ಸಂಡೂರು- ರಿಲ್ಯಾಕ್ಸ್ ಮೂಡ್‌ನಲ್ಲಿ ಅಭ್ಯರ್ಥಿಗಳು

| Published : Nov 15 2024, 12:35 AM IST

ಸಾರಾಂಶ

ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣಾ ತುಕಾರಾಂ ಗುರುವಾರ ತಮ್ಮ ಮನೆಯಲ್ಲಿಯೇ ವಿಶ್ರಾಂತಿ ಪಡೆದರು

ಸಂಡೂರು: ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸಿ, ಕ್ಷೇತ್ರದಾದ್ಯಂತ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಸಂಚರಿಸಿ, ಪ್ರಚಾರ ಕೈಗೊಂಡು ಮತಯಾಚಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಈ. ಅನ್ನಪೂರ್ಣಾ ತುಕಾರಾಂ, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಮತದಾನದ ಮರುದಿನವಾದ ಗುರುವಾರ ರಿಲ್ಯಾಕ್ಸ್ ಮೂಡ್‌ನಲ್ಲಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣಾ ತುಕಾರಾಂ ಗುರುವಾರ ತಮ್ಮ ಮನೆಯಲ್ಲಿಯೇ ವಿಶ್ರಾಂತಿ ಪಡೆದರು. ಬೆಳಗ್ಗೆ ದೇವತಾ ಪೂಜೆ ನಂತರ ಪತ್ರಿಕೆಗಳನ್ನು ಓದುತ್ತಾ, ಪಕ್ಷದ ಕಾರ್ಯಕರ್ತರೊಂದಿಗೆ ಮತದಾನ ಪ್ರಕ್ರಿಯೆ ಕುರಿತು ಚರ್ಚಿಸಿದರು. ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈ.ಅನ್ನಪೂರ್ಣಾ ತುಕಾರಾಂ, ಕ್ಷೇತ್ರದಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ. ಈ ಬಾರಿ ಹೆಚ್ಚಿನ ಮತದಾರರು ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡು ತಮ್ಮ ಮತ ಚಲಾಯಿಸಿದ್ದಾರೆ. ಸಂಡೂರು ಕ್ಷೇತ್ರದ ಮತದಾರರು ಪ್ರಬುದ್ಧರಿದ್ದಾರೆ. ಅವರು ಶಾಂತಿ ಮತ್ತು ನೆಮ್ಮದಿಯ ಜೀವನವನ್ನು ಬಯಸುವವರು. ಕ್ಷೇತ್ರದಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸುವ ವಿಶ್ವಾಸವಿದೆ. ದ್ವೇಷದ ರಾಜಕಾರಣವನ್ನು ಅವರು ತಿರಸ್ಕರಿಸುತ್ತಾರೆ. ಕ್ಷೇತ್ರದಲ್ಲಿ ಜನರಿಂದ ಉತ್ತಮ ಸ್ಪಂದನೆ ಹಾಗೂ ಪ್ರತಿಕ್ರಿಯೆ ದೊರೆತಿದೆ. ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದರು.

15 ಸಾವಿರ ಲೀಡ್‌ ಗೆಲುವು:

ಕಳೆದ ೨೦ ದಿನಗಳಿಂದ ಕ್ಷೇತ್ರ ಸಂಚಾರ, ಪ್ರಚಾರ, ಮತದಾರರ ಓಲೈಕೆಯಲ್ಲಿ ತೊಡಗಿದ್ದ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಗುರುವಾರ ವಿಶ್ರಾಂತಿ ಪಡೆದರು. ಗುರುವಾರ ಬೆಳಗ್ಗೆ ಎದ್ದು ಸ್ನಾನ ಪೂಜಾದಿ ನಂತರ, ಅವರು ಪತ್ರಿಕೆಯನ್ನು ಓದುತ್ತಾ, ಚುನಾವಣಾ ವಿಷಯಗಳತ್ತ ಕಣ್ಣು ಹಾಯಿಸಿದರು. ಆನಂತರ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಮತದಾನ ಪ್ರಕ್ರಿಯೆಯ ಕುರಿತು ಚರ್ಚಿಸಿದರು.

ಸಂಡೂರು ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿನ ಗ್ರಾಮ ದೇವತೆಯ ಜಾತ್ರೆಯ ಪ್ರಯುಕ್ತ ಬಂಗಾರು ಹನುಮಂತು ಶಾಸಕ ಗಾಲಿ ಜನಾರ್ದನ ರೆಡ್ಡಿ ಹಾಗೂ ಇನ್ನಿತರ ಮುಖಂಡರೊಂದಿಗೆ ಗ್ರಾಮದ ದೇವಸ್ಥಾನಕ್ಕೆ ಭೇಟಿ ನೀಡಿ, ಗ್ರಾಮದೇವತೆಯ ದರ್ಶನ ಪಡೆದರು. ಗ್ರಾಮದಲ್ಲಿನ ಮುಖಂಡರನ್ನು ಭೇಟಿಯಾದರು. ಆನಂತರ ಮನೆಗೆ ಮರಳಿ, ಕುಟುಂಬದ ಸದಸ್ಯರೊಂದಿಗೆ ಸಮಯವನ್ನು ಕಳೆದರು.

ಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಬಂಗಾರು ಹನುಮಂತು, ಕ್ಷೇತ್ರದಲ್ಲಿ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ಜನತೆ ಈ ಬಾರಿ ಬದಲಾವಣೆ ಬಯಸಿದ್ದಾರೆ. ೧೦ರಿಂದ ೧೫ ಸಾವಿರ ಲೀಡ್‌ನಿಂದ ನಾನು ಗೆಲುವು ಸಾಧಿಸುವ ವಿಶ್ವಾಸವಿದೆ. ಒಟ್ಟು ೨೫೩ ಬೂತ್‌ಗಳಲ್ಲಿ ೨೨೦ ಬೂತ್‌ಗಳಲ್ಲಿ ನನಗೆ ಲೀಡ್ ಸಿಗುವ ವಿಶ್ವಾಸವಿದೆ ಎಂದರು.