ಸಂಗಣ್ಣ ಕರಡಿ ಶಕ್ತಿ ಪ್ರದರ್ಶನ ಇಂದು

| Published : Mar 21 2024, 01:01 AM IST

ಸಾರಾಂಶ

ಟಿಕೆಟ್ ಕೈ ತಪ್ಪಿದ್ದಕ್ಕೆ ನನಗೆ ನೋವಿಲ್ಲ, ಆದರೆ, ಬಿಜೆಪಿ ನಾಯಕರು ನಡೆಸಿಕೊಂಡ ರೀತಿಯಿಂದ ನನಗೆ ನೋವಾಗಿವೆ ಎನ್ನುತ್ತಲೇ ರೊಚ್ಚಿಗೆದ್ದಿರುವ ಸಂಸದ ಸಂಗಣ್ಣ ಕರಡಿ ಕೊನೆಗೂ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

- ಬಿಜೆಪಿ ಕಟ್ಟಾಬೆಂಬಲಿಗರಿಂದ ವಿಫಲಗೊಳಿಸುವ ಯತ್ನ

- ಅಭಿಮಾನಿಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ

- ಎಷ್ಟು ಜನ ಬರುತ್ತಾರೆ, ಯಾರ‍್ಯಾರು ಬರುತ್ತಾರೆ ಎನ್ನುವುದೇ ಕುತೂಹಲ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಟಿಕೆಟ್ ಕೈ ತಪ್ಪಿದ್ದಕ್ಕೆ ನನಗೆ ನೋವಿಲ್ಲ, ಆದರೆ, ಬಿಜೆಪಿ ನಾಯಕರು ನಡೆಸಿಕೊಂಡ ರೀತಿಯಿಂದ ನನಗೆ ನೋವಾಗಿವೆ ಎನ್ನುತ್ತಲೇ ರೊಚ್ಚಿಗೆದ್ದಿರುವ ಸಂಸದ ಸಂಗಣ್ಣ ಕರಡಿ ಕೊನೆಗೂ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಮಾ. 21ರಂದು ಕೊಪ್ಪಳ ನಗರದ ಶಿವಶಾಂತ ಮಂಗಲ ಭವನದಲ್ಲಿ ತನ್ನ ಬೆಂಬಲಿಗರ ಸಭೆ ಕರೆದಿದ್ದಾರೆ. ಬೆಳಗ್ಗೆ 11 ಗಂಟೆಗೆ ನಿಗದಿಯಾಗಿರುವ ಸಭೆಗೆ ಕೊಪ್ಪಳ ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಿಂದಲೂ ಅವರ ಬೆಂಬಲಿಗರು ಆಗಮಿಸಲಿದ್ದಾರೆ.

ಸಂಗಣ್ಣ ಈಗಲೂ ಸಹ ನಾನು ಬಿಜೆಪಿಯಲ್ಲಿಯೇ ಇದ್ದೇನೆ, ಬಿಜೆಪಿ ಬಿಡುವುದಿಲ್ಲ, ನನ್ನ ಬೆಂಬಲಿತ ಬಿಜೆಪಿ ಕಾರ್ಯಕರ್ತರು, ಹಿರಿಯರ ಸಭೆ ಕರೆದಿದ್ದೇನೆ ಎಂದು ಹೇಳಿಕೊಂಡಿದ್ದರೂ ಸಹ ಇದು ಅವರ ಕಟ್ಟಾ ಅನುಯಾಯಿಗಳ ಶಕ್ತಿ ಪ್ರದರ್ಶನವಾಗಿದೆ.

ಅಭಿಮಾನಿಗಳ ಅಭಿಯಾನ:

ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಕರಡಿ ಅಭಿಮಾನಿಗಳು ಅಭಿಯಾನ ಪ್ರಾರಂಭಿಸಿದ್ದಾರೆ. ಸಂಗಣ್ಣರನ್ನು ಬೆಂಬಲಿಸುವವರು ಸಭೆಗೆ ತಪ್ಪದೇ ಆಗಮಿಸಬೇಕು. ಅವರು ಕ್ಷೇತ್ರಕ್ಕೆ ಮಾಡಿರುವ ಕೊಡುಗೆ ಮತ್ತು ಜನಪರ ಕೆಲಸ ಮೆಚ್ಚುವವರು ಸಭೆಗೆ ಬರುವಂತೆ ಮನವಿ ಮಾಡುತ್ತಿದ್ದಾರೆ. ಸಿದ್ಧಪಡಿಸಿದ ಸಂದೇಶವೊಂದನ್ನು ಹಾಕಿದ್ದು, ಬೆಂಬಲಿಸುವವರು ಇದನ್ನು ಫಾರ್ವರ್ಡ್ ಮಾಡುವಂತೆಯೂ ಕೋರಿದ್ದಾರೆ.

ಪಕ್ಷೇತರರಾಗಿ ಅಖಾಡಕ್ಕೆ:

ಕರಡಿಗೆ ಕಾಂಗ್ರೆಸ್‌ನಲ್ಲಿಯೂ ಅವಕಾಶ ಕ್ಷೀಣಿಸಿರುವುದರಿಂದ ಅವರು ಬಿಜೆಪಿ ನಾಯಕರ ವಿರುದ್ಧವೂ ಸಿಡಿದೆದ್ದಿರುವುದರಿಂದ ಎರಡು ಕಡೆಯೂ ಅವಕಾಶ ಇಲ್ಲದಂತೆ ಆಗಿರುವುದರಿಂದ ಪಕ್ಷೇತರರಾಗಿ ಅಖಾಡಕ್ಕೆ ಇಳಿಯುತ್ತಾರೆಯೇ ಎನ್ನುವ ಬಗ್ಗೆಯೂ ಚರ್ಚೆಯಾಗುತ್ತಿದೆ. ಈ ಕಾರಣಕ್ಕಾಗಿಯೇ ಅವರು ಬೆಂಬಲಿಗರ ಸಭೆ ಕರೆದಿದ್ದು, ಸಭೆಗೆ ದೊಡ್ಡ ಮಟ್ಟದ ಬೆಂಬಲ ದೊರೆತಿದ್ದೇ ಆದರೆ ಬಿಜೆಪಿ ನಾಯಕರಿಗೆ ಸಂದೇಶ ರವಾನೆ ಮಾಡಿ, ಪಕ್ಷೇತರರಾಗಿ ಸ್ಪರ್ಧೆ ಮಾಡುವ ಕುರಿತು ಘೋಷಣೆ ಮಾಡುವ ಸಾಧ್ಯತೆ ಇದೆ. ಆದರೆ, ಈ ಬಗ್ಗೆ ಇದುವರೆಗೂ ಸಂಸದರು ಎಲ್ಲಿಯೂ ಹೇಳಿಕೊಂಡಿಲ್ಲ.

ಮನವೊಲಿಸುವ ಯತ್ನ:

ಕರಡಿ ಅವರನ್ನು ಮನವೊಲಿಸುವ ದಿಸೆಯಲ್ಲಿ ಬಿಜೆಪಿ ನಾಯಕರು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ದೂರವಾಣಿ ಮೂಲಕ ಮಾತನಾಡಿ, ಮುಂದಿನ ದಿನಗಳಲ್ಲಿ ಪಕ್ಷ ನಿಮಗೆ ಸೂಕ್ತ ಸ್ಥಾನಮಾನ ನೀಡುತ್ತದೆ. ಹೀಗಾಗಿ, ಪಕ್ಷ ಘೋಷಣೆ ಮಾಡಿರುವ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಹೇಳಿ ಮನವೊಲಿಸುವ ಯತ್ನ ಮಾಡಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಮಾಜಿ ಸಚಿವರಾದ ಭೈರತಿ ಬಸವರಾಜ ಹಾಗೂ ಸುನೀಲಕುಮಾರ ಕರೆ ಮಾಡಿ, ಮನವೊಲಿಸುವ ಯತ್ನ ಮಾಡಿದ್ದಾರೆ ಆದರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ.

ಬಿಜೆಪಿ ನಾಯಕರ ಕರೆ ಸ್ವೀಕಾರ ಮಾಡಿ ಮಾತನಾಡಿದ ಕರಡಿ ಯಾವ ಮನವಿಗೂ ಓಗೊಟ್ಟಿಲ್ಲ. ಬದಲಾಗಿ ಬೆಂಬಲಿಗರ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.

ಬಿಜೆಪಿ ನಾಯಕರ ತಾಕೀತು:

ಸಂಗಣ್ಣ ಕರೆದಿರುವ ಬೆಂಬಲಿಗರ ಸಭೆಗೆ ಬಿಜೆಪಿ ಮುಖಂಡರು, ನಾಯಕರು, ಕಾರ್ಯಕರ್ತರು, ಪದಾಧಿಕಾರಿಗಳು ತೆರಳದಂತೆ ತಾಕೀತು ಮಾಡಲಾಗಿದೆ. ಬಿಜೆಪಿ ಹೈಕಮಾಂಡ್ ಸೂಚನೆಯ ಮೇರೆಗೆ ಈ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದು ಪಕ್ಷ ವಿರೋಧಿಯಾಗುವುದರಿಂದ ಭಾಗವಹಿಸದಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ, ಸಭೆಯಲ್ಲಿ ಯಾರ‍್ಯಾರು ಭಾಗವಹಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಬಿರುಸಿನ ಪ್ರಚಾರ:

ಬಿಜೆಪಿ ನಿಯೋಜಿತ ಅಭ್ಯರ್ಥಿ ಡಾ. ಕೆ. ಬಸವರಾಜ ಹಾಗೂ ಬಿಜೆಪಿ ನಾಯಕರು ಇದ್ಯಾವುದಕ್ಕೂ ಕ್ಯಾರೆ ಎನ್ನದೆ ಕ್ಷೇತ್ರದಾದ್ಯಂತ ಸುತ್ತಾಡಿ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಬಿಜೆಪಿಯ ಬಹುತೇಕ ನಾಯಕರು, ಪದಾಧಿಕಾರಿಗಳು ಮಾತ್ರ ಪಕ್ಷ ಘೋಷಣೆ ಮಾಡಿರುವ ಅಭ್ಯರ್ಥಿಯ ಪರವಾಗಿ ಕ್ಷೇತ್ರದಲ್ಲಿ ಸುತ್ತಾಟ ನಡೆಸಿದ್ದಾರೆ.

ಕಳೆದರೆಡು ದಿನಗಳ ಹಿಂದೆ ಕರಡಿ ನಿವಾಸಕ್ಕೆ ತೆರಳಿದ್ದ ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ಬಸವರಾಜ ದಢೇಸ್ಗೂರು, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಸೇರಿದಂತೆ ಮೊದಲಾದವರು ಮನವೊಲಿಸುವ ಯತ್ನ ಮಾಡಿದರೂ ಪ್ರಯೋಜನವಾಗದೆ ಇರುವುದರಿಂದ ಪ್ರಚಾರ ಕಾರ್ಯದಲ್ಲಿ ಅವರೆಲ್ಲ ಬ್ಯುಸಿಯಾಗಿದ್ದಾರೆ.