ಜನಸಾಮಾನ್ಯರಿಗೆ ನೀಡುವ ಗೌರವ ಪೌರಕಾರ್ಮಿಕರಿಗೂ ನೀಡಬೇಕು. ಪೌರ ಕಾರ್ಮಿಕರು ನಮ್ಮಂತೆ ಮನುಷ್ಯರೆ.
ಕನ್ನಡಪ್ರಭ ವಾರ್ತೆ ಶಿರಹಟ್ಟಿ
ಜನಸಾಮಾನ್ಯರಿಗೆ ನೀಡುವ ಗೌರವ ಪೌರಕಾರ್ಮಿಕರಿಗೂ ನೀಡಬೇಕು. ಪೌರ ಕಾರ್ಮಿಕರು ನಮ್ಮಂತೆ ಮನುಷ್ಯರೆ. ಗಾಳಿ, ಮಳೆ, ಚಳಿ, ಬಿಸಿಲು ಎನ್ನದೇ ದಿನನಿತ್ಯ ನಸುಕಿನ ಜಾವದಿಂದ ಸ್ವಚ್ಛತೆಗೆ ಟೊಂಕ ಕಟ್ಟಿ ನಿಲ್ಲುವ ಇವರ ಕಾರ್ಯ ಅತ್ಯಮೂಲ್ಯ. ಪೌರ ಕಾರ್ಮಿಕರು ನೈಜ ಕಾಯಕಯೋಗಿಗಳು. ಸ್ವಚ್ಛತಾ ರೂವಾರಿಗಳು ಎಂದು ಪಪಂ ಮುಖ್ಯಾಧಿಕಾರಿ ಎನ್.ಎಂ. ಹಾದಿಮನಿ ಹೇಳಿದರು.ಶಿರಹಟ್ಟಿ ಪಪಂಯಿಂದ ದೇವರಾಜ ಅಸರು ಭವನದಲ್ಲಿ ಬುಧವಾರ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು. ಪೌರಕಾರ್ಮಿಕರು ಕೆಲಸದ ವೇಳೆ ಸುರಕ್ಷತಾ ಪರಿಕರಗಳನ್ನು ಧರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು. ಪೌರಕಾರ್ಮಿಕರು ಸ್ಥಳೀಯ ಸಂಸ್ಥೆಗಳ ಆಧಾರ ಸ್ತಂಭ ಮತ್ತು ಭೂಸೇನಾ ಸೈನಿಕರಿದ್ದಂತೆ. ಎಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ಆರೋಗ್ಯ ಬದಿಗೊತ್ತಿ ಸ್ವಚ್ಛತಾ ಕಾರ್ಯ ಮಾಡುತ್ತಾರೆ. ನಿಮ್ಮ ಆರೋಗ್ಯ ಕಾಪಾಡುವ ಜವಾಬ್ದಾರಿ ಸ್ಥಳೀಯ ಆಡಳಿತ ಮತ್ತು ಸರ್ಕಾರಕ್ಕಿರುತ್ತದೆ ಎಂದರು.
ಪೌರಕಾರ್ಮಿಕರು ಸದಾ ಸ್ಮರಣೀಯರು. ಅವರ ಶ್ರೇಯೋಭಿವೃದ್ದಿಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಮನಸ್ಸು ಮಾಡಬೇಕಿದೆ. ಪೌರಕಾರ್ಮಿಕರನ್ನು ಸಮಾಜ ಕೀಳಾಗಿ ಕಾರಣಬಾರದು. ಪೌರಕಾರ್ಮಿಕರು ತಮ್ಮ ಕಾಯಕದ ಬಗ್ಗೆ ನಿರಾಸಕ್ತಿ ತೋರದೆ, ಮನಪೂರ್ವಕವಾಗಿ ಶ್ರದ್ಧೆಯಿಂದ ಕಾಯಕ ಮಾಡಬೇಕು. ದೊಡ್ಡ ವ್ಯಕ್ತಿ ಮತ್ತು ಉನ್ನತ ಹುದ್ದೆಯಲ್ಲಿರುವವರನ್ನು ಸ್ಮರಿಸುವುದು, ಗೌರವಿಸುವುದು ದೊಡ್ಡ ಕಾರ್ಯವಲ್ಲ. ಪೌರಕಾರ್ಮಿಕರಂತಹ ವ್ಯಕ್ತಿಗಳನ್ನು ಪ್ರತಿ ವರ್ಷ ಗೌರವಿಸುವುದು ಜನಮೆಚ್ಚುವ ಕಾರ್ಯವಾಗಿದೆ ಎಂದರು.ಪೌರಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ರಮೇಶ ಹಲಗಿ, ಮಹಾಂತೇಶ ದಿವಟರ, ಉಮೇಶ ಗಾಣಗೇರ, ಹುಚ್ಚಪ್ಪ ಗೋಡೆಣ್ಣವರ, ಸಿದ್ದಮ್ಮ ಪೂಜಾರ, ರೂಪಾ ಹೂಗಾರ, ಉಡಚಪ್ಪ ಗೋಡೆಣ್ಣವರ, ಹಾಲಪ್ಪ ಬಡ್ಡೆಪ್ಪನವರ, ನಾಗೇಶ ಕುಲಕರ್ಣಿ, ಚನ್ನಯ್ಯ ಹಿರೇಮಠ, ಉಡಚಪ್ಪ ನೀಲಣ್ಣವರ, ಬಿ.ಎಸ್. ಜಾಲಿಕಟ್ಟಿ, ನಾಗೇಶ ಕುಲಕರ್ಣಿ, ಕರಿಯಪ್ಪ ಬಡ್ಡೆಪ್ಪನವರ, ಗುರುನಾಥ ಪಾತಾಳೆ, ನಿಂಗಪ್ಪ ಗೋಡೆಣ್ಣರ ಮುಂತಾದವರಿದ್ದರು.