ಯಲ್ಲಮ್ಮನಗುಡ್ಡದ ದೈವಿವನದಲ್ಲಿನ ಶ್ರೀಗಂಧ ಮರಕಳ್ಳತನ

| Published : Nov 13 2024, 12:48 AM IST

ಸಾರಾಂಶ

ಶ್ರೀಗಂಧ ಕಳ್ಳತನವನ್ನು ಸೂಕ್ತ ತನಿಖೆ ನಡೆಸಲು ಅರಣ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಶಾಸಕ ವಿಶ್ವಾಸ ವೈದ್ಯ ನಿರ್ದೇಶನ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಸವದತ್ತಿ

ಯಲ್ಲಮ್ಮನಗುಡ್ಡದ ದೈವಿ ವನದಲ್ಲಿನ ೧೦೦ ಗಂಧದ ಮರಗಳ ಕಳ್ಳತನವಾಗಿರುವುದು ಕಂಡುಬಂದಿದ್ದು, ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರು ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಪಟ್ಟಣದ ತಾಪಂ ಸಭಾಭವನದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯನ್ನದ್ದೇಶಿಸಿ ಮಾತನಾಡಿದ ಅವರು, ಉಳ್ಳಿಗೇರಿ ಭಾಗದಲ್ಲಿ ಕಳ್ಳರ ಹಾವಳಿಯ ಮಾಹಿತಿ ಬಂದಿದ್ದು, ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಪೊಲೀಸ್ ಅಧಿಕಾರಿಗಳು ಇದರತ್ತ ಗಮನ ಹರಿಸಬೇಕೆಂದರು. ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಹತ್ತಿ ಮತ್ತು ಗೋವಿನ ಜೋಳ ಹಾಗೂ ಸೋಯಾಬೀನ್ ಬೆಳೆ ಹಾನಿಯಾಗಿದ್ದು, ರೈತರಿಗೆ ಸೂಕ್ತ ಪರಿಹಾರ ದನ್ಕಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದರು.

ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಕೆಲವೆಡೆ ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿಗೆ ಅರಣ್ಯಾಧಿಕಾರಿಗಳು ತಕರಾರು ಮಾಡುತ್ತಿರುವುದು ಕಂಡುಬಂದಿದ್ದು, ಲೋಕೋಪಯೋಗಿ ಇಲಾಖೆಯ ರಸ್ತೆಯ ಬದಿಯಲ್ಲಿ ನಡೆಯುತ್ತಿರುವ ಕಾಮಗಾರಿಗೆ ಅಡ್ಡಿ ಮಾಡದೆ ಕಾಮಗಾರಿಮುಂದುವರಿಯಲು ಅವಕಾಶ ನೀಡಬೇಕೆಂದರು.ಅರಣ್ಯ ಇಲಾಖೆ ವ್ಯಾಪ್ತಿಯ ಪ್ರದೇಶದಲ್ಲೇನಾದರೂ ಕಾಮಗಾರಿ ನಡೆದದ್ದರೆ ಅದಕ್ಕೆ ತಡೆ ನೀಡಿ ಸೂಕ್ತ ಪರವಾನಗಿ ಪಡೆದು ಕಾಮಗಾರಿ ನಡೆಸಲು ಸೂಚನೆ ನೀಡಿದರು. ಅರಣ್ಯಾಧಿಕಾರಿಗಳು ಕೆರೆಗಳ ಅಭಿವೃದ್ಧಿಗೆ ಅಧಿಕಾರಿಗಳು ಪ್ರೇರಣೆ ನೀಡಬೇಕಿದ್ದು, ಸಿಡಿಪಿಒ ಅವರು ಬಾಲ್ಯವಿವಾಹ ತಡೆಗೆ ಜನರಲ್ಲಿ ಅವಶ್ಯಕ ಮಾಹಿತಿ ನೀಡುವುದರ ಜೊತೆಗೆ ಹೆಣ್ಣುಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಪ್ರೋತ್ಸಾಹ ನೀಡಬೇಕೆಂದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧಗಳ ಕೊರತೆಯಾಗದಂತೆ ಟಿಎಚ್‌ಒ ಗಮನ ಹರಿಸಬೇಕೆಂದ ಅವರು, ಕಾರಿಮನಿ ಮಲ್ಲಯ್ಯ ದೇವಸ್ಥಾನಕ್ಕೆ ವಿದ್ಯುತ್‌ ಸಂಪರ್ಕದ ತೊಂದರೆಯಿರುವುದರಿಂದ ಹೆಸ್ಕಾಂ ಅಧಿಕಾರಿಗಳು ಈ ದೇವಸ್ಥಾನಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸುವುದರ ಜೊತೆಗೆ ವಿದ್ಯುತ್‌ ದೀಪ ಅಳವಡಿಸಬೇಕೆಂದರು.

ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ ಮಾತನಾಡಿ, ತಾಲೂಕಿನಾದ್ಯಂತ ಹಿಂಗಾರು ಹಂಗಾಮಿನಲ್ಲಿ ಶೇ.೧೬೪ರಷ್ಟು ಮಳೆ ಆಗಿದ್ದರಿಂದ ಹಿಂಗಾರು ಬಿತ್ತನೆ ಕುಂಠಿತವಾಗಿದ್ದು, ಶೇ.೮೦ರಷ್ಟು ಮಾತ್ರ ಬಿತ್ತನೆಯಾಗಬಹುದೆಂದು ಅಂದಾಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಅತಿವೃಷ್ಟಿ ಮಳೆಗೆ ತಾಲೂಕಿನಲ್ಲಿ ೧೧೭೦೦ ಹೆಕ್ಟೇರ್‌ ನಷ್ಟು ಅಂದರೆ ಶೇ.೬೦ರಷ್ಟು ಬೆಳೆ ಹಾನಿಯಾದ ವರದಿಯಾಗಿದೆ ಎಂದು ತಿಳಿಸಿದರು.

ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಅನೀಲ ಮರಲಿಂಗಣ್ಣವರ, ಹೆಸ್ಕಾಂನ ಎಇಇ ವಿಶಾಪುರಕರ, ತಹಸೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ, ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ತಾಪಂ ಇಒ ಆನಂದ ಬಡಕುಂದ್ರಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.