ಸಾರಾಂಶ
- ಹನುಮ ಮಹೋತ್ಸವ, ಧರ್ಮ ಜನಜಾಗೃತಿ ಸಮಾವೇಶದಲ್ಲಿ ಸ್ವಾಮಿ ನಿರ್ಭಯಾನಂದ ಅಭಿಮತ
- - -ಕನ್ನಡಪ್ರಭ ವಾರ್ತೆ ಜಗಳೂರು
ವಿಶ್ವಕ್ಕೆ ಗುರುವಾಗಿ ಬೆಳೆದಿರುವ ಈ ಭಾರತದಲ್ಲಿ ಹಿಂದೆ ಸಂಸ್ಕೃತಿ, ಸಂಸ್ಕಾರದ ಶಿಕ್ಷಣವನ್ನು ನೀಡುವ ಪದ್ಧತಿ ಕುಟುಂಬದಲ್ಲಿ ರೂಢಿಯಲ್ಲಿತ್ತು . ಆದರೆ, ಇಂದಿನ ಆಧುನಿಕ ಯುಗದಲ್ಲಿ ಮಾನವೀಯ ಸ್ಪರ್ಶಗಳಿಂದ ದೂರವಾಗುತ್ತಿದ್ದೇವೆ ಎಂದು ಗದಗಿನ ರಾಮಕೃಷ್ಣ ವಿವೇಕಾನಂದ ಆಶ್ರಮ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಹಾರಾಜ್ ನುಡಿದರು.ತಾಲೂಕಿನ ಸಂತೇಮುದ್ದಾಪುರ ಸಮೀಪದ ಸಂಜೀವ ಮೂರ್ತಿ ಬೇಡಿ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಮೂರನೇ ವರ್ಷದ ಹನುಮ ಮಹೋತ್ಸವ ಹಾಗೂ ಧರ್ಮ ಜನಜಾಗೃತಿ ಸಮಾವೇಶದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಂಜೀವ ಮೂರ್ತಿ ಬೇಡಿ ಆಂಜನೇಯ ಸ್ವಾಮಿ ಮೂರ್ತಿ ವಿಶೇಷವಾಗಿದೆ. ದೇಶದಲ್ಲೇ ಅಪರೂಪದ ವಿಗ್ರಹ ಇದಾಗಿದೆ. ಇದನ್ನು ಪತ್ತೆಹಚ್ಚಿ ಕಳೆದ ಮೂರು ವರ್ಷಗಳಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಸಾವಿರಾರು ಭಕ್ತರು ಮಾಲಾಧಾರಿಗಳಾಗಿರುವುದು ಸಂತಸ ತಂದಿದೆ ಎಂದರು.ದೇವಾಲಯ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕ್ ಮನೋಹರ್ ಮಠದ್ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸಂತೇಮುದ್ದಾಪುರದ ಬೇಡಿ ಆಂಜನೇಯ ಸ್ವಾಮಿ ಇರುವ ವಿಗ್ರಹ ಸ್ಥಳವು ವಾಣಿಜ್ಯ ಕೇಂದ್ರವಾಗಿತ್ತು. ಅವನತಿಯ ನಂತರ ಜನಜೀವನ ಸಂಕಷ್ಟಕ್ಕೆ ಒಳಗಾದಾಗ ಜನರು ಹಂತ ಹಂತವಾಗಿ ಈ ಗ್ರಾಮವನ್ನು ತೊರೆದರು. ಇದರಿಂದ ಇಡೀ ಗ್ರಾಮವೇ ಬಯಲಾಗಿತ್ತು. ಆದರೆ, ವಿಗ್ರಹ ಮಾತ್ರ ಅಲ್ಲಿಯೇ ಉಳಿದು, ಬೇಲಿಯಲ್ಲಿ ಮುಚ್ಚಿಹೋಗಿತ್ತು. ಈ ಭಾಗದ ಸತೀಶ್, ಪ್ರಕಾಶ್ ಸೇರಿ ಕೆಲವರು ವಿಗ್ರಹ ಪತ್ತೆ ಹಚ್ಚಿ ಬೆಳಕಿಗೆ ತಂದಿರುವುದು ಶ್ಲಾಘನಿಯ. ದೇವಸ್ಥಾನದ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳಿಗೆ ಅನುಕೂಲವಾಗುವ ಉದ್ದೇಶದಿಂದ ಶಾಲೆ ತೆರೆದು ಶಿಕ್ಷಣ ನೀಡಲಾಗುವುದು ಎಂದರು.
ಬಿದರಕೆರೆ ಗುರುಸಿದ್ದೇಶ್ವರ ಗದ್ದಿಗೆ ಬೃಹನ್ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಸಮಿತಿ ಅಧ್ಯಕ್ಷ ಬಿದರಕೆರೆ ಬಸವರಾಜ್, ದೇವಸ್ಥಾನಗಳ ಸಂವರ್ಧನ ಸಮಿತಿ ರಾಜ್ಯ ಸಂಯೋಜಕ ಮುನಿಯಪ್ಪಾಜೀ, ಮಾಜಿ ಶಾಸಕ ಎಚ್.ಪಿ. ರಾಜೇಶ್, ಬೇಡಿ ಆಂಜನೇಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿದರಕೆರೆ ಪ್ರಕಾಶ್ ಮತ್ತಿತರ ಗಣ್ಯರು ಇದ್ದರು.- - - -13ಜೆಜಿಎಲ್1:
ಸಮಾವೇಶಕ್ಕೆ ಗದಗಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಹಾರಾಜ್ ಚಾಲನೆ ನೀಡಿದರು.