ಅಕ್ಟೋಬರ್‌ 26, 27 ರಂದು ಚಿತ್ರಾಪುರದಲ್ಲಿ ‘ಸಾಂಘಿಕ ಕೋಟಿ ಗಾಯತ್ರಿ ಜಪಯಜ್ಞ’

| Published : Oct 24 2024, 12:43 AM IST

ಅಕ್ಟೋಬರ್‌ 26, 27 ರಂದು ಚಿತ್ರಾಪುರದಲ್ಲಿ ‘ಸಾಂಘಿಕ ಕೋಟಿ ಗಾಯತ್ರಿ ಜಪಯಜ್ಞ’
Share this Article
  • FB
  • TW
  • Linkdin
  • Email

ಸಾರಾಂಶ

ಅ.27ರಂದು ಬೃಹತ್ ಏಕ ಯಜ್ಞಕುಂಡದಲ್ಲಿ ಗಾಯತ್ರಿ ಯಜ್ಞ ಆರಂಭಗೊಂಡು 10.30ಕ್ಕೆ ಯಜ್ಞದ ಪೂರ್ಣಾಹುತಿ ನಡೆಯಲಿದೆ. 11 ಗಂಟೆಗೆ ಧರ್ಮ ಸಭೆ ನಡೆಯಲಿದ್ದು, ಮಹಾಸಭಾದ ಅಧ್ಯಕ್ಷರು ಹಾಗೂ ಕೋಟಿ ಗಾಯತ್ರಿ ಜಪಯಜ್ಞ ಸಮಿತಿಯ ಗೌರವಾಧ್ಯಕ್ಷ ಅಶೋಕ್ ಹಾರನಹಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೇಂದ್ರ ಸಮಿತಿ ಹಾಗೂ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಜಂಟಿಯಾಗಿ ಮಂಗಳೂರಿನ ಚಿತ್ರಾಪುರ ಮಠದ ಸಹಕಾರದೊಂದಿಗೆ ‘ಗಾಯತ್ರಿ ಸಂಗಮ’ ಹೆಸರಿನಲ್ಲಿ ಸಾಂಘಿಕ ಕೋಟಿ ಗಾಯತ್ರಿ ಜಪಯಜ್ಞವನ್ನು ಅ.27ರಂದು ಮಂಗಳೂರಿನ ಕುಳಾಯಿ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಆಯೋಜಿಸಿದೆ ಎಂದು ಗಾಯತ್ರೀ ಸಂಗಮ ಅಧ್ಯಕ್ಷ, ಮಹಾಸಭಾ ಉಪಾಧ್ಯಕ್ಷ ಮಹೇಶ್‌ ಕಜೆ ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.ಕರಾವಳಿ ಸೇರಿದಂತೆ ದೇಶ ವಿದೇಶದಲ್ಲಿ ನೆಲೆಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಬ್ರಾಹ್ಮಣರು ಉಪಾಕರ್ಮದ ದಿನದಂದು ಸಂಕಲ್ಪ ದೀಕ್ಷೆ ತೆಗೆದುಕೊಂಡು ಗಾಯತ್ರಿ ಪಠಣ ಹಾಗೂ ಮಾತೆಯರು ‘ಸರ್ವ ಮಂಗಲ ಮಾಂಗಲ್ಯೆ’ ಮಂತ್ರ ಪಠಣ ಆರಂಭಿಸಿದ್ದಾರೆ. ಎರಡು ತಿಂಗಳ ಅವಧಿಯಲ್ಲಿ ಈಗಾಗಲೇ ಕೋಟಿ ಸಂಖ್ಯೆಯಲ್ಲಿ ಗಾಯತ್ರಿ ಹಾಗೂ ಸರ್ವಮಂಗಲ ಮಂತ್ರ ಪಠಣವಾಗಿದೆ. ಇದರ ಯಜ್ಞ ಪ್ರಕ್ರಿಯೆ ಅ.26 ಮತ್ತು 27ರಂದು ನಡೆಯಲಿದ್ದು, ಸುಮಾರು 10 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದರು.

ಶ್ರೀ ಕ್ಷೇತ್ರ ಚಿತ್ರಾಪುರದ ತಂತ್ರಿಗಳಾದ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣರಾಜ ತಂತ್ರಿಗಳ ನೇತೃತ್ವದಲ್ಲಿ ಗಾಯತ್ರಿ ಯಜ್ಞ ನಡೆಯಲಿದೆ. ಹವ್ಯಕ, ಕೋಟ, ಕೋಟೇಶ್ವರ, ಕರಾಡ, ಚಿತ್ಪಾವನ, ದೇಶಸ್ಥ, ಶಿವಳ್ಳಿ, ಸ್ಥಾನಿಕ ಅಲ್ಲದೆ ಬ್ರಾಹ್ಮಣ ಸಮಾಜದ ಎಲ್ಲ ಋತ್ವಿಜರು ಈ ಯಾಗದಲ್ಲಿ ಭಾಗವಹಿಸಿ ಪೂರ್ಣಾಹುತಿ ಪ್ರಕ್ರಿಯೆ ನಡೆಸಿಕೊಡಲಿದ್ದಾರೆ ಎಂದರು.ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ದೇವಾಲಯಗಳ ಅರ್ಚಕರು, ಜಿಲ್ಲೆಯ ಎಲ್ಲ ಪುರೋಹಿತರು, ಸಹಾಯಕ ಪುರೋಹಿತರು, ಸಂಸ್ಕೃತ ಶಿರೋಮಣಿಗಳು, ವೇದಜ್ಞರು ಬೆಂಬಲ ಸೂಚಿಸಿದ್ದು, ಯಾಗದಲ್ಲಿ ಭಾಗವಹಿಸಲಿದ್ದಾರೆ. ಈ ಯಾಗದ ಮೂಲಕ ಇಡೀ ಬ್ರಾಹ್ಮಣ ಸಮುದಾಯವನ್ನು ಒಂದೇ ವೇದಿಕೆಯಡಿ ತರುವ ಪ್ರಯತ್ನ ಇದಾಗಿದೆ ಎಂದು ಅವರು ಹೇಳಿದರು.ಏನೇನು ಕಾರ್ಯಕ್ರಮ?: ಅ.26 ರಂದು ಬೆಳಗ್ಗೆ 8.30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಪ್ರಾರ್ಥನೆ, ಗೋಪೂಜೆ, ಗಣಪತಿ ಹೋಮ, ದುರ್ಗಾ ಹೋಮ, ರುದ್ರ ಹೋಮ, ಕೃಷ್ಣ ಮಂತ್ರ ಹೋಮ, ಪವಮಾನ ಹೋಮ, ನಾಗದೇವರಿಗೆ ಅಭಿಷೇಕ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಯುವ ಘಟಕದ ನೇತೃತ್ವದಲ್ಲಿ ‘ಆದಿತ್ಯ ಯುವ ಸಂಗಮ-ಹಳೆ ಬೇರು ಹೊಸ ಚಿಗುರು’ ಸಂವಾದ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯಸಿಂಹ ಭಾಗವಹಿಸಲಿದ್ದಾರೆ ಎಂದರು.ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಮಧ್ಯಾಹ್ನ 1ರಿಂದ ಗಾಯತ್ರಿ ಮಹಾತ್ಮೆ ಯಕ್ಷಗಾನ ತಾಳಮದ್ದಳೆ, ಸಂಜೆ 3.30ರಿಂದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹಿಳಾ ಘಟಕದ ನೇತೃತ್ವದಲ್ಲಿ ವೇದ ಮಾತಾ ಗಾಯತ್ರೀ-ಸಂಸಾರ, ಸಂಸ್ಕಾರ, ಚಿಂತನೆ, ಸಾಕ್ಷಾತ್ಕಾರ ನಡೆಯಲಿದೆ ಎಂದರು. ಸಂಜೆ 5.30ರಿಂದ ಕಲಶ ಪ್ರತಿಷ್ಠೆ, ಅರಣೀ ಮಥನ, ಅಷ್ಟಾವಧಾನ ಯಜ್ಞ ಮಂಟಪದಲ್ಲಿ ನಡೆಯಲಿದೆ.

27 ರಂದು ಗಾಯತ್ರಿ ಯಾಗ: ಅ.27ರಂದು ಬೃಹತ್ ಏಕ ಯಜ್ಞಕುಂಡದಲ್ಲಿ ಗಾಯತ್ರಿ ಯಜ್ಞ ಆರಂಭಗೊಂಡು 10.30ಕ್ಕೆ ಯಜ್ಞದ ಪೂರ್ಣಾಹುತಿ ನಡೆಯಲಿದೆ. 11 ಗಂಟೆಗೆ ಧರ್ಮ ಸಭೆ ನಡೆಯಲಿದ್ದು, ಮಹಾಸಭಾದ ಅಧ್ಯಕ್ಷರು ಹಾಗೂ ಕೋಟಿ ಗಾಯತ್ರಿ ಜಪಯಜ್ಞ ಸಮಿತಿಯ ಗೌರವಾಧ್ಯಕ್ಷ ಅಶೋಕ್ ಹಾರನಹಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಹಾಗೂ ಶ್ರೀಮದ್ ಜಗದ್ಗುರು ಮಧ್ವಾಚಾರ್ಯ ಸಂಸ್ಥಾನದ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ.ಪ್ರಧಾನ ಸಂಚಾಲಕ ಶ್ರೀಧರ ಹೊಳ್ಳ, ಸಂಚಾಲಕ ಸುರೇಶ್ ರಾವ್, ಸ್ವಾಗತ ಸಮಿತಿಯ ರಾಜೇಂದ್ರ ಕಲ್ಬಾವಿ ಮತ್ತು ಎಂ. ಎಸ್. ಗುರುರಾಜ್, ಯಜ್ಞ ಸಮಿತಿಯ ಸೂರ್ಯನಾರಾಯಣ ಕಶೆಕೊಡಿ, ಯುವ ಘಟಕದ ಸುಬ್ರಹ್ಮಣ್ಯ ಪ್ರಸಾದ್ ಕೋರ್ಯಾರ್ ಇದ್ದರು. ವಿಶ್ವಗುರು ರಾಷ್ಟ್ರ ಸ್ಥಾಪನೆ ಗುರಿ

ಸಂವರ್ಧನೆ, ಸಂಘಟನೆ, ಸದೃಢ ರಾಷ್ಟ್ರ ಸ್ಥಾಪನೆ, ಬ್ರಹ್ಮ ತೇಜದ ಸಂವರ್ಧನೆ, ತನ್ಮೂಲಕ ಭಿನ್ನ ಪಥಗಳ, ಪಂಗಡಗಳ ಭೇದ ಮರೆತು ಬ್ರಾಹ್ಮಣರ ಐಕಮತ್ಯದ ಸಂಘಟನೆ ವಿಸ್ತರಿಸಿ ಸ್ವಸ್ಥ, ಸದೃಢ ಸಾಮರಸ್ಯದ ಸುಖ, ಶಾಂತಿ, ನೆಮ್ಮದಿಯ ವಿಶ್ವಗುರು ರಾಷ್ಟ್ರಸ್ಥಾಪನೆಯ ಗುರಿಯೊಂದಿಗೆ ಗಾಯತ್ರಿ ಸಂಗಮ ಕೈಗೊಳ್ಳಲಾಗಿದೆ

-------------------