6 ತಿಂಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಮಂಜೂರಾತಿ

| Published : Apr 23 2024, 12:54 AM IST

ಸಾರಾಂಶ

ಮಾಗಡಿ: ಆಡಳಿತ ಪಕ್ಷದ ಶಾಸಕರಾದರೆ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆಂದು ಜನತೆಗೆ ನೀಡಿದ ಭರವಸೆಯಂತೆ 6 ತಿಂಗಳ ಅವಧಿಯಲ್ಲಿ ಎಲ್ಲಾ ರಂಗದಲ್ಲೂ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರಾತಿ ಮಾಡಿಸಿದ್ದು ಚುನಾವಣೆ ನಂತರ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಬಾಲಕೃಷ್ಣ ಹೇಳಿದರು.

ಮಾಗಡಿ: ಆಡಳಿತ ಪಕ್ಷದ ಶಾಸಕರಾದರೆ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆಂದು ಜನತೆಗೆ ನೀಡಿದ ಭರವಸೆಯಂತೆ 6 ತಿಂಗಳ ಅವಧಿಯಲ್ಲಿ ಎಲ್ಲಾ ರಂಗದಲ್ಲೂ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರಾತಿ ಮಾಡಿಸಿದ್ದು ಚುನಾವಣೆ ನಂತರ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಬಾಲಕೃಷ್ಣ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ 6 ತಿಂಗಳ ಸಾಧನ ಪಥ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಾಜಿ ಶಾಸಕ ಎ.ಮಂಜುನಾಥ್ ಒಂದು ವರ್ಷದ ಸಾಧನೆ ಏನೆಂಬುದರ ಬಗ್ಗೆ ಚರ್ಚೆಗೆ ಬರಲಿ ಎಂದು ಹೇಳಿದ್ದರು, ಅವರು ಚರ್ಚೆಗೆ ಬರುವ ಮುನ್ನ ಪುಸ್ತಕ ರೂಪದಲ್ಲೆ 6 ತಿಂಗಳಲ್ಲಿ ಎಷ್ಟು ಕಾಮಗಾರಿಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆ ಎಂಬುದನ್ನು ಮಾಹಿತಿ ಸಮೇತ ಪುಸ್ತಕ ಬಿಡುಗಡೆ ಮಾಡಿದ್ದೇನೆ. ಇದರಲ್ಲಿ ಒಂದೇ ಒಂದು ಸುಳ್ಳು ಎಂಬುದನ್ನು ಸಾಬೀತುಪಡಿಸಿದರೆ ರಾಜಕೀಯ ಬಿಡುತ್ತೇನೆ. ನಾನು ಬುರುಡೆ ಬಿಡುವ ರಾಜಕಾರಣಿ ಅಲ್ಲ. 6 ತಿಂಗಳಲ್ಲಿ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ 900 ಕೋಟಿ ಸೇರಿ ಕ್ಷೇತ್ರಕ್ಕೆ 1340 ಸಾವಿರ ಕೋಟಿ ಅನುದಾನ ತಂದಿದ್ದೇನೆಂದು ಬಾಲಕೃಷ್ಣ ಹೇಳಿದರು.

ಜಿಡ್ಡು ಹಿಡಿದು ಕೂತಿದ್ದ ತಾಲೂಕು ಆಡಳಿತವನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ನಾನು ಮತ್ತು ಸಂಸದ ಡಿ.ಕೆ.ಸುರೇಶ್ ಶ್ರಮಿಸಿ ದಾಖಲಾತಿಗಳನ್ನು ಡಿಜಿಟಲಿಕರಣ ಮಾಡಿಸಿದ್ದೇವೆ. ಜಮೀನು ಮಂಜೂರಾತಿ ಆದವರಿಗೆ ಖಾತೆ, ಪೋಡಿ ಮಾಡಲಾಗುತ್ತಿದೆ. ಇದಕ್ಕಾಗಿ ಹೆಚ್ಚುವರಿ 60 ಸರ್ವೆ ಅಧಿಕಾರಿಗಳನ್ನು ಬಿಡಲಾಗಿದೆ. ಈ ಹಿಂದೆ ರೈತರ ಪರ ಅನ್ನುತ್ತಿದ್ದವರು ಈ ಕೆಲಸ ಏಕೆ ಮಾಡಲಿಲ್ಲ. ತಾಲೂಕು ಕಚೇರಿ ಕಟ್ಟಡ ನಿರ್ಮಾಣಕ್ಕೆ 17 ಕೋಟಿ ಅನುದಾನಕ್ಕೆ ಈಗಾಗಲೇ ನೀಲನಕ್ಷೆ ಸಿದ್ದ ಪಡಿಸಿದ್ದು ಬಜೆಟ್‌ನಲ್ಲೂ ಹಣ ಬಿಡುಗಡೆಯಾಗಿದೆ. ಶೀಘ್ರದಲ್ಲೆ ತಾಲೂಕು ಕಚೇರಿ ಕಟ್ಟಡಕ್ಕೆ ಚಾಲನೆ ನೀಡಲಾಗುತ್ತದೆ.

