ರಾಜ್ಯದ ನಾಲ್ಕು ವಿಮಾನ ನಿಲ್ದಾಣಕ್ಕೆ ಮಹನೀಯರ ಹೆಸರನ್ನು ನಾಮಕರಣ ಮಾಡುವಂತೆ ಈಗಾಗಲೇ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಹುಬ್ಬಳ್ಳಿ:
ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಧಾರವಾಡ ಜಿಲ್ಲಾ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 195ನೇ ಹುತಾತ್ಮ ದಿನಾಚರಣೆ ಅಂಗವಾಗಿ ಸೋಮವಾರ ನಡೆದ ಸಮಾರಂಭದಲ್ಲಿ 40 ಸಾಧಕರಿಗೆ ಸಂಗೊಳ್ಳಿ ರಾಯಣ್ಣ ಹಾಗೂ 7 ಸಾಧಕಿಯರಿಗೆ ಕಿತ್ತೂರರಾಣಿ ಚೆನ್ನಮ್ಮ-2026ರ ಪ್ರಶಸ್ತಿ ಪ್ರದಾನ ಮಾಡಲಾಯಿತು.ನಗರದ ಚೆನ್ನಮ್ಮ ವೃತ್ತದಲ್ಲಿ ನಡೆದ ವೇದಿಕೆ ಸಮಾರಂಭದಲ್ಲಿ ಕನ್ನಡಪ್ರಭದ ಮುಖ್ಯ ಉಪಸಂಪಾದಕ ಮಹೇಶ ಅರಳಿ ಸೇರಿದಂತೆ ವಿವಿಧ ಕ್ಷೇತ್ರದ 29 ಜನರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಹಾಗೂ ತಾರಾದೇವಿ ವಾಲಿ ಸೇರಿದಂತೆ 7 ಜನರಿಗೆ ಕಿತ್ತೂರುರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ಗಣ್ಯರು ಪ್ರದಾನ ಮಾಡಿದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ರಾಜ್ಯದ ನಾಲ್ಕು ವಿಮಾನ ನಿಲ್ದಾಣಕ್ಕೆ ಮಹನೀಯರ ಹೆಸರನ್ನು ನಾಮಕರಣ ಮಾಡುವಂತೆ ಈಗಾಗಲೇ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದು ಸಾಕಾರಗೊಳ್ಳುವ ವರೆಗೂ ಹೋರಾಟಗಾರರ ಪರವಾಗಿ ನಮ್ಮ ಬೆಂಬಲ ಇರಲಿದೆ ಎಂದು ಭರವಸೆ ನೀಡಿದರು.ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿದರು. ಇದಕ್ಕೂ ಮುನ್ನ ಉದ್ಯಮಿ ಶ್ರೀಗಂಧ ಶೇಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಮೋಘಸಿದ್ಧ ಹಾಗೂ ರಾಮದುರ್ಗದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಅಲ್ತಾಫ ಹಳ್ಳೂರ, ಚಂದ್ರಶೇಖರ ಜುಟ್ಟಲ್, ಸದಾನಂದ ಡಂಗನವರ, ವಿಜಯಕುಮಾರ ಅಪ್ಪಾಜಿ, ಅಡಿವೆಪ್ಪ ಶಿವಳ್ಳಿ ಸೇರಿದಂತೆ ಅನೇಕರಿದ್ದರು. ಕಮಡೊಳ್ಳಿಯ ಮಕ್ಕಳಿಂದ ಮಲ್ಲಕಂಬ ಪ್ರದರ್ಶನ ಹಾಗೂ ವಿವಿಧೆಡೆಯಿಂದ ಆಗಮಿಸಿದ್ದ ಪೈಲ್ವಾನರಿಂದ ಭಾರ ಎತ್ತುವ ಸ್ಪರ್ಧೆ ಜರುಗಿತು.
ಮಾರ್ಚ್ 28ಕ್ಕೆ ಮತ್ತೆ ಹೋರಾಟ: ಮುತ್ತಣ್ಣವರನಮ್ಮ ಸಂಘಟನೆಯ ಹೋರಾಟದ ಫಲವಾಗಿ ರಾಜ್ಯದ 4 ವಿಮಾನ ನಿಲ್ದಾಣಕ್ಕೆ ಮಹನೀಯರ ಹೆಸರನ್ನು ಇಡುವಂತೆ ಕೋರಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅದಕ್ಕೆ ಪೂರಕವಾಗಿ ಜ. 26ರೊಳಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ಕೊಡಿಸುವಂತೆ ಗಡುವು ನೀಡಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಕೇಂದ್ರ ಸರ್ಕಾರ ಅನುಮೋದನೆ ನೀಡಿಲ್ಲ. ಈಗ ಮತ್ತೆ ಮಾರ್ಚ್ 28ರಂದು 3ನೇ ಹಂತದ ಹೋರಾಟ ಮಾಡಲಾಗುವುದು ಎಂದು ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ ಎಚ್ಚರಿಸಿದರು.