ಕಿಡಿಗೇಡಿಗಳಿಂದ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಹಾನಿ

| Published : May 09 2024, 01:02 AM IST

ಕಿಡಿಗೇಡಿಗಳಿಂದ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಕಿಡಿಗೇಡಿಗಳು ತಡರಾತ್ರಿ ರಾಯಣ್ಣನ ಕತ್ತಿ ಮತ್ತು ಕಾಲು, ಕೈ ಭಾಗಗಳಿಗೆ ಹಾನಿಗೊಳಿಸಿ ವಿಕೃತಿ ಮೆರೆದಿದ್ದಾರೆ. ದೇಶಕ್ಕಾಗಿ ಬಲಿದಾನವಾದ ಮಹನೀಯರ ಮೇಲೆ ವಿಕೃತಿ ಮೆರೆದಿರುವ ದುಷ್ಕರ್ಮಿಗಳನ್ನು ಸರ್ಕಾರ ಶೀಘ್ರವೇ ಬಂಧಿಸಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಹಾನಿ ಮಾಡಿ ವಿರೂಪಗೊಳಿಸಿರುವುದನ್ನು ಖಂಡಿಸಿ ತಾಲೂಕಿನ ಬೀಕನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಗ್ರಾಮದ ಶ್ರೀ ಸಂಗೊಳ್ಳಿ ರಾಯಣ್ಣ ಯುವ ಬ್ರಿಗೇಡ್ ಯುವಕರು ಮತ್ತು ಗ್ರಾಮಸ್ಥರ ಸಹಕಾರದಿಂದ ಬಿಡದಿಯ ನುರಿತ ಶಿಲ್ಪಿಯಿಂದ ರಾಯಣ್ಣನ ಪ್ರತಿಮೆಯನ್ನು ನಿರ್ಮಿಸಿ, ಗ್ರಾಮದಲ್ಲಿ ಕಳೆದ 2023ರ ಜೂ.18 ರಂದು ಪ್ರತಿಷ್ಠಾಪಿಸಿದ್ದರು. ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಕಿಡಿಗೇಡಿಗಳು ಸಂಗೊಳ್ಳಿ ರಾಯಣ್ಣನ ಪ್ರತಿಮೆಯಲ್ಲಿ ಕತ್ತಿ, ಕೈ, ಕಾಲು ಸೇರಿದಂತೆ ವಿವಿಧ ಭಾಗಗಳಲ್ಲಿ ಹಾನಿಗೊಳಿಸಿ ಪ್ರತಿಮೆಯನ್ನು ವಿರೂಪಗೊಳಿಸಿರುವುದನ್ನು ಖಂಡಿಸಿದರು.

ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣಗೊಂಡಿತು. ಗ್ರಾಮಸ್ಥರು ಪ್ರತಿಮೆಯ ಜಾಗಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಬೀಕನಹಳ್ಳಿ ಗ್ರಾಮದ ಈರೇಗೌಡರು ಮಾತನಾಡಿ, ದೇಶಭಕ್ತ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಯುವಕರು ಕಳೆದ 10 ತಿಂಗಳ ಹಿಂದೆ ಪ್ರತಿಷ್ಠಾಪಿಸಿದ್ದರು.

ಕಿಡಿಗೇಡಿಗಳು ತಡರಾತ್ರಿ ರಾಯಣ್ಣನ ಕತ್ತಿ ಮತ್ತು ಕಾಲು, ಕೈ ಭಾಗಗಳಿಗೆ ಹಾನಿಗೊಳಿಸಿ ವಿಕೃತಿ ಮೆರೆದಿದ್ದಾರೆ. ದೇಶಕ್ಕಾಗಿ ಬಲಿದಾನವಾದ ಮಹನೀಯರ ಮೇಲೆ ವಿಕೃತಿ ಮೆರೆದಿರುವ ದುಷ್ಕರ್ಮಿಗಳನ್ನು ಸರ್ಕಾರ ಶೀಘ್ರವೇ ಬಂಧಿಸಬೇಕು ಎಂದು ಆಗ್ರಹಿಸಿದರು.

ರಾಯಣ್ಣ ಯಾವುದೇ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು ಸರ್ವ ಸಮುದಾಯದ ಜನರ ಮನದಂಗಳದಲ್ಲಿ ನೆಲೆಸಿದ್ದಾರೆ. ರಾಜ್ಯದಲ್ಲಿ ಹಲವು ಕಡೆ ಕಿಡಿಗೇಡಿಗಳು ರಾಯಣ್ಣನ ಪ್ರತಿಮೆಯನ್ನು ಹಾನಿಗೊಳಿಸಿ ಅವಮಾನಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದು ರಾಯಣ್ಣನಂತಹ ಅಪ್ರತಿಮ ದೇಶಭಕ್ತನ ಹೋರಾಟಕ್ಕೆ ಮಾಡುತ್ತಿರುವ ಅಪಮಾನ. ಈ ಹಿಂದೆ ನಾಡಿನ ವಿವಿಧೆಡೆ ರಾಯಣ್ಣನ ಪ್ರತಿಮೆಗೆ ಹಾನಿಯಾದಾಗ ರಾಜ್ಯ ಸರ್ಕಾರ ಕಾರಣರಾದ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಠಿಣ ಕ್ರಮ ಜರುಗಿಸಿದ್ದರೆ ನಮ್ಮ ಗ್ರಾಮದಲ್ಲಿ ಈ ಘಟನೆ ಜರುಗುತ್ತಿರಲಿಲ್ಲ ಎಂದು ದೂರಿದರು.

ಈಗಲೂ ಕಾಲ ಮಿಂಚಿಲ್ಲ, ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಈ ಘಟನೆಗೆ ಕಾರಣರಾದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ವಿಷಯ ತಿಳಿದು ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡದೊಂದಿಗೆ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಆನಂದೇಗೌಡ ನೇತೃತ್ವದ ತಂಡ ಸ್ಥಳಕ್ಕಾಗಮಿಸಿ ಪರಿಶೀಲಿಸಿತು. ನಂತರ ಶ್ವಾನ ಅದೇ ಗ್ರಾಮದ ಅಣ್ಣಯ್ಯರ ಮನೆ ಬಳಿ ನಿಂತಿತು. ಮನೆಯಲ್ಲಿ ಯಾರೂ ಇಲ್ಲದ ಕಾರಣ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದು ಶೀಘ್ರ ಆರೋಪಿಯನ್ನು ಬಂಧಿಸುವ ಭರವಸೆ ನೀಡಿದರು.

ತಾಲೂಕು ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್ ಸೇರಿ ಬೀಕನಹಳ್ಳಿ ಗ್ರಾಮಸ್ಥರು ಹಾಗೂ ಶ್ರೀ ಸಂಗೊಳ್ಳಿ ರಾಯಣ್ಣ ಯುವ ಬ್ರಿಗೇಡ್ ಯುವಕರು ಉಪಸ್ಥಿತರಿದ್ದರು.