ಸಾರಾಂಶ
ಶಾಸಕರ ವಿರುದ್ಧ ಏಕ ವಚನದಲ್ಲಿ ಮಾತನಾಡಿದ್ದು ಸರಿಯಲ್ಲ
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ತಾಲೂಕಿನ ಕುಲವಳ್ಳಿ ಸೇರಿದಂತೆ 9 ಹಳ್ಳಿಗಳ ಜನರ ನೋವಿಗೆ ಶಾಸಕರು ಸ್ಪಂದಿಸಿದ್ದಾರೆ, ಯಾರದ್ದೋ ಪ್ರಚೋದನೆಯಿಂದ ಹಾಗೂ ತಪ್ಪು ತಿಳಿವಳಿಕೆಯಿಂದ ಮಹಿಳೆಯೊಬ್ಬರು ಶಾಸಕರ ವಿರುದ್ಧ ಏಕ ವಚನದಲ್ಲಿ ಮಾತನಾಡಿದ್ದು ಸರಿಯಲ್ಲ ಎಂದು ಕಿತ್ತೂರು ಬ್ಲಾಕ್ ಅಧ್ಯಕ್ಷ ಸಂಗನಗೌಡ ಪಾಟೀಲ ಹೇಳಿದರು.ಭಾನುವಾರ ಪಟ್ಟಣದ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಲವಳ್ಳಿ ಭಾಗದ ರೈತರ ಹೋರಾಟ ಮೊದಲಿನಿಂದಲೂ ಇದೆ, ಆದರೆ ಈ ಭಾರಿ ನಮ್ಮ ಶಾಸಕರು ಆಯ್ಕೆಯಾಗಿ ಕೇವಲ 6 ತಿಂಗಳು ಕಳೆದಿವೆ. ಇವರ ಕೆಲಸ ಕಾರ್ಯಗಳಿಗೆ ಹಾಗೂ ಹೆಸರಿಗೆ ಕಪ್ಪು ಮಸಿ ಬಳಿಯಲು ಕಾಣದ ಕೈಗಳು ಷಡ್ಯಂತ್ರ ನಡೆಸಿದ್ದು, ನಮ್ಮ ಗಮನಕ್ಕೂ ಬಂದಿದೆ. ಈ ಕುರಿತು ಹಾಗೂ ಏಕ ವಚನದಲ್ಲಿ ಮಾತನಾಡಿದ ಮಹಿಳೆಯ ಕುರಿತು ಸೂಕ್ತ ಕ್ರಮಕ್ಕಾಗಿ ಇಲ್ಲಿಯ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಬಾಬಾಸಾಹೇಬ ಪಾಟೀಲ ಅಭಿಮಾನಿ ಬಳಗದ ವತಿಯಿಂದ ಹಾಗೂ ಕಿತ್ತೂರು ಮತ್ತು ನೇಸರಗಿ ಬ್ಲಾಕ್ ವತಿಯಿಂದ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ನೇಸರಗಿ ಬ್ಲಾಕ್ ಅಧ್ಯಕ್ಷ ನಿಂಗಪ್ಪ ಅರಕೇರಿ ಮಾತನಾಡಿ, ಕುಲವಳ್ಳಿಯ ಭಾಗದ ಜನರ ಮೇಲೆ ನಮ್ಮ ಶಾಸಕರು ಕಾಳಜಿ ಹೊಂದಿದ್ದಾರೆ, ಈ ಹಿಂದೆಯೂ ಆಡಳಿತ ಸೌಧದ ಬಳಿ ಅಹೋರಾತ್ರಿ ಧರಣಿ ನಡೆದಾಗ ಜಿಲ್ಲಾ ಉಸ್ತುವಾರಿ ಸಚಿವರ ಮನವೊಲಿಸಿ ಸ್ಥಳಕ್ಕೆ ಭೇಟಿ ನೀಡಿಸುವ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಲು ಯಶಸ್ಸು ಕಂಡಿದ್ದಾರೆ. ಅದರಂತೆ ಜಿಲ್ಲಾ ಮಂತ್ರಿಗಳು ಈ ವಿಷಯವನ್ನು ಸರ್ಕಾರದ ಗಮನಕ್ಕೂ ತರುವ ಮೂಲಕ ಸರ್ವೆ ಕಾರ್ಯ ಕೂಡ ನಡೆದಿದೆ, ಆದರೆ ಯಾರೋ ಕೆಲವರು ರೈತರಿಗೆ ಜಮೀನು ಸಿಗದಂತೆ ಹುನ್ನಾರ ಹೂಡಿ ಅಮಾಯಕ ರೈತರ ಜೀವನದ ಜೊತೆ ಆಟವಾಡುತ್ತಿದ್ದಾರೆ ಎಂದ ಅವರು, ರೈತರಿಗೆ ಇದಾವುದರ ಪರಿವೇ ಇಲ್ಲದೆ ಸುಖಾ ಸುಮ್ಮನೆ ಧರಣಿ ಕೈಗೊಂಡು ಕಣ್ಣೀರು ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ಈ ಸಮಸ್ಯೆಯನ್ನು ರಾಜೀ ಮೂಲಕ ಬಗೆ ಹರಿಸಬೇಕೇ ಅಥವಾ ಮತ್ತೊಂದು ದಾರಿ ಏನಾದರೂ ಇದೆಯೇ ಎಂಬುದರ ಬಗ್ಗೆ ಸಮಾಲೋಚನೆಗಳು ನಡೆದಿದ್ದು, ಕುಲವಳ್ಳಿ ಭಾಗದ ಯಾವೊಬ್ಬ ರೈತರನ್ನು ಬಿಟ್ಟು ಕೊಡುವ ಪ್ರಮೆಯ ಶಾಸಕರ ಬಳಿ ಇಲ್ಲ ಎಂದು ಸ್ಪಷ್ಟ ಪಡಿಸಿದರು.ಮಾಜಿ ಜಿಪಂ ಸದಸ್ಯ ಫಕೀರಪ್ಪ ಸಕ್ರೇನ್ನವರ, ಚನ್ನೇಗೌಡ ಪಾಟೀಲ, ಸುನಿಲ ಗಿವಾರಿ, ಚಂದ್ರಗೌಡ ಪಾಟೀಲ, ಮುದುಕಪ್ಪ ಮರಡಿ, ಬಸನಗೌಡ ಪಾಟೀಲ, ಕೃಷ್ಣ ಬಾಳೆಕುಂದ್ರಿ, ಬಸವರಾಜ ಸಂಗೊಳ್ಳಿ, ಸಾಗರ ದೇಸಾಯಿ ಹಾಗೂ ಬಾಬಾಸಾಹೇಬ ಅಭಿಮಾನಿ ಬಳಗ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.