ದಾಖಲಾತಿ ಬಿಡುಗಡೆ ಮಾಡಲಿ: ಮಾಜಿ ಶಾಸಕ ಎ.ಮಂಜುನಾಥ್ ಹೇಮಾವತಿ ವಿಚಾರವಾಗಿ ತಮ್ಮ ಬಳಿ ಇರುವ ದಾಖಲಾತಿಗಳನ್ನು ಬಿಡುಗಡೆ ಮಾಡಿಸಲಿ ಸುಮ್ಮಸುಮ್ಮನೆ ಬುರುಡೆ ಬಿಡುವುದನ್ನು ನಿಲ್ಲಿಸಲಿ. ಶಾಸಕರಾಗಿದ್ದ ಅವಧಿಯಲ್ಲಿ ಪೈಪ್ ಲೈನ್ ಹಾಕಲು, ರಸ್ತೆ ಹೈವೆ, ರೈಲ್ವೆ, ಅರಣ್ಯ ಇಲಾಖೆಯಿಂದ ಎನ್ಒಸಿ ಪಡೆಯಲು ಪತ್ರ ಬರೆದಿದ್ದಾರಾ, ಸಮ್ಮಿಶ್ರ ಸರ್ಕಾರದಲ್ಲಿ ಎಕ್ಸ್‌ಪ್ರೆಸ್‌ ಕೆನಾಲ್ ಬೇಡ ಎಂದು ಅಂದು ಸಚಿವರಾಗಿದ್ದ ಮಾಧುಸ್ವಾಮಿ ವಿರೋಧ ಮಾಡಿದಾಗ ಮಾಜಿ ಶಾಸಕ ಎ.ಮಂಜುನಾಥ್ ಅವರು ಮಾಜಿ ಡಿಸಿಎಂ ಡಾ.ಅಶ್ವಥ್ ನಾರಾಯಣ್ ಯಾವ ಹೋರಾಟ ಮಾಡಿದ್ದಾರೆ? ಈಗ ಎಕ್ಸ್‌ಪ್ರೆಸ್‌ ಕೆನಾಲ್ ದುಡ್ಡು ಹೊಡೆಯುವ ಯೋಜನೆಯೆಂದು ಟೀಕೆ ಮಾಡುತ್ತಾರೆ. ಈಗಾಗಲೇ ನಾನು ಮತ್ತು ಸಂಸದರು ಪೈಪ್ಲೈನ್ ಹಾಕುವುದಕ್ಕೆ ಅನುಮೋದನೆ ಪಡೆದಿದ್ದೇವೆ. ಕಾಮಗಾರಿ ಆರಂಭಿಸಿ ತಾಲೂಕಿನ ಕೆರೆಗಳನ್ನು ತುಂಬಿಸುತ್ತೇವೆ. ಎತ್ತಿಹೊಳೆ ಸತ್ತೆಗಾಲದಿಂದ ಕಾವೇರಿ ನೀರನ್ನು ತಾಲೂಕಿನ ಜಲಾಶಯಕ್ಕೆ ತಂದು ನೀರಿನ ಬವಣೆ ನೀಗಿಸುತ್ತೇವೆ ಎಂದರು.

140 ಕೋಟಿ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದ್ದು ಮಾಗಡಿ ಸೇರಿದಂತೆ ತಾಲೂಕಿನ ರಸ್ತೆಗಳಿಗೆ ಡಾಂಬರೀಕಣ ಆಗಲಿದೆ. ಕೆಪಿಎಸ್ಸಿ ಶಾಲೆ, ಕುದೂರು ಬಸ್ ನಿಲ್ದಾಣ, ಡಿಪೋ, ಮೈದಾನ ಅಭಿವೃದ್ಧಿ, ಅಂಬೇಡ್ಕರ್ ಭವನ ನಿರ್ಮಾಣ, ಬಾಲಗಂಗಾಧರನಾಥ ಸ್ವಾಮೀಜಿ, ಆಡಿಟೋರಿಯಂ, ಕೋಟೆ ಅಭಿವೃದ್ಧಿ ಹೀಗೆ ಹತ್ತು ಹಲವು ಯೋಜನೆಗಳನ್ನು ತರುತ್ತಿದ್ದು ಸಂಸದ ಡಿಕೆ.ಸುರೇಶ್ ಮತ ನೀಡಿ ಎಂದು ಮನವಿ ಮಾಡಿದರು. ಬಾಕ್ಸ್ ............

ಹೆಚ್ಚು ಲೀಡ್‌ ಕೊಡುವ ಗ್ರಾಮಗಳಿಗೆ ಹೆಚ್ಚು ಅನುದಾನ

ಮತಗಟ್ಟೆಯಲ್ಲಿ ಯಾರು ಹೆಚ್ಚು ಲೀಡ್ ಕೊಡುವ ಗ್ರಾಮಗಳಿಗೆ ಹೆಚ್ಚಿನಅನುದಾನ ನೀಡಲಾಗುತ್ತದೆ. 50 ಮತ ಹೆಚ್ಚಿಗೆ ಲೀಡ್ ಕೊಡುವ ಗ್ರಾಮಗಳಿಗೆ 50 ಲಕ್ಷ ಅನುದಾನ ಬಿಡಗುಡೆ ಮಾಡುತ್ತೇವೆ. ಸಂಸತ್ ಚುನಾವಣೆಯಲ್ಲಿ ಡಿ.ಕೆ. ಪರವಾಗಿ ಹೆಚ್ಚಿನ ಮತ ಕೊಡುವ ಗ್ರಾಮಗಳಿಗೆ ಹೆಚ್ಚಿನ ಅನುದಾನ ನೀಡುತ್ತೇವೆ.

-ಬಾಲಕೃಷ್ಣ, ಶಾಸಕರು

ಮಾಗಡಿ.ಫೋಟೊ 22ಮಾಗಡಿ1 :

ಮಾಗಡಿ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕ ಬಾಲಕೃಷ್ಣ 6 ತಿಂಗಳ ಸಾಧನಾ ಪಥ ಪುಸ್ತಕ ಬಿಡುಗಡೆ ಮಾಡಿದರು.