ಸ್ಮಾಲ್‌ ಕಿಕ್ಕರ್‌

ಉತ್ತಮ ಕೆಲಸ ಮಾಡಿ

--

-ಅಬ್ಬೆತುಮಕೂರು ಶ್ರೀಗಳ ಆಶೀರ್ವಾದ ಪಡೆದ ಸಚಿವ ರಾಜೂಗೌಡ

--


ಕನ್ನಡಪ್ರಭ ವಾರ್ತೆ ಯಾದಗಿರಿ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿರುವ ಘಟನೆ ಕುರಿತು ಮಾಜಿ ಸಚಿವ, ಬಿಜೆಪಿ ರಾಜ್ಯ ಮುಖಂಡ ನರಸಿಂಹ ನಾಯಕ (ರಾಜೂಗೌಡ) ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಕಾರಣಕ್ಕೆ ಯಾರಾದರೂ ಸ್ಥಳ ಶುದ್ಧೀಕರಣ ಮಾಡಿದ್ದರೆ ಅದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ಇಂತಹ ಘಟನೆಗಳು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತವೆ. ಯಾರೇ ಮಾಡಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದಲ್ಲಿ ಎಲ್ಲರಿಗೂ ಒಂದೇ ಮತದ ಹಕ್ಕಿದೆ. ಹಿಂದುತ್ವ ನಿಜವಾಗಿ ಬಲಿಷ್ಠವಾಗಬೇಕಾದರೆ ಎಸ್‌ಸಿ, ಎಸ್‌ಟಿ ಸೇರಿದಂತೆ ಎಲ್ಲ ದಲಿತ ಸಮುದಾಯದವರನ್ನು ಸಮಾನವಾಗಿ ಒಳಗೊಳ್ಳಬೇಕು. ಅವರನ್ನು ದೂರವಿಟ್ಟು ಹಿಂದುತ್ವದ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ದೇವಸ್ಥಾನ ನಿರ್ಮಾಣದ ವೇಳೆ ಕಲ್ಲು ಹೊಡೆಯುವುದು, ಗೋಡೆ ಕಟ್ಟುವುದು ಸೇರಿದಂತೆ ಹಲವು ಕೆಲಸಗಳಲ್ಲಿ ದಲಿತರ ಶ್ರಮವನ್ನು ಪಡೆಯಲಾಗುತ್ತದೆ. ಆದರೆ, ಅದೇ ಸಂದರ್ಭದಲ್ಲಿ ಅವರನ್ನು ಜಾತಿಯ ಹೆಸರಿನಲ್ಲಿ ದೂರವಿಡುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.

* ಜಮೀರ್‌ ಸಚಿವ ಸ್ಥಾನದಿಂದ ವಜಾ ಮಾಡಲಿ:

ವಿಜಯನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಮಾಡಲೊಪ್ಪದ ಸಚಿವ ಜಮೀರ್ ಅವರನ್ನು ಸಿಎಂ ಅವರು ಸಚಿವ ಸ್ಥಾನದಿಂದ ವಜಾ ಮಾಡಬೇಕೆಂದು ರಾಜೂಗೌಡ ಆಗ್ರಹಿಸಿದರು. ಅನಾರೋಗ್ಯ ಅಥವಾ ಅನಿವಾರ್ಯ ಕಾರಣವಿದ್ದರೆ ಬೇರೆ ವಿಚಾರ. ಆದರೆ, ಧ್ವಜಾರೋಹಣಕ್ಕೆ ಗೈರಾಗಲು ಯಾವುದೇ ಸಮಂಜಸ ಕಾರಣವಿಲ್ಲದಿದ್ದರೆ ಮುಖ್ಯಮಂತ್ರಿ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದ ರಾಜುಗೌಡ, ಅವರ ರಾಜೀನಾಮೆ ಪಡೆಯುವವರೆಗೆ ಬಿಜೆಪಿ ಹೋರಾಟ ಮುಂದುವರಿಸಲಿದೆ. ಆ.17ರಿಂದ ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿಗಳ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಆ.23ರಿಂದ ದೇವದುರ್ಗದಿಂದ ಪಾದಯಾತ್ರೆ ಆರಂಭಿಸಿ ಮಾನವಿ ಮೂಲಕ ಬಳ್ಳಾರಿವರೆಗೆ ಸಾಗುವ ಕುರಿತು ಪಕ್ಷದ ಸಭೆಯಲ್ಲಿ ಚರ್ಚಿಸಲಾಗಿದೆ.

ಖರ್ಗೆ ಆರ್‌ಎಸ್‌ಎಸ್‌ ಬೆನ್ನು ಬೀಳೋದು ಬಿಡಲಿ:

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆ‌ರ್.ಎಸ್‌.ಎಸ್ ಬೆನ್ನು ಬೀಳುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಬಿಜೆಪಿ ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ಸಲಹೆ ನೀಡಿದರು. ಅವರು ನನ್ನ ಆತ್ಮೀಯ ಸೋದರರಿದ್ದಂತೆ. ಅವರು ಗೃಹ ಸಚಿವರಾಗಿ ಉತ್ತಮ ಕೆಲಸ ಮಾಡಬೇಕು ಎಂಬುದು ನಮ್ಮ ಆಸೆ. ಆರ್‌ಎಸ್ಎಸ್ ರಾಷ್ಟ್ರ ನಿರ್ಮಾಣಕ್ಕಾಗಿ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದೆ. ಪ್ರವಾಹ, ಭೂಕಂಪ, ಕೊರೊನಾ ಸೇರಿದಂತೆ ವಿಪತ್ತಿನ ಸಂದರ್ಭಗಳಲ್ಲಿ ಸ್ವಯಂಪ್ರೇರಿತವಾಗಿ ಸೇವೆ ಸಲ್ಲಿಸಿದೆ ಎಂದರು. ನಾನು ದಲಿತ ಸಂಘರ್ಷ ಸಮಿತಿಯಿಂದ ಬಂದವನು. ಆ‌ರ್.ಎಸ್‌.ಎಸ್ ದಲಿತ ವಿರೋಧಿ ಎಂದು ಆರೋಪಿಸುವುದಾದರೆ ಉದಾಹರಣೆಗಳನ್ನು ನೀಡಿ ತಪ್ಪಿದ್ದರೆ ನಾವೇ ಪ್ರಶ್ನಿಸುತ್ತೇವೆ. ಆದರೆ ಸುಮ್ಮನೆ ಸಂಘದ ಹೆಸರನ್ನು ಜಪಿಸುವುದು ಬೇಡ ಎಂದರು. ಯುವ ನಾಯಕರು ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಬೇಕು. ಅನಗತ್ಯ ಪ್ರಚಾರದ ಬದಲು ಉತ್ತಮ ಕೆಲಸ ಮಾಡಿ, ಆ ಕೆಲಸವೇ ಪ್ರಚಾರ ತಂದುಕೊಡುವಂತೆ ಕಾರ್ಯನಿರ್ವಹಿಸಿ ಎಂದು ರಾಜುಗೌಡ ಸಲಹೆ ನೀಡಿದರು.

-

14ವೈಡಿಆರ್8 : ಸಚಿವ ರಾಜೂಗೌಡ ಅವರು ಶುಕ್ರವಾರ ಅಬ್ಬೆತುಮಕೂರು ಶ್ರೀಗಳ ಆಶೀರ್ವಾದ ಪಡೆದರು.