ಸಾರಾಂಶ
ವೈದಕೀಯ ಕ್ಷೇತ್ರ, ಸಹಕಾರ ಕ್ಷೇತ್ರ, ಅಂಚೆ ಇಲಾಖೆ, ಶಿಕ್ಷಣ ಕ್ಷೇತ್ರ, ಕ್ರೀಡಾ ವಿಭಾಗ, ಕಲಾವಿದರ ಕ್ಷೇತ್ರ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಸಮಾಜ ಸೇವೆಯಲ್ಲಿ ಸಾಧನೆಗೈದವರಿಗೆ ಪ್ರಶಸ್ತಿ ನೀಡಲಾಗುವುದು. ಅಲ್ಲದೇ ಅಂದು ಸಾಧಕ ಮಹಿಳೆಯರನ್ನು ಗುರುತಿಸಿ ವೀರರಾಣಿ ಕಿತ್ತೂರ ಚೆನ್ನಮ್ಮ ಪ್ರಶಸ್ತಿಯನ್ನೂ ನೀಡಲಾಗುತ್ತದೆ.
ಹುಬ್ಬಳ್ಳಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ವೇದಿಕೆ ವತಿಯಿಂದ ನಗರದ ಚೆನ್ನಮ್ಮ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣನ 231ನೇ ಜಯಂತಿ ಉತ್ಸವ ನಿಮಿತ್ತ ಆ. 15ರಂದು ಸಂಜೆ 4ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಈ ವೇಳೆ ವಿವಿಧ ಕ್ಷೇತ್ರದ 96 ಜನ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮಿತಿಯ ಉಪಾಧ್ಯಕ್ಷ ಸುನಿಲ್ ರೇವಣಕರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದಕೀಯ ಕ್ಷೇತ್ರ, ಸಹಕಾರ ಕ್ಷೇತ್ರ, ಅಂಚೆ ಇಲಾಖೆ, ಶಿಕ್ಷಣ ಕ್ಷೇತ್ರ, ಕ್ರೀಡಾ ವಿಭಾಗ, ಕಲಾವಿದರ ಕ್ಷೇತ್ರ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಸಮಾಜ ಸೇವೆಯಲ್ಲಿ ಸಾಧನೆಗೈದವರಿಗೆ ಪ್ರಶಸ್ತಿ ನೀಡಲಾಗುವುದು. ಅಲ್ಲದೇ ಅಂದು ಸಾಧಕ ಮಹಿಳೆಯರನ್ನು ಗುರುತಿಸಿ ವೀರರಾಣಿ ಕಿತ್ತೂರ ಚೆನ್ನಮ್ಮ ಪ್ರಶಸ್ತಿಯನ್ನೂ ನೀಡಲಾಗುತ್ತದೆ ಎಂದು ತಿಳಿಸಿದರು.ಪತ್ರಿಕಾರಂಗದಲ್ಲಿ ಕನ್ನಡಪ್ರಭದ ಉಪಸುದ್ದಿ ಸಂಪಾದಕ ಮಧುಕರ್ ಭಟ್, ಛಾಯಾಗ್ರಾಹಕ ಈರಪ್ಪ ನಾಯ್ಕರ್, ಪತ್ರಕರ್ತರಾದ ಮಾಲತೇಶ ಹೂಲಿಹಳ್ಳಿ, ಕಲ್ಮೇಶ ಪಟ್ಟಣದವರ, ಶಿವರಾಯ ಪೂಜಾರ, ಮಹಾಂತೇಶ ಕಂಬಳಿ ಸೇರಿದಂತೆ ಇನ್ನಿತರ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಸಂತೋಷ ಚಿಕ್ಕರೆಡ್ಡಿ, ಡಾ. ಅಸ್ಲಂ ಶೇಖ ಸೇರಿದಂತೆ 8 ಜನ, ಕ್ರೀಡಾ ವಿಭಾಗದಲ್ಲಿ ಯೋಗೇಶ ಬೆಂಗೇರಿ, ರತನ ಹಳ್ಳಿಕೇರಿ ಸೇರಿ ನಾಲ್ವರು, ಸಾರಿಗೆ ಇಲಾಖೆಯಲ್ಲಿ ಪಾಂಡುರಂಗ ಕಿರಣಗಿ ಸೇರಿ ಹತ್ತು ಜನ, ಪೊಲೀಸ್ ಇಲಾಖೆಯಲ್ಲಿ ರವಿ ಹೊಸಮನಿ ಸೇರಿ 12 ಜನ, ಸಮಾಜ ಸೇವೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಉದ್ಯಮಿ ಗೌತಮ ಬಾಫಣಾ ಸೇರಿ 22 ಜನ, ಸಹಕಾರ ಕ್ಷೇತ್ರದಲ್ಲಿ ವೀರೇಶ ಪತ್ತಾರ, ಎಸ್.ಬಿ. ಅರ್ಕಸಾಲಿ ಸೇರಿ ಮೂವರು, ಅಂಚೆ ಇಲಾಖೆಯ ಇಬ್ಬರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.ಇದೇ ವೇಳೆ ಇತ್ತೀಚಿಗೆ ಬಾಲಕಿ ಕೊಲೆ ಪ್ರಕರಣದ ಆರೋಪಿಯನ್ನು ಶೂಟೌಟ್ ಮಾಡಿದ್ದ ಪಿಎಸ್ಐ ಅನ್ನಪೂರ್ಣಾ ಆರ್.ಎಂ. ಸೇರಿ 20 ಮಹಿಳೆಯರಿಗೆ ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವೀರರಾಣಿ ಕಿತ್ತೂರ ಚೆನ್ನಮ್ಮ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಸರೋಜಾ ಛಬ್ಬಿ, ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ತಾಲೂರ ಮತ್ತಿತರರು ಉಪಸ್ಥಿತರಿದ್ದರು.