ಸಂಡೂರು ಉಪ ಚುನಾವಣೆ: ಶೇ.75.31 ಮತದಾನ

| Published : Nov 14 2024, 12:46 AM IST

ಸಾರಾಂಶ

ಆರಂಭದಲ್ಲಿ ನಿಧಾನಗತಿಯಿಂದ ಸಾಗಿದ ಮತದಾನ ಪ್ರಕ್ರಿಯೆ ನಂತರದಲ್ಲಿ ಚುರುಕು ಪಡೆದುಕೊಂಡಿತು.

ಸಂಡೂರು: ಈ.ತುಕಾರಾಂ ಅವರ ರಾಜೀನಾಮೆಯಿಂದ ತೆರವಾದ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಬುಧವಾರ ಶಾಂತಿಯುತವಾಗಿ ನಡೆಯಿತು.

ಆರಂಭದಲ್ಲಿ ನಿಧಾನಗತಿಯಿಂದ ಸಾಗಿದ ಮತದಾನ ಪ್ರಕ್ರಿಯೆ ನಂತರದಲ್ಲಿ ಚುರುಕು ಪಡೆದುಕೊಂಡಿತು. ಸಂಜೆ ೫ ಗಂಟೆವರೆಗೆ ಕ್ಷೇತ್ರದಲ್ಲಿ ಶೇ.75.31ರಷ್ಟು ಮತದಾನವಾಗಿತ್ತು. ಕೆಲವು ಕಡೆಗಳಲ್ಲಿ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ, ಕೆಲ ನಿಮಿಷಗಳ ಕಾಲ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಕೂಡಲೇ ಅಧಿಕಾರಿಗಳು ಮತಯಂತ್ರಗಳನ್ನು ಸರಿಪಡಿಸಿ, ಮತದಾನ ಪ್ರಕ್ರಿಯೆ ಮುಂದುವರಿಯಲು ಅವಕಾಶ ಕಲ್ಪಿಸಿದರು. ಬೆಳಗ್ಗೆ ೧೧ ಗಂಟೆ ಬಳಿಕ ಮತದಾನದ ಪ್ರಕ್ರಿಯೆ ಚುರುಕಾಯಿತು. ಮಹಿಳೆಯರು, ವೃದ್ಧರು ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ಹಕ್ಕು ಚಲಾಯಿಸುತ್ತಿರುವುದು ಕಂಡು ಬಂತು. ಸಂಡೂರು ಪಟ್ಟಣದ ಮತಗಟ್ಟೆ ಸಂಖ್ಯೆ ೫೧ರಲ್ಲಿ ೯೧ ವರ್ಷದ ವೃದ್ಧೆ ಹುಲಿಗೆಮ್ಮ ಉತ್ಸಾಹದಿಂದ ಮತಕೇಂದ್ರಕ್ಕೆ ಆಗಮಿಸಿ ಹಕ್ಕು ಚಲಾಯಿಸಿದರು.

ಕುಡಿತಿನಿಯ ಮತಕೇಂದ್ರದಲ್ಲಿ ೯೧ ವರ್ಷದ ಮಾಳಮ್ಮ, ರಾಜಾಬೀ ಹಾಗೂ ಹನುಮಕ್ಕ ಅವರು ಸಹಾಯಕರೊಂದಿಗೆ ಆಗಮಿಸಿ ಹಕ್ಕು ಚಲಾಯಿಸಿದರು.

