ಕನ್ನಡಪ್ರಭ ವಾರ್ತೆ ತಾಳಿಕೋಟೆ
ಸಂಘವೆಂದರೆ ಕೇವಲ ಗಣವೇಷವಲ್ಲ, ಸಮಾಜಸೇವೆ ಮತ್ತು ಹಿಂದೂ ಸಮಾಜದ ಸಂಘಟನೆಗಾಗಿ ಸದಾ ಸಿದ್ಧರಾಗಿರುವ ಮನೋಭಾವವಾಗಿದೆ ಎಂದು ಬೆಳಗಾವಿ ಸಂಘ ಪ್ರಚಾರಕ ಶ್ರೀರಾಮಚಂದ್ರ ಅಡಿಕೆ ಹೇಳಿದರು.ಸ್ಥಳೀಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಮಂಗಳವಾರ ಆಯೋಜಿಸಿದ್ದ ವಿಜಯದಶಮಿ ಉತ್ಸವದಲ್ಲಿ ಮಾತನಾಡಿದ ಅವರು, ಸಂಘದ ಸ್ವಯಂಸೇವಕರು ಟೀಕೆ ಅಥವಾ ಪ್ರತಿಷ್ಠೆಗಾಗಿ ಕೆಲಸ ಮಾಡದೇ ಹಿಂದೂ ಸಮಾಜದ ಸಂಘಟನೆ ಮತ್ತು ವ್ಯಕ್ತಿತ್ವ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಹಿಂದೂ ಸಮಾಜದ ಸಂಘಟನೆ ಹಾಗೂ ಹಿಂದುತ್ವದ ಸಂರಕ್ಷಣೆಗೆ ಸ್ವಯಂಸೇವಕರು ಸದಾ ಸನ್ನದ್ಧರಾಗಿರಬೇಕು ಎಂದು ಕರೆ ನೀಡಿದರು.ಶಾಖೆಗಳ ಮೂಲಕ ಸಮಾಜ ಸಂಘಟನೆಯ ಜೊತೆಗೆ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿಯೂ ಸೇವಾ ಕಾರ್ಯಗಳನ್ನು ಕೈಗೊಂಡಿದೆ. ದೇಶದ ಸಂಕಷ್ಟದ ಸಂದರ್ಭಗಳಲ್ಲಿ ರಾಷ್ಟ್ರಸೇವೆಗೆ ಸಂಘದ ಸ್ವಯಂಸೇವಕರು ಶ್ರಮಿಸಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ ಪ್ರತಾಪ್ಸಿಂಹ್, ಕಿತ್ತೂರು ರಾಣಿ ಚನ್ನಮ್ಮ, ವೀರ ಸಾವರ್ಕರ್ ಹಾಗೂ ಭಗತ್ ಸಿಂಗ್ ಅವರ ದೇಶಭಕ್ತಿಯನ್ನು ಸ್ಮರಿಸಿದ ಅವರು ಸ್ವಯಂಸೇವಕರು ಪ್ರಾಮಾಣಿಕತೆ ಮತ್ತು ದೇಶಭಕ್ತಿಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದರು.ಕಾರ್ಯಕ್ರಮದ ಮೊದಲಿಗೆ ಧ್ವಜಾರೋಹಣ ಹಾಗೂ ಘೋಷವಾದ್ಯಗಳ ಆಯುಧ ಪೂಜೆ ಜರುಗಿತು. ವೇದಿಕೆಯ ಮೇಲೆ ಸಂಘದ ವಿಭಾಗ ಸಂಘ ಚಾಲಕರಾದ ಚಿದಂಬರ್ ಕರಮರಕರ, ಕಸಾಪ ಅಧ್ಯಕ್ಷ ಆರ್.ಎಲ್.ಕೊಪ್ಪದ ಉಪಸ್ಥಿತರಿದ್ದರು.ಈ ಕಾರ್ಯಕ್ರಮದಲ್ಲಿ ಹಿರಿಯ ಸ್ವಯಂಸೇವಕರಾದ ಪ್ರಕಾಶ ಕಟ್ಟಿಮನಿ, ಮಲ್ಲಿಕಾರ್ಜುನ ಹಿಪ್ಪರಗಿ, ಚಂದ್ರು ಮಾಲಿಪಾಟೀಲ, ಸಂಗಮೇಶ ಪಾಲ್ಕಿ, ರಾಜು ಹಂಚಾಟೆ, ಕಿಸಾನ್ ಲೋಕರೆ, ಶಾಮ ಹಂಚಾಟೆ, ಪ್ರತೀಕ್ ಕುಲಕರ್ಣಿ, ತಾಲೂಕು ಕಾರ್ಯವಾಹ ಸಂಗಮೇಶ ಮದರಕಲ್ಲ ಒಳಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಸೇವಕರು ಪಾಲ್ಗೊಂಡಿದ್ದರು.ರಾಷ್ಟ್ರೀಯ ಸ್ವಯಂಸೇವಕ ಸಂಘವು ೧೯೨೫ರಲ್ಲಿ ಸ್ಥಾಪನೆಯಾದಾಗಿನಿಂದ ಸಂಸ್ಥಾಪಕ ಡಾ.ಕೇಶವ ಬಲಿರಾಮ ಹೆಡ್ಗೆವಾರ್ ಹಾಗೂ ಗುರೂಜೀ ತೋರಿದ ಮಾರ್ಗದಲ್ಲಿ ಮುನ್ನಡೆಯುತ್ತಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘವು ತನ್ನ 100 ವರ್ಷಗಳ ಪಯಣದಲ್ಲಿ ಅನೇಕ ಸವಾಲುಗಳು ಮತ್ತು ಟೀಕೆಗಳನ್ನು ಎದುರಿಸಿ ಮುನ್ನಡೆದಿದೆ.
-ಶ್ರೀರಾಮಚಂದ್ರ ಅಡಿಕೆ, ಬೆಳಗಾವಿ ಸಂಘ ಪ್ರಚಾರಕರು.