(ಮಿಡ್ಲ್‌..)ಮಹಿಳೆ ಆರ್ಥಿಕ ಸಬಲತೆಗೆ ಸಂಜೀವಿನಿ ಸಂತೆ

| Published : Oct 22 2024, 12:13 AM IST

ಸಾರಾಂಶ

ಹುಲಸೂರು ತಾಲೂಕಿನ ಬೇಲೂರು ಗ್ರಾಮದಲ್ಲಿ ಇತ್ತಿಚೆಗೆ ಸಂಜೀವಿನಿ ಮಾಸಿಕ ಸಂತೆ ಮಾರಾಟ ಮತ್ತು ಪ್ರದರ್ಶನ ಆಯೋಜಿಸಲಾಗಿತ್ತು.

ಕನ್ನಡ ಪ್ರಭ ವಾರ್ತೆ, ಹುಲಸೂರ

ಗ್ರಾಮೀಣ ಭಾಗದಲ್ಲಿರುವ ಸ್ವಸಹಾಯ ಸಂಘದ ಮಹಿಳೆಯರು ಸ್ಥಳೀಯವಾಗಿ ಉತ್ಪಾದಿಸಿದ ಉತ್ಪನ್ನಗಳ ಸೂಕ್ತ ಮಾರಾಟಕ್ಕಾಗಿ ಪ್ರೋತ್ಸಾಹ ನೀಡುವುದು. ಸಂಘದ ಸದಸ್ಯರ ಆದಾಯವನ್ನು ಹೆಚ್ಚಿಸಿ ಆರ್ಥಿಕವಾಗಿ ಅವರನ್ನು ಸಬಲಗೊಳಿಸುವುದು ಸಂಜೀವಿನಿ ಮಾಸಿಕ ಸಂತೆಯ ಉದ್ದೇಶವಾಗಿದೆ ಎಂದು ಇಲ್ಲಿನ ತಾಪಂ ಅಧಿಕಾರಿ ವೈಜಣ್ಣ ಫುಲೆ ಹೇಳಿದರು.

ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಹುಲಸೂರ ತಾಪಂ ಸಹಕಾರದೊಂದಿಗೆ ತಾಲ್ಲೂಕಿನ ಬೇಲೂರ ಗ್ರಾಮದಲ್ಲಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟವು ಇತ್ತೀಚೆಗೆ ಆಯೋಜಿಸಿದ್ದ ‘ಸಂಜೀವಿನಿ ಮಾಸಿಕ ಸಂತೆ ಮಾರಾಟ ಮತ್ತು ಪ್ರದರ್ಶನ’ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಮಹಿಳೆಯರಿಗೆ ಆರ್ಥಿಕವಾಗಿ ಸಶಕ್ತಗೊಳಿಸಲು ಈ ಸಂಜೀವಿನಿ ಮಾಸಿಕ ಸಂತೆಯು ಪೂರಕವಾಗಿದೆ. ಮಹಿಳೆಯರು ಯೋಜನೆಯ ಲಾಭ ಪಡೆದುಕೊಂಡು ಸ್ವಾವಲಂಬಿಯಾಗಬೇಕು. ಗ್ರಾಹಕರು ಕೂಡ ವಿದೇಶಿ ವಸ್ತುಗಳ ಖರೀದಿಗೆ ಮೊರೆ ಹೋಗದೆ ಮಹಿಳಾ ಸಂಘದವರು ಸ್ಥಳೀಯವಾಗಿ ಉತ್ಪಾದಿಸಿದ ಉತ್ಪನ್ನಗಳನ್ನು ಖರೀದಿಸಿ ಇಂತಹ ಮಾಸಿಕ ಸಂತೆಗಳ ಬಲವರ್ಧನೆಗೆ ಕೈಜೋಡಿಸಬೇಕು ಎಂದರು.

ಬೇಲೂರ ಗ್ರಾಪಂ ಪಿಡಿಒ ಬಸಪ್ಪಾ ರೂಗಿ ಮಾತನಾಡಿ, ಸಂಜೀವಿನಿ ಯೋಜನೆಯಲ್ಲಿ ಮಹಿಳೆಯರಿಗೋಸ್ಕರ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ಪ್ರಾಸ್ತಾವಿಕ ಮಾತನಾಡಿದರು. ತಾ.ಪಂ. ಸಹಾಯಕ ನಿರ್ದೇಶಕ ಮಹಾದೇವ ಜಮ್ಮು, ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಒಕ್ಕೂಟದ ಅಧ್ಯಕ್ಷರು, ಸದಸ್ಯರು ಇದ್ದರು.