ಸಂಡೂರು ಪಟ್ಟಣ, ಕುಡಿತಿನಿ, ತೋರಣಗಲ್, ವಡ್ಡು, ಬಸಾಪುರ ಗ್ರಾಮಗಳಲ್ಲಿ ಮತದಾರರು ಹಕ್ಕು ಚಲಾಯಿಸಲು ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ಮೊದಲ ಬಾರಿಗೆ ಹಕ್ಕು ಚಲಾಯಿಸುವ ಯುವಕರಲ್ಲಿ ಹಕ್ಕು ಚಲಾವಣೆಯ ಸಂಭ್ರಮವಿತ್ತು. ಸಂಡೂರು ಪಟ್ಟಣದ ಕೃಷ್ಣನಗರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ೯೮ ವರ್ಷದ ವೃದ್ಧ ವೀಲ್ ಚೇರ್‌ನೊಂದಿಗೆ ಆಗಮಿಸಿ ಮತದಾನ ಮಾಡಿದರು. ಬೂತ್ ಸಂಖ್ಯೆ ೬೭ರಲ್ಲಿ ಯುವತಿ ಅವನಿತ್ ಅವರು ಹಕ್ಕು ಚಲಾಯಿಸಿದ ಉತ್ಸುಕದಲ್ಲಿದ್ದರು. ಬೂತ್ ಸಂಖ್ಯೆ ೬೭ರಲ್ಲಿ ಖಾಸಗಿ ಉದ್ಯೋಗಿ ವಿನಾಯಕ ಮತ್ತು ಕುಟುಂಬ ಸದಸ್ಯರೆಲ್ಲೂ ಒಟ್ಟಿಗೆ ಆಗಮಿಸಿ ಹಕ್ಕು ಚಲಾಯಿಸಿದರು.

ಗಮನ ಸೆಳೆದ ಮತಗಟ್ಟೆ:

ಸಂಡೂರು ಉಪ ಚುನಾವಣೆಯಲ್ಲಿ ಮತದಾರರನ್ನು ಆಕರ್ಷಿಸಲು ಜಿಲ್ಲಾ ಸ್ವೀಪ್ ಸಮಿತಿಯಿಂದ ತೋರಣಗಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಖಿ ಮತಗಟ್ಟೆಯನ್ನು ಸ್ಥಾಪಿಸಲಾಗಿತ್ತು. ಮತದಾರರು ಸಖಿ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದರು. ಬಳಿಕ ಮತಕೇಂದ್ರ ಬಳಿಯಿದ್ದ ಪಿಂಕ್ ಸೆಲ್ಫಿ ಬೂತ್‌ನಲ್ಲಿ ನಿಂತುಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಕಾಂಗ್ರೆಸ್ ಅಭ್ಯರ್ಥಿ ಮತದಾನ:

ಕಾಂಗ್ರೆಸ್ ಅಭ್ಯರ್ಥಿ ಈ. ಅನ್ನಪೂರ್ಣಾ ತುಕಾರಾಂ ಅವರು ಬೆಳಗ್ಗೆ ಪತಿ ಹಾಗೂ ಸಂಸದ ಈ. ತುಕಾರಾಂ ಅವರೊಂದಿಗೆ ಭೀಮತೀರ್ಥಕ್ಕೆ ತೆರಳಿ ಪೂಜೆ ಸಲ್ಲಿಸಿ, ಪಟ್ಟಣದಲ್ಲಿನ ಜಿಪಂ ಎಂಜಿನಿಯರಿಂಗ್ ಉಪ ವಿಭಾಗದ ಕಚೇರಿಯಲ್ಲಿನ ಮತಗಟ್ಟೆ ಸಂಖ್ಯೆ ೬೭ರಲ್ಲಿ ಮತ ಚಲಾಯಿಸಿದರು. ಈ. ಅನ್ನಪೂರ್ಣಾ ತುಕಾರಾಂ ಅವರ ಪುತ್ರಿ ಚೈತನ್ಯ ಹಾಗೂ ಪುತ್ರ ರಘುನಂದನ್ ಅವರು ಮತಗಟ್ಟೆ ಸಂಖೆ ೬೭ರಲ್ಲಿ ಮತ ಚಲಾಯಿಸಿದರು.

ಹಕ್ಕು ಚಲಾಯಿಸದ ಹನುಮಂತು:

ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರ ಮತ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಇರದ ಕಾರಣ, ಅವರಿಗೆ ಮತ ಹಾಕುವ ಅವಕಾಶವಿರಲಿಲ್ಲ. ಅವರು ಪಕ್ಷದ ಮುಖಂಡರೊಂದಿಗೆ ವಿವಿದ ಮತಗಟ್ಟೆಗಳಿಗೆ ತೆರಳಿ, ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಿದರು. ಅವರ ಪತ್ನಿ ಬಂಗಾರಿ ರೂಪಶ್ರೀ ಅವರೂ ವಿವಿಧ ಮತಗಟ್ಟೆ ಬಳಿ ತೆರಳಿ, ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಿದರು.

ಮತಗಟ್ಟೆಗಳಲ್ಲಿ ಅಂಗವಿಕಲರಿಗೆ ಅನುಕೂಲವಾಗಲೆಂದು ತ್ರಿಚಕ್ರವಾಹನ ವ್ಯವಸ್ಥೆ ಕಲ್ಪಿಸಲಾಗಿತ್ತು. ಮತಗಟ್ಟೆಗಳಲ್ಲಿ ಕುಡಿಯುವ ನೀರು, ನೆರಳಿಗಾಗಿ ಶಾಮಿಯಾನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಹಲವು ಯುವ ಮತದಾರರು, ವೃದ್ಧರೂ, ವಿಶೇಷ ಚೇತನರು ಮತಗಟ್ಟೆಗಳಿಗೆ ಆಗಮಿಸಿ, ಮತ ಚಲಾಯಿಸಿ ಮಾದರಿಯಾದರು.

ಮತಗಟ್ಟೆಗಳ ಬಳಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಸೂಕ್ತ ಪೊಲೀಸ್ ಬಂದೋಬಸ್ತ್ ಅನ್ನು ಏರ್ಪಡಿಸಲಾಗಿತ್ತು. ಹಲವೆಡೆ ಮೊದಲ ಬಾರಿಗೆ ಮತದಾನದ ಹಕ್ಕನ್ನು ಪಡೆದಿದ್ದ ಯುವ ಮತದಾರರು ಖುಷಿಯಿಂದ ತಮ್ಮ ಮತವನ್ನು ಚಲಾಯಿಸಿ, ಸಂಭ್ರಮಿಸಿದರು.

ಕೊನೆ ಕ್ಷಣದ ಓಲೈಕೆಯಲ್ಲಿ:

ಮತಗಟ್ಟೆಗಳ ನಿರ್ಬಂಧಿತ ಪ್ರದೇಶದ ಹೊರಗಡೆ ಟೆಂಟ್‌ಗಳನ್ನು ಹಾಕಿಕೊಂಡು ಕುಳಿತಿದ್ದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತಗಟ್ಟೆಗಳಿಗೆ ಬರುವ ಮತದಾರರಿಗೆ ಅವರ ಮತಗಟ್ಟೆಗಳ ಕುರಿತು ಮಾಹಿತಿ ನೀಡುತ್ತಿರುವುದು, ಮತದಾರರನ್ನು ಓಲೈಸುವ ದೃಶ್ಯಗಳು ಕಂಡು ಬಂದವು.

ತೀರಾ ಹಣಾಹಣಿ ಕಂಡು ಬಂದಿರುವ ಸಂಡೂರು ಉಪ ಚುನಾವಣೆಗೆ ಪ್ರಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಸಂತೋಷ್ ಲಾಡ್ ಸೇರಿದಂತೆ ಸಚಿವ ಸಂಪುಟವೇ ಪ್ರಚಾರದಲ್ಲಿ ತೊಡಗಿತ್ತು. ಪ್ರಚಾರ ವಿಚಾರದಲ್ಲಿ ಬಿಜೆಪಿ ಹಿಂದೆ ಬೀಳಲಿಲ್ಲ.

ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡು ಗಮನ ಸೆಳೆದಿದ್ದರು. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಸಂಡೂರಿನಲ್ಲಿಯೇ ವಾಸ್ತವ್ಯ ಮಾಡಿ, ಚುನಾವಣಾ ತಂತ್ರಗಾರಿಕೆ ನಡೆಸಿದರು. ಎರಡು ಪಕ್ಷಗಳು ಗೆಲ್ಲುವ ಉತ್ಸುಕದಲ್ಲಿದ್ದು, ನ. ೨೩ರಂದು ಯಾರ ಕೊರಳಿಗೆ ವಿಜಯದ ಮಾಲೆ ಎಂಬುದು ಗೊತ್ತಾಗಲಿದೆ.