ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ ಕಾಂಗ್ರೆಸ್ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸ್ಥಳೀಯ ಶಾಸಕರ ಸಮ್ಮುಖದಲ್ಲಿ ಸರ್ಕಾರದ ಸವಲತ್ತುಗಳ ವಿತರಣೆ ಮತ್ತು 400 ಕೋಟಿ ರು. ಗಳ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆಯು ಮೇ 23ರಂದು ಪಟ್ಟಣದ ಪುರಸಭೆಯ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು. ಪಟ್ಟಣದ ಸಂಗೊಳ್ಳಿ ರಾಯಣ್ಣ ಸಮುದಾಯ ಭವನದಲ್ಲಿ ನಡೆದ ಸಮಾರಂಭದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 11ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಸಚಿವರು ಆಗಮಿಸಲಿದ್ದು, ಪಕ್ಷದ ಮುಖಂಡರು ತಮ್ಮ ತಮ್ಮ ಗ್ರಾಮಗಳಿಂದ ಹೆಚ್ಚು ಜನರನ್ನು ಕರೆ ತಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು. ಎರಡು ತಾಲೂಕುಗಳ ಅಭಿವೃದ್ದಿಗಾಗಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರಿಂದ 387.12 ಕೋಟಿ ರು. ಗಳನ್ನು ನಾನಾ ಕಾಮಗಾರಿಗಳಿಗಾಗಿ ಸರ್ಕಾರ ಬಿಡುಗಡೆ ಮಾಡಿದ್ದು, ಈ ಎಲ್ಲ ಕಾಮಗಾರಿಗಳಿಗೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿಗಳು ಮೇ 23ರ ನಂತರ ಆರಂಭವಾಗಲಿದೆ ಎಂದು ಹೇಳಿದರು. ಕೆ.ಆರ್. ನಗರ ವಿಧಾನ ಸಭಾ ಕ್ಷೇತ್ರದಲ್ಲಿ ನಡೆಯುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರುಗಳು ಹೆಚ್ಚು ಜನರನ್ನು ಕರೆ ತರುವ ಮೂಲಕ ಯಶಸ್ವಿಗೆ ಸಹಕಾರ ನೀಡಬೇಕೆಂದು ಕೋರಿದರು.ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ಪುರಸಭೆ ಅಧ್ಯಕ್ಷ ಶಿವುನಾಯಕ್, ಜಿಪಂ ಮಾಜಿ ಸದಸ್ಯ ಶಿವರಾಮು, ಮುಖಂಡರಾದ ಶ್ರೀನಿವಾಸ್, ಸಿ.ಪಿ. ರಮೇಶ್, ಎಸ್.ಪಿ. ತಮ್ಮಯ್ಯ, ಎ.ಆರ್. ಕಾಂತರಾಜು, ಮಹಿಳಾ ಘಟಕದ ಅಧ್ಯಕ್ಷೆ ಲತಾ ರವಿಶಂಕರ್, ರಾಣಿ ಬಾಲಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಹದೇವ್, ಉದಯಶಂಕರ್, ನಗರಾಧ್ಯಕ್ಷ ಎಂ.ಜೆ. ರಮೇಶ್ ಮಾತನಾಡಿದರು. ಕುರಿ ಮತ್ತು ಮೇಕೆ ಅಭಿವೃದ್ದಿ ನಿಗಮದ ರಾಜ್ಯಾಧ್ಯಕ್ಷ ಎಂ. ರಮೇಶ್, ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಬಿ.ಟಿ. ಮಹದೇವ್, ಬೋರೇನಾಗರಾಜು, ಮಾಜಿ ಸದಸ್ಯರಾದ ಹರಿಣಿಪ್ರಕಾಶ್, ಎ.ಟಿ. ಗೋವಿಂದೇಗೌಡ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿ. ಶಂಕರ್, ಶಂಕರ್‌ಸ್ವಾಮಿ ಇದ್ದರು.