ಸಾರಾಂಶ
ವಡಗೇರಾ ತಾಲೂಕಿನ ಕೃಷ್ಣವೇಣಿ ಭೀಮಾ ಸಂಗಮದ ಸಂಗಮೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಜಾತ್ರಾ ಸಮಿತಿ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸಂಗಮ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಯಾದಗಿರಿ
ಪ್ರತಿಯೊಬ್ಬರು ದಾನ, ಧರ್ಮ, ಪುಣ್ಯ, ಪರೋಪಕಾರ, ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಂತೆ ಸಂಗಮದ ಸಂಗಮೇಶ್ವರ ಮಠದ ಕರುಣೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಜಿಲ್ಲೆಯ ವಡಗೇರಾ ತಾಲೂಕಿನ ಕೃಷ್ಣವೇಣಿ ಭೀಮಾ ಸಂಗಮದ ಸಂಗಮೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಜಾತ್ರಾ ಸಮಿತಿ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸಂಗಮ ಸಿರಿ ಪ್ರಶಸ್ತಿ ಪ್ರದಾನ ಮಾಡಿ ಶ್ರೀಗಳು ಮಾತನಾಡಿದರು.
ಮುಂದಿನ ದಿನಗಳಲ್ಲಿ ತಾವುಗಳು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಎಂದು ಹೇಳಿದರು.ಸಾಹಿತ್ಯ ಕ್ಷೇತ್ರದಲ್ಲಿ ಸಂಗಮ ಸಿರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ, ಶ್ರೀಮಠವು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿರುವುದು ನಮ್ಮೆಲ್ಲರಿಗೂ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದಂತಾಗಿದೆ. ಮುಂದಿನ ದಿನಗಳಲ್ಲಿ ನಾವು ಇನ್ನಷ್ಟು ಸಾಹಿತ್ಯ ಕ್ಷೇತ್ರ, ವೈದ್ಯಕೀಯ, ಕೃಷಿ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುವುದಾಗಿ ಹೇಳಿದರು.
ಸಾಹಿತ್ಯ ಕ್ಷೇತ್ರದಲ್ಲಿ ಡಾ.ಸುಭಾಶ್ಚಂದ್ರ ಕೌಲಗಿ, ವೈದ್ಯಕೀಯ ಕ್ಷೇತ್ರ ಡಾ.ಮಲ್ಲಪ್ಪ ಕಣಜಗಿಕರ, ಸಮಾಜ ಸೇವೆ ಬೂದೆಮ್ಮ ಹಣಮಂತ್ರಾಯ ಜಡಿ, ಕೃಷಿ ಕ್ಷೇತ್ರ ಅಮಾತೆಪ್ಪ ಬೋನೇರ್, ಹಾಲಗೇರಾ, ಕ್ರೀಡಾ ಕ್ಷೇತ್ರ ಪಲ್ಲವಿ ಪಾಟೀಲ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕೆಂಚ ವೃಷಭೇಂದ್ರ ಶಿವಾಚಾರ್ಯ ಸ್ವಾಮೀಜಿ ಆಲೂರು ಸಂಸ್ಥಾನ ಮಠ ವಹಿಸಿದ್ದರು.ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಚಂದನಕೇರಾ ಅಧ್ಯಕ್ಷತೆ ವಹಿಸಿದ್ದರು. ವೀರಭದ್ರಯ್ಯ ಸ್ವಾಮಿ ದೇವಸೂಗೂರ ಸೇರಿ ದೇವಸ್ಥಾನ ಸಮಿತಿಯ ಸದಸ್ಯರು ಇದ್ದರು. ಮಲ್ಲೇಶ ಕುರುಕುಂದಿ ನಿರೂಪಿಸಿ, ವಂದಿಸಿದರು.