ಸಾರಾಂಶ
ರಾಜ್ಯದಲ್ಲಿ ಬಾಣಂತಿಯರ ಸಾವಿನ ಪ್ರಕರಣಗಳ ಸಂಖ್ಯೆ ದಿನೇದಿನೆ ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸಲಾಗದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡಲೇ ರಾಜಿನಾಮೆ ನೀಡಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ್ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ರಾಜ್ಯದಲ್ಲಿ ಬಾಣಂತಿಯರ ಸಾವಿನ ಪ್ರಕರಣಗಳ ಸಂಖ್ಯೆ ದಿನೇದಿನೆ ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸಲಾಗದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡಲೇ ರಾಜಿನಾಮೆ ನೀಡಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ್ ಒತ್ತಾಯಿಸಿದರು.ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆತ್ಮಹತ್ಯೆ ಹಾಗೂ ಹತ್ಯೆ ಭಾಗ್ಯವನ್ನು ಕರ್ನಾಟಕದ ಜನತೆಗೆ ನೀಡಿದೆ. ಕಳೆದ 19 ತಿಂಗಳಲ್ಲಿ 6 ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, 700ಕ್ಕೂ ಹೆಚ್ಚು ಗರ್ಭಿಣಿಯರು, 1100ಕ್ಕೂ ಅಧಿಕ ನವಜಾತ ಶಿಶುಗಳ ಸಾವಿಗೆ ಕಾಂಗ್ರೆಸ್ ಸರ್ಕಾರ ಕಾರಣವಾಗಿದೆ ಎಂದು ಆರೋಪಿಸಿದರು.ಗರ್ಭಿಣಿಯರ ಆರೈಕೆಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜನನಿ ಸುರಕ್ಷಾ ಯೋಜನೆ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ ಮೊದಲಾದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಬಾಣಂತಿಯರ ಸಾವಿಗೆ ಇದೂ ಒಂದು ಕಾರಣ ಎಂದರು.
ರಾಜ್ಯದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾಂಗ್ರೆಸ್ ಸರ್ಕಾರದ ಹೊಣೆಗೇಡಿತನದಿಂದಾಗಿ ಸಂಪುರ್ಣ ಹದಗೆಟ್ಟಿದೆ. ಸಿಬ್ಬಂದಿ ಕೊರತೆಯಿಂದ ಸೊರಗುತ್ತಿದೆ ಎಂದು ಆರೋಪಿಸಿದರು.ಬಿಜೆಪಿ ರಾಜ್ಯ ಮಹಿಳಾಮೋರ್ಚಾ ಪ್ರ.ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ ಮಾತನಾಡಿ, ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಮನೆಯಿಂದ ಹೊರಗೆ ಕೆಲಸ, ಕಾಲೇಜಿಗೆ ಹೋದವರು ವಾಪಸ್ ಸುರಕ್ಷಿತವಾಗಿ ಬರಲಿ ಎಂದು ಪ್ರಾರ್ಥನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನವಜಾತ ಶಿಶು ಹಾಗೂ ಬಾಣಂತಿಯರು ಸಾವನ್ನಪ್ಪಿದರೂ ರಾಜ್ಯ ಸರ್ಕಾರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಇದರ ವಿರುದ್ಧ ರಾಜ್ಯದ 31 ಜಿಲ್ಲೆಗಳಲ್ಲಿ ಮಹಿಳಾ ಮೋರ್ಚಾದ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಧಿಕಾರಿಯವರಿಗೆ ಮನವಿ ನೀಡುತ್ತೇವೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರ.ಕಾರ್ಯದರ್ಶಿ ರೇಷ್ಮಾ ಉದಯ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಕುಂದರ್ ಉಪಸ್ಥಿತರಿದ್ದರು.