ್ಮದ ನಂಬಿಕೆಯ ಮೂಲ ದೇವಾಲಯಗಳು. ಬೇರೆ ಬೇರೆ ಕಾರಣಕ್ಕೆ ಅಂದು ಪತನಗೊಂಡಿದ್ದರೂ ಮತ್ತೆ ಎದ್ದು ನಿಂತಿರುವುದು ನಮ್ಮ ಸಂಸ್ಕೃತಿಯ ಮೂಲ ಬೇರು ಎನಿಸಿಕೊಂಡ ಆಧ್ಯಾತ್ಮದ ಶಕ್ತಿಯ ಮಹತ್ವ ತಿಳಿಸುತ್ತದೆ. ಸನಾತನ ಸಂಸ್ಕೃತಿ ಯಾರೊಬ್ಬರ ಮೇಲೆಯೂ ಸವಾರಿ ಮಾಡಿ ಬೆಳೆದಿದ್ದಲ್ಲ. ಮೂಲದ ಅಂತಃಸತ್ವವೇ ಅಷ್ಟು ಗಟ್ಟಿಯಾಗಿರುವುದರಿಂದ ಅದು ಎದ್ದು ಬರಲಿದೆ ಎಂದರು.

ಮಹಾದಾನಿ ದೇವಕಮ್ಮ ಮಂಕಳಲೆ, ವೇ.ಮೂ.ನಾಗೇಂದ್ರ ಭಟ್, ಸಿಗಂದೂರು ಕ್ಷೇತ್ರದ ಪ್ರಧಾನ ಅರ್ಚಕ ಶೇಷಗಿರಿ ಭಟ್, ವಿದ್ವಾನ್ ವಿಷ್ಣುಪ್ರಸಾದ್ ಪುಚ್ಚುಕಾಡು, ದೇವಸ್ಥಾನ ಸಮಿತಿ ಅಧ್ಯಕ್ಷ ಗಣಪತಿ, ಚಿಪ್ಳಿ ಸುಬ್ರಹ್ಮಣ್ಯ, ಸಮರ್ಥ ಭಟ್, ಗಣಪತಿ ಮತ್ತಿಕೊಪ್ಪ, ಹು.ಬಾ.ಅಶೋಕ, ಮಂಜಪ್ಪ ಮತ್ತಿತರರಿದ್ದರು.

ಸಂತತಿಯ ಸಂಪತ್ತು ಎಂದು ಭಾವಿಸಿ

ನಮ್ಮ ಸಮಾಜದಲ್ಲಿ ಇತ್ತೀಚಿನ ದುರಂತವೆಂದರೆ ಸಂತತಿಯ ಸಂಪತ್ತು ಎಂದು ಭಾವಿಸದಿರುವುದು ಮತ್ತು ಮಕ್ಕಳು ಭಾರವೆನ್ನುವ ಮನಃಸ್ಥಿತಿ ಬೆಳೆದಿರುವುದು. ಇದರಿಂದಾಗಿ ಯುವ ಪೀಳಿಗೆ ಕ್ಷೀಣವಾಗುತ್ತ ಸಾಗುತ್ತಿದೆ. ಸಮಾಜದಲ್ಲಿ ಹಳೆ ತಲೆಮಾರಿನ ಜೊತೆಯಲ್ಲಿ ಹೊಸ ತಲೆಮಾರು ಮಿಳಿತವಾಗಬೇಕು. ಆಗ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗಲು ಸಾಧ್ಯ. ನಮ್ಮ ಸಂಸ್ಕೃತಿಯ ಮೂಲಬೇರು ಉಳಿಯಬೇಕಿದ್ದರೆ ಮನೆಯಲ್ಲಿ ಸಂತತಿಯ ಸಮೃದ್ಧಿಯೂ ಇರಬೇಕು ಎಂದು ಶ್ರೀರಾಘವೇಶ್ವರ ಸ್ವಾಮೀಜಿ ಹೇಳಿದರು.ಹಾಲಿ ಸಂಸದ, ಮಾಜಿ ಸಚಿವರಿಂದ ರಾಘವೇಶ್ವರ ಸ್ವಾಮೀಜಿ ಭೇಟಿಸಾಗರ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ದೇವಸ್ಥಾನಗಳನ್ನು, ಧಾರ್ಮಿಕ ಗುರುಗಳನ್ನು ಭೇಟಿ ಮಾಡುವುದು ಮುಂದುವರೆದಿದೆ. ತಾಲೂಕಿನ ಮಂಕಳಲೆಯ ಶ್ರೀ ಶಂಭುಲಿಂಗೇಶ್ವರ- ಶ್ರೀ ಮಹಾಕಾಳಿ ಹಾಗೂ ಪರಿವಾರ ದೇವರ ಪ್ರತಿಷ್ಠಾಪನೆ, ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಭೇಟಿಯಾಗಿ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದರು.ಕಳೆದ ಕೆಲವು ದಿನಗಳಿಂದ ನಿರಂತರ ದೇವಸ್ಥಾನ, ಸ್ವಾಮೀಜಿಗಳ ಭೇಟಿಯಲ್ಲಿರುವ ಈಶ್ವರಪ್ಪ ಶುಕ್ರವಾರ ಮಧ್ಯಾಹ್ನ ಕೆಲ ಬೆಂಬಲಿಗರೊಂದಿಗೆ ಮಂಕಳಲೆ ದೇವಸ್ಥಾನಕ್ಕೆ ಆಗಮಿಸಿ ಶ್ರೀರಾಘವೇಶ್ವರ ಸ್ವಾಮೀಜಿ ಭೇಟಿಯಾಗಿ ಆಶೀರ್ವಾದ ಪಡೆದರು. ಇದಾದ ಒಂದು ಗಂಟೆ ಬಳಿಕ ಸಂಸದ ಬಿ.ವೈರಾಘವೇಂದ್ರ ಸಭೆಗೆ ಆಗಮಿಸಿ, ಆಶೀರ್ವಚನ ಮುಗಿಯುವವರೆಗೂ ಇದ್ದು, ಗುರುಗಳಿಂದ ಮಂತ್ರಾಕ್ಷತೆ ಪಡೆದರು. ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್, ಪ್ರಮುಖರಾದ ಗಣೇಶ ಪ್ರಸಾದ್, ಗುರುಮೂರ್ತಿ, ಪ್ರಸನ್ನ, ಶ್ರೀಧರ ಮುಂತಾದವರಿದ್ದರು.