ಗಾಂಧಿ ಮೈದಾನಕ್ಕೆ ಬನ್ನಿ.. ಪಾಯಿಂಟ್‌ನಲ್ಲಿ ಫೋಟೋ ತೆಗೆಯಿರಿ
2 Min read
Author : KannadaprabhaNewsNetwork
Published : Oct 16 2023, 01:45 AM IST
Share this Article
FB
TW
Linkdin
Whatsapp
ಚಿತ್ರ : 15ಎಂಡಿಕೆ2 : ಮರಳು ಕಲಾವಿದೆ ಎಂ.ಎನ್. ಗೌರಿ | Kannada Prabha
Image Credit: KP
ಮೈಸೂರಿನ ಚಾಮುಂಡಿ ಬೆಟ್ಟ ತಪ್ಪಲಿನಲ್ಲಿ ಕಳೆದ 5 ವರ್ಷಗಳಿಂದ ತನ್ನದೇ ಆದ ಮರಳು ಕಲಾ ಪ್ರದರ್ಶನ ಗ್ಯಾಲರಿ ಮೂಲಕ ಕರ್ನಾಟಕದ ಏಕೈಕ ಮರಳು ಕಲಾಗ್ಯಾಲರಿ ಹೊಂದಿರುವ ಎಂ.ಎನ್. ಗೌರಿ, ಈ ಸಂಗ್ರಹಾಲಯದಲ್ಲಿ ನೂರಾರು ಮರಳು ಕಲಾಕೃತಿಗಳನ್ನು ದಿನನಿತ್ಯ ಸಾವಿರಾರು ವೀಕ್ಷಕರ ನೋಟಕ್ಕೆ ಅವಕಾಶ ಕಲ್ಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ ಮರಳನ್ನೇ ಮೂಲವಾಗಿರಿಸಿಕೊಂಡು ಅದ್ಭುತ ದೃಶ್ಯಕಾವ್ಯ ಸೃಷ್ಟಿಸುವ ಕರ್ನಾಟಕದ ಹೆಸರಾಂತ ಮರಳು ಕಲಾವಿದೆ ಎಂ.ಎನ್. ಗೌರಿ, ಈ ಬಾರಿ ಮಡಿಕೇರಿ ದಸರಾದ ವಿಶೇಷ ಆಕರ್ಷಣೆಯಾಗಿ ಮರಳಿನಲ್ಲಿ ‘ವನದೈವದ’ ಕಲಾಕೃತಿ ರೂಪಿಸಲಿದ್ದಾರೆ. ಅಂತೆಯೇ ಮಡಿಕೇರಿ ದಸರಾ ಫೋಟೋ ಗ್ಯಾಲರಿ ಕೂಡ ಈ ಬಾರಿಯ ಮಡಿಕೇರಿ ದಸರಾ ಆಕರ್ಷಣೆಗಳಲ್ಲೊಂದಾಗಲಿದೆ. ಮೈಸೂರಿನ ಚಾಮುಂಡಿ ಬೆಟ್ಟ ತಪ್ಪಲಿನಲ್ಲಿ ಕಳೆದ 5 ವರ್ಷಗಳಿಂದ ತನ್ನದೇ ಆದ ಮರಳು ಕಲಾ ಪ್ರದರ್ಶನ ಗ್ಯಾಲರಿ ಮೂಲಕ ಕರ್ನಾಟಕದ ಏಕೈಕ ಮರಳು ಕಲಾಗ್ಯಾಲರಿ ಹೊಂದಿರುವ ಎಂ.ಎನ್. ಗೌರಿ, ಈ ಸಂಗ್ರಹಾಲಯದಲ್ಲಿ ನೂರಾರು ಮರಳು ಕಲಾಕೃತಿಗಳನ್ನು ದಿನನಿತ್ಯ ಸಾವಿರಾರು ವೀಕ್ಷಕರ ನೋಟಕ್ಕೆ ಅವಕಾಶ ಕಲ್ಪಿಸಿದ್ದಾರೆ. 2013ರಲ್ಲಿ ಒಡಿಶಾದಲ್ಲಿ ಆಯೋಜಿತವಾಗಿದ್ದ ಅಂತಾರಾಷ್ಟ್ರೀಯ ಮರಳು ಕಲಾಕೃತಿ ಸ್ಪರ್ಧೆಯಲ್ಲಿ ವಿಶ್ವದ ಹಲವೆಡೆಗಳಿಂದ ಪಾಲ್ಗೊಂಡಿದ್ದ 27 ಕಲಾವಿದರಲ್ಲಿ ಭಾರತದ ಗೌರಿ ಏಕೈಕ ಮಹಿಳಾ ಕಲಾವಿದೆಯಾಗಿದ್ದರು. ಫೈನ್ ಆರ್ಟ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಗೌರಿ, ಮರಳು ಕಲೆಯತ್ತ ಒಲವು ತೋರಿದ್ದರು. ಈವರೆಗೂ ರಾಜ್ಯವ್ಯಾಪಿ ನೂರಾರು ಕಲಾಕೃತಿಗಳನ್ನು ಮರಳಿನಲ್ಲಿಯೇ ರೂಪಿಸಿದ್ದಾರೆ. ಸೌದಿ ಅರೇಬಿಯಾದಲ್ಲಿ ಈ ವರ್ಷ ನಡೆದ ಕ್ಯಾಮೆಲ್ ಉತ್ಸವಕ್ಕೆ ಅಲ್ಲಿನ ಸರ್ಕಾರದ ಅತಿಥಿಯಾಗಿ ತೆರಳಿದ್ದ ಗೌರಿ ಅಲ್ಲಿಯೂ ಮರಳು ಕಲಾಕೃತಿ ರೂಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀ, ಡಾ.ಅಂಬೇಡ್ಕರ್, ನಾಲ್ವಡಿ ಕೖಷ್ಣರಾಜ ಒಡೆಯರ್, ಈಶ್ವರ, ಸೇರಿದಂತೆ ಹಲವಾರು ವಿಭಿನ್ನ ಮರಳು ಕಲಾಕೃತಿಯನ್ನು ರಚಿಸಿರುವ ಗೌರಿ, ಈ ಬಾರಿ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಆಹ್ವಾನದ ಮೇರೆಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿನ ಗ್ಯಾಲರಿಯಲ್ಲಿ ‘ವನವೈವ’ ಕುರಿತಂತೆ ಮರಳು ಕಲಾಕೃತಿ ರೂಪಿಸಲಿದ್ದಾರೆ ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ. * ಇಂದು ಉದ್ಘಾಟನೆ ಈ ಮರಳು ಕಲಾಕೃತಿಯನ್ನು ಅ.16ರಂದು ಸಂಜೆ 6 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿ ಎನ್.ಎಸ್. ಬೋಸರಾಜು ಮತ್ತು ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಲಿದ್ದಾರೆ. ಮರಳು ಕಲಾಕೃತಿಯನ್ನು ಅ.16ರಿಂದ 25ರ ವರೆಗೆ ಪ್ರತಿ ನಿತ್ಯ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ವೀಕ್ಷಿಸಬಹುದಾಗಿದೆ. ಫೋಟೋ ಗ್ಯಾಲರಿ ಆಕಷ೯ಣೆ ಈ ವರ್ಷ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ನಗರದ ಗಾಂಧಿ ಮೈದಾನಕ್ಕೆ ಬರುವವರಿಗೆ ಮತ್ತೊಂದು ಆಕರ್ಷಣೆಯೂ ಸಜ್ಜಾಗಿದೆ. ಮಡಿಕೇರಿ ದಸರಾ-2023 ಎಂಬ ಫೋಟೋ ಪಾಯಿಂಟನ್ನು ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ರೂಪಿಸಲಾಗಿದೆ. ಆ ಹಿನ್ನೆಲೆಯಲ್ಲಿ ಕೊಡಗಿನ ನಿಸರ್ಗ ವೈಭವದ ಆಕರ್ಷಕ ಚಿತ್ರ ಕಂಗೊಳಿಸಲಿದೆ. ಈ ಪೋಟೋ ಗ್ಯಾಲರಿಯಲ್ಲಿ ನಿಂತು ಕಲಾಪ್ರೇಮಿಗಳು ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುವ ಮೂಲಕ ಮಡಿಕೇರಿ ದಸರಾದ ನೆನಪನ್ನು ಸ್ಮರಣೀಯವಾಗಿಸಲು ಅವಕಾಶ ನೀಡಲಾಗಿದೆ ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ. ತಾವು ತೆಗೆದ ಫೋಟೋಗಳನ್ನು #MadikeriDasara ಇಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮೂಲಕ ಪೋಸ್ಟ್ ಮಾಡಬಹುